ತಾಲೂಕಿನ ಎಲ್ಲ ಸರ್ಕಾರಿ ಕಚೇರಿ, ಅನುದಾನಿತ, ಅನುದಾನ ರಹಿತ ಶಾಲಾ- ಕಾಲೇಜಗಳಲ್ಲಿ, ಗ್ರಾಮ ಪಂಚಾಯಿತಿ, ಬ್ಯಾಂಕ್‌ಗಳಲ್ಲಿಯೂ ಶ್ರದ್ಧಾ ಭಕ್ತಿಯೊಂದಿಗೆ ಸಂತ ಸೇವಾಲಾಲ್ ಜಯಂತಿ ಕಡ್ಡಾಯವಾಗಿ ಆಚರಿಸಬೇಕು.
ಶಿರಹಟ್ಟಿ: ತಾಲೂಕು ಆಡಳಿತದ ವತಿಯಿಂದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಆಚರಿಸುವ ಪ್ರತಿಯೊಬ್ಬ ಮಹನೀಯರ ಜಯಂತಿ ಆಚರಣೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಬೇಕು. ಯಾವ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಾರೊ ಅವರಿಗೆ ನೋಟಿಸ್ ನೀಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಖಡಕ್ ಸೂಚಿಸಿದರು.ಸಂತ ಸೇವಾಲಾಲ್ ಜಯಂತಿ ಕುರಿತು ತಹಸೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
೨೮ ಇಲಾಖೆ ಅಧಿಕಾರಿಗಳ ಪೈಕಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದು, ಅಬಕಾರಿ, ಸಾರಿಗೆ ಇಲಾಖೆ, ಹೆಸ್ಕಾಂ, ರೇಷ್ಮೆ, ನಿರ್ಮಿತಿ ಕೇಂದ್ರ, ಭೂಸೇನಾ ನಿಗಮದ ಅಧಿಕಾರಿಗಳು ಸಭೆಗೆ ಬಂದಿಲ್ಲ. ಇವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.ಜಾತ್ಯತೀತ ಮತ್ತು ಪಕ್ಷಾತೀತವಾಗಿ ಮಹನೀಯರ ಜಯಂತಿ ಆಚರಣೆ ಮಾಡಿದಾಗ ಮಾತ್ರ ಸಾರ್ಥಕವಾಗುತ್ತದೆ. ಅಬಕಾರಿ ಇಲಾಖೆ, ನಿರ್ಮಿತಿ ಕೇಂದ್ರ, ಭೂಸೇನಾ ನಿಗಮದ ಅಧಿಕಾರಿಗಳು ಯಾವೊಂದು ಜಯಂತಿಯ ಪೂರ್ವಭಾವಿ ಸಭೆಗೂ ಬರುವುದಿಲ್ಲ. ಇವರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಿದರು. ಸರ್ಕಾರದ ವತಿಯಿಂದ ಆಚರಿಸಲಾಗುವ ಮಹನೀಯರ ಜಯಂತಿಗಳ ಬಗ್ಗೆ ಸಾರ್ವಜನಿಕರಲ್ಲಿ ವಿರೋಧ ಹಾಗೂ ಚರ್ಚೆಗಳು ನಡೆಯುತ್ತಿವೆ. ಎಲ್ಲ ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಕ್ರಮ ವಹಿಸಬೇಕು ಎಂದರು.ತಾಲೂಕು ಆಡಳಿತದ ವತಿಯಿಂದ ಸಂತ ಸೇವಾಲಾಲ್ ಜಯಂತ್ಯುತ್ಸವ ಕಾರ್ಯಕ್ರಮ ಫೆ. ೧೫ರಂದು ಬೆಳಗ್ಗೆ ೧೧ ಗಂಟೆಗೆ ತಹಸೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಎಲ್ಲರೂ ಪಾಲ್ಗೊಳ್ಳಬೇಕು.
ತಾಲೂಕಿನ ಎಲ್ಲ ಸರ್ಕಾರಿ ಕಚೇರಿ, ಅನುದಾನಿತ, ಅನುದಾನ ರಹಿತ ಶಾಲಾ- ಕಾಲೇಜಗಳಲ್ಲಿ, ಗ್ರಾಮ ಪಂಚಾಯಿತಿ, ಬ್ಯಾಂಕ್‌ಗಳಲ್ಲಿಯೂ ಶ್ರದ್ಧಾ ಭಕ್ತಿಯೊಂದಿಗೆ ಸಂತ ಸೇವಾಲಾಲ್ ಜಯಂತಿ ಕಡ್ಡಾಯವಾಗಿ ಆಚರಿಸಬೇಕು. ಅಂದು ಎಲ್ಲ ಇಲಾಖೆಯಲ್ಲಿಯೂ ಕಡ್ಡಾಯವಾಗಿ ಜಯಂತಿ ಆಚರಣೆ ಮಾಡಬೇಕು. ಶರಣರ, ಸಂತರ, ದಾರ್ಶನಿಕರ, ಮಹನಿಯರ ಜಯಂತಿಗಳು ಕೇವಲ ಅವರವರ ಜಾತಿಗಳಿಗೆ ಮಾತ್ರ ಸೀಮಿತವಾಗುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಎಲ್ಲರೂ ಒಗ್ಗೂಡಿ ಆಚರಣೆ ಮಾಡಬೇಕು ಎಂದರು.
ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ತಾಪಂ ಇಒ ರಾಮಣ್ಣ ದೊಡ್ಡಮನಿ, ಸಮಾಜ ಕಲ್ಯಾಣ ಇಲಾಖೆಯ ಗೋಪಾಲ ಲಮಾಣಿ, ಮುಖಂಡ ಜಾನು ಲಮಾಣಿ, ಈರಣ್ಣ ಚವ್ಹಾಣ, ನಾಗರಾಜ ಲಕ್ಕುಂಡಿ, ಶಂಕರ ಮರಾಠೆ, ರಾಜು ಶಿರಹಟ್ಟಿ, ತಿಪ್ಪಣ್ಣ ಲಮಾಣಿ, ಶಿವನಗೌಡ ಪಾಟೀಲ, ಬಸವರಾಜ ಪೂಜಾರ, ಖಜಾನೆ ಇಲಾಖೆ ಅಧಿಕಾರಿ ಶಿವಪ್ಪ ಹದ್ಲಿ, ಎಂ.ಎಸ್. ಸಂಕನೂರ, ಮರಿಗೌಡ ಸುರಕೋಡ, ರಾಮಪ್ಪ ಪೂಜಾರ, ಶಿವಕುಮಾರ ಕಾಶಪ್ಪನವರ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.