ಬೀಜ, ಗೊಬ್ಬರ ಮಾರಾಟದಲ್ಲಿ ಅಕ್ರಮವಾದರೆ ಕ್ರಮ

KannadaprabhaNewsNetwork |  
Published : May 27, 2025, 12:01 AM ISTUpdated : May 27, 2025, 12:02 AM IST
೨೬ಬಿಎಸ್ವಿ೦೧- ಬಸವನಬಾಗೇವಾಡಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಅಖಂಡ ಬಸವನಬಾಗೇವಾಡಿ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆ ಜರುಗಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಸರ್ಕಾರದ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಗೊಬ್ಬರ, ಬೀಜ, ಕೀಟನಾಶಕ ಮಾರಾಟ ಮಾಡುವುದು ಕಂಡುಬಂದರೆ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಕೃತಕ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಜೊತೆಗೆ ರೈತ ಬಾಂಧವರಿಗೆ ಅನ್ಯಾಯವಾಗದಂತೆ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಚ್.ಯರಝರಿ ಸೂಚನೆ ನೀಡಿದರು

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಸರ್ಕಾರದ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಗೊಬ್ಬರ, ಬೀಜ, ಕೀಟನಾಶಕ ಮಾರಾಟ ಮಾಡುವುದು ಕಂಡುಬಂದರೆ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಕೃತಕ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಜೊತೆಗೆ ರೈತ ಬಾಂಧವರಿಗೆ ಅನ್ಯಾಯವಾಗದಂತೆ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಚ್.ಯರಝರಿ ಸೂಚನೆ ನೀಡಿದರು.

ಪಟ್ಟಣದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆ ನಡೆಸಿ ನಿರ್ದೇಶನಗಳನ್ನು ನೀಡಿದರು. ಸಭೆಯಲ್ಲಿ ಮಾತನಾಡಿದ ಅವರು, ಬೀಜ ಮತ್ತು ರಸಗೊಬ್ಬರ, ಕೀಟನಾಶಕ ಮಾರಾಟಗಾರರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವಂತಿಲ್ಲ. ಯಾವುದೇ ಕಾರಣಕ್ಕೂ ನೋಂದಣಿಯಾಗದ ಹಾಗೂ ಕಳಪೆ ಬೀಜ, ಗೊಬ್ಬರ, ಕೀಟನಾಶಕ ಸಹ ಮಾರಾಟ ಮಾಡುವಂತಿಲ್ಲ. ತಮ್ಮ ಅಂಗಡಿಗಳಿಗೆ ಬರುವ ರೈತ ಬಾಂಧವರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಸಕಾರಾತ್ಮಕತೆಯಿಂದ ಸ್ಪಂದಿಸಬೇಕು. ಡಿಎಪಿ ಗೊಬ್ಬರ ಕೊರತೆಯಾದರೆ ಇದಕ್ಕೆ ಸಮಾನವಾದ ಗೊಬ್ಬರವನ್ನು ಬಳಕೆ ಮಾಡುವದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಲಘು ಪೋಷಕಾಂಶಗಳಾದ ಜಿಂಕ್, ಬೋರಾನ್, ಐರಾನ್, ಮ್ಯಾಂಗನೀಸ್ ಬಳಕೆ ಮಾಡುವುದು ಸೇರಿದಂತೆ ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ರೈತರಿಗೆ ತಿಳಿಸಿ ಹೇಳುವಂತೆ ಸೂಚನೆ ನೀಡಿದರು.ರೈತ ಬಾಂಧವರಿಗೆ ಅನುಕೂಲವಾಗುವಂತೆ ಪ್ರತಿ ಬೀಜ, ಗೊಬ್ಬರ, ಕೀಟನಾಶಕಗಳ ದರ ಪಟ್ಟಿಯನ್ನು ತಮ್ಮ ತಮ್ಮ ಅಂಗಡಿಗಳಲ್ಲಿ ಕಡ್ಡಾಯವಾಗಿ ಹಾಕಬೇಕು. ದಾಸ್ತಾನು ರಜಿಸ್ಟರ್ ಮಾಡುವುದು ಕಡ್ಡಾಯವಾಗಿಡಬೇಕು. ರಜಿಸ್ಟರ್‌ನಲ್ಲಿರುವ ದಾಸ್ತಾನಕ್ಕೂ ಭೌತಿಕ ದಾಸ್ತಾನಕ್ಕೂ ಸರಿ ಹೊಂದುವಂತಿರಬೇಕು. ಕಡ್ಡಾಯವಾಗಿ ಪಾಯಿಂಟ್ ಆಪ್ ಸೇಲ್ ಮಶೀನ್(ಪಾಸ್ ಮಶೀನ) ಬಳಕೆ ಮಾಡಿ ಮಾರಾಟ ಮಾಡಬೇಕು. ರೈತರ ಸಹಿ ಪಡೆದು ಅವರಿಗೆ ಕಡ್ಡಾಯವಾಗಿ ರಶೀದಿ ಕೊಡಬೇಕು. ರಸಗೊಬ್ಬರ ನಿಯಂತ್ರಣ ಆದೇಶ, ಬೀಜ ಕಾಯ್ದೆ ಮತ್ತು ನಿಯಮಗಳು ಸೇರಿದಂತೆ ಕೃಷಿ ಪರಿಕರ ಮಾರಾಟಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ಪಾಲನೆ ಮಾಡುವ ಮೂಲಕ ಮಾರಾಟಗಾರರು ತಮ್ಮ ವಹಿವಾಟು ನಡೆಸುವಂತೆ ತಿಳಿಸಿದರು.

ಬಸವನಬಾಗೇವಾಡಿ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಅಶೋಕ ಕಲ್ಲೂರ ಮಾತನಾಡಿ, ಸರ್ಕಾರ ನಿಗದಿ ಪಡಿಸಿದ ನಿಯಮಗಳಂತೆ ನಮ್ಮವರು ವಹಿವಾಟು ಮಾಡುತ್ತಾರೆ. ಇಲ್ಲಿನ ಕೃಷಿ ಇಲಾಖೆಯ ಎಲ್ಲ ಅಧಿಕಾರಿಗಳು ನಮಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ರೈತ ಬಾಂಧವರಿಗೆ ತೊಂದರೆಯಾಗದಂತೆ ನಾವು ನಮ್ಮ ವ್ಯಾಪಾರ ವಹಿವಾಟು ಮಾಡುತ್ತೇವೆ ಎಂದು ಭರವಸೆ ನೀಡಿದರು.ನಿಡಗುಂದಿ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಶಿವಯೋಗಪ್ಪ ಚಟ್ಟೇರ ಮಾತನಾಡಿದರು. ಕೃಷಿ ಅಧಿಕಾರಿ ಚಿದಾನಂದ ಹಿರೇಮಠ ಕೃಷಿ ಪರಿಕರ ಅಂಗಡಿ ಲೈಸನ್ಸ್ ಪಡೆಯುವದು, ನವೀಕರಣ, ಬೇರೆಡೆ ಸ್ಥಳಾಂತರ ಮಾಡುವದು, ಸೇರಿದಂತೆ ವಿವಿಧ ಮಾಹಿತಿಗಳನ್ನು ನೀಡಿದರು.ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಾದ ಗಾಯತ್ರಿ ಸಿಂಧೆ, ಪ್ರಭುಗೌಡ ಕೋರದಳ್ಳಿ, ಎಂ.ಕೆ.ಪುರೋಹಿತ, ಎನ್.ಟಿ.ಗೌಡರ, ಭೀಮಾಶಂಕರ ಕುಂಬಾರ, ಕೃಷಿ ಪರಿಕರ ಮಾರಾಟಗಾರರಾದ ಶಿವಾನಂದ ಸಜ್ಜನ, ಮಲ್ಲು ಗುಡದಿನ್ನಿ, ಸಂಗಮೇಶ ಉಳ್ಳಾಗಡ್ಡಿ, ಬಸವರಾಜ ಬಾಗೇವಾಡಿ, ಅಶೋಕ ಹುಂಡೇಕಾರ, ಗಿರೀಶ ಬ್ಯಾಕೋಡ, ರಾಚಣ್ಣ ಬೆಳ್ಳುಬ್ಬಿ ಇತರರು ಭಾಗವಹಿಸಿದ್ದರು. ಕೃಷಿ ಅಧಿಕಾರಿ ಚಿದಾನಂದ ಹಿರೇಮಠ ಸ್ವಾಗತಿಸಿ, ನಿರೂಪಿಸಿದರು.

-----

ಬಾಕ್ಸ್‌

ಲೈಸೆನ್ಸ್‌ ರದ್ದು ಮಾಡುವ ಎಚ್ಚರಿಕೆ

ಇತ್ತೀಚೆಗೆ ಗುಣ ನಿಯಂತ್ರಣ ಕುರಿತು ವಿವಿಧ ತಂಡಗಳು ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿ ಪರಿಶೀಲನೆ ಮಾಡಿದಾಗ ಸುಮಾರು ೪೦ ಅಂಗಡಿಗಳಲ್ಲಿ ನ್ಯೂನ್ಯತೆಗಳು ಕಂಡು ಬಂದಿವೆ. ಆ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ನೋಟಿಸ್ ನೀಡಲಾಗಿದೆ. ನೋಟಿಸ್ ಪಡೆದ ಮಾರಾಟಗಾರರು ಬರುವ ಮೇ ೨೮ ರೊಳಗೆ ತಮ್ಮ ಅಂಗಡಿಗಳಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ಕಚೇರಿಗೆ ಮಾಹಿತಿ ನೀಡಬೇಕು. ಒಂದು ವೇಳೆ ಬುಧವಾರದೊಳಗೆ ನ್ಯೂನತೆಗಳನ್ನು ಸರಿಪಡಿಸಿಕೊಳ್ಳದೇ ಹೋದರೆ ಅಂತಹ ಅಂಗಡಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ಮಾರಾಟಗಾರರ ಲೈಸನ್ಸ್ ಅಮಾನತು ಇಲ್ಲವೇ ರದ್ದು ಪಡಿಸಲಾಗುವುದು ಎಂದು ಎಂ.ಎಚ್.ಯರಝರಿ ಎಚ್ಚರಿಕೆಯನ್ನು ನೀಡಿದರು.

PREV

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ