ಧರ್ಮಸ್ಥಳ ವಿರೋಧಿ ಬುರುಡೆ ಟೀಂ ಲೀಡರ್‌ ತಿಮರೋಡಿ ಗಡೀಪಾರು

KannadaprabhaNewsNetwork |  
Published : Sep 24, 2025, 02:10 AM IST
ಮಹೇಶ್‌ ಶೆಟ್ಟಿ ತಿಮರೋಡಿ | Kannada Prabha

ಸಾರಾಂಶ

ಕಾನೂನುಗಳ ಉಲ್ಲಂಘನೆ, ಅಶಾಂತಿ ಸೃಷ್ಟಿ, ಸಮಾಜದಲ್ಲಿ ಅಸ್ಥಿರತೆ ಉಂಟು ಮಾಡುವ ಚಟುವಟಿಕೆಗಳಲ್ಲಿ ಭಾಗಿ, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದು ಸೇರಿ ಸುಮಾರು 32 ಪ್ರಕರಣಗಳನ್ನು ಎದುರಿಸುತ್ತಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷ ಕಾಲ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಿ ಪುತ್ತೂರು ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ ತಿಮರೋಡಿ ನಾಪತ್ತೆಯಾಗಿದ್ದಾರೆ.

- ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿಗೆ 1 ವರ್ಷ ಎತ್ತಂಗಡಿ- ಪುತ್ತೂರು ಉಪವಿಭಾಗಾಧಿಕಾರಿ ಆದೇಶ । ಬೆನ್ನಲ್ಲೇ ತಿಮರೋಡಿ ನಾಪತ್ತೆ

---

ಗಡೀಪಾರು ಏಕೆ?

1.ಸೌಜನ್ಯ ಪರ ಹೋರಾಟದ ಹೆಸರಿನಲ್ಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರದ ಅಭಿಯಾನವನ್ನೇ ನಡೆಸಿದ್ದು2. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತ ಆರೋಪ ಮಾಡಿ ಬಂಧನದಲ್ಲಿರುವ ಚಿನ್ನಯ್ಯಗೆ ಆಶ್ರಯ ನೀಡಿದ್ದು3. ಬುರುಡೆ ಕೇಸ್‌ ತನಿಖೆಯ ವೇಳೆ ಬಿಜೆಪಿಯ ಸಂತೋಷ್‌ ಅವರಿಗೆ ನಿಂದನೆ ಸೇರಿ ಹಲವು ಪ್ರಕರಣ ದಾಖಲಾಗಿದ್ದು4. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಹಾಗೂ ಮನೆಯಲ್ಲಿಯೇ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದು ಪತ್ತೆಯಾಗಿದ್ದು

5. ಬುರುಡೆಮ್ಯಾನ್‌ ಚಿನ್ನಯ್ಯ ಜತೆಗಿನ ವಿಡಿಯೋಗಳನ್ನು ಸರಣಿಯಾಗಿ ಹೊರಬಿಡುವ ಮೂಲಕ ದಾರಿ ತಪ್ಪಿಸಲೆತ್ನಿಸಿದ್ದು6. ಮುಂದಿನ ದಿನಗಳಲ್ಲಿ ಕಾನೂನು-ಸುವ್ಯವಸ್ಥೆಗೆ ಮತ್ತಷ್ಟು ಧಕ್ಕೆ ಉಂಟು ಮಾಡಬಹುದು ಎಂಬ ಪೊಲೀಸರ ವರದಿ

--

ಮುಂದೇನು?

- ಪುತ್ತೂರು ಉಪವಿಭಾಗಾಧಿಕಾರಿ ಹೊರಡಿಸಿರುವ ಆದೇಶವನ್ನು ತಿಮರೋಡಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು- ಗಡೀಪಾರು ಆದೇಶಕ್ಕೆ ಹೈಕೋರ್ಟ್‌ ತಡೆಯೊಡ್ಡಿದರೆ ಅಥವಾ ರದ್ದುಗೊಳಿಸಿದರೆ ಮಹೇಶ್‌ ತಿಮರೋಡಿ ಪಾರು- ಇಲ್ಲದೆ ಹೋದರೆ ಗಡೀಪಾರು ಆದೇಶದಂತೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಇನ್ನು 1 ವರ್ಷ ಇರಬೇಕು- ಪೊಲೀಸರು ಅಥವಾ ಕೋರ್ಟ್‌ ನೋಟಿಸ್‌ ಇದ್ದಾಗ ಮಾತ್ರ ದಕ್ಷಿಣ ಕನ್ನಡ ಜಿಲ್ಲೆಗೆ ತಿಮರೋಡಿ ಪ್ರವೇಶಿಸಬಹುದು

--

ಎಲ್ಲರಿಗಿಂತ ಮೊದಲೇ

ತಿಳಿಯುವುದು ಇಲ್ಲೇ!

ಮಹೇಶ್‌ ತಿಮರೋಡಿಗೆ ಗಡೀಪಾರು ಸಂಕಷ್ಟ ಎದುರಾಗಿರುವ ಕುರಿತು ‘ಕನ್ನಡಪ್ರಭ’ ಆ.30ರಂದೇ ವರದಿ ಮಾಡಿತ್ತು.

--

ಕನ್ನಡಪ್ರಭ ವಾರ್ತೆ ಮಂಗಳೂರು/ ಪುತ್ತೂರು

ಕಾನೂನುಗಳ ಉಲ್ಲಂಘನೆ, ಅಶಾಂತಿ ಸೃಷ್ಟಿ, ಸಮಾಜದಲ್ಲಿ ಅಸ್ಥಿರತೆ ಉಂಟು ಮಾಡುವ ಚಟುವಟಿಕೆಗಳಲ್ಲಿ ಭಾಗಿ, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದು ಸೇರಿ ಸುಮಾರು 32 ಪ್ರಕರಣಗಳನ್ನು ಎದುರಿಸುತ್ತಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷ ಕಾಲ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಿ ಪುತ್ತೂರು ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ ತಿಮರೋಡಿ ನಾಪತ್ತೆಯಾಗಿದ್ದಾರೆ.

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ ವಿಚಾರಣೆಯ ಹಂತದಲ್ಲಿದ್ದು, ಬುರುಡೆ ತಂಡದ ನಾಯಕ ತಿಮರೋಡಿ ವಿರುದ್ಧ ಹೆಚ್ಚಿನ ಪ್ರಕರಣ ದಾಖಲಾದ ಕಾರಣ ತುರ್ತು ಗಡೀಪಾರಿಗೆ ಆದೇಶ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ತಿಮರೋಡಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ 32 ಪ್ರಕರಣಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆಗೆ ಅವರು ತೊಂದರೆ ಮಾಡಬಹುದು ಎಂಬುದಾಗಿ ಬೆಳ್ತಂಗಡಿ ಪೊಲೀಸರು ಪುತ್ತೂರು ಸಹಾಯಕ ಕಮಿಷನರ್‌ಗೆ ವರದಿ ನೀಡಿದ್ದರು. ಈ ವರದಿ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ಮೇರಿಸ್‌ ಅವರು ಗಡೀಪಾರು ಮಾಡಿ ಆದೇಶ ಮಾಡಿದ್ದಾರೆ. ಸೆ.20ರಿಂದ ಆರಂಭವಾಗಿ ಒಂದು ವರ್ಷ ಕಾಲ ಇದು ಜಾರಿಯಲ್ಲಿ ಇರುತ್ತದೆ. ಆದೇಶದ ಪ್ರಕಾರ, ಪೊಲೀಸರು ಅಥವಾ ನ್ಯಾಯಾಲಯದ ನೋಟಿಸ್‌ ಇದ್ದಾಗ ಮಾತ್ರ ದಕ್ಷಿಣ ಕನ್ನಡ ಜಿಲ್ಲೆಯ ಪ್ರವೇಶಕ್ಕೆ ತಿಮರೋಡಿಗೆ ಅನುಮತಿ ಇರುತ್ತದೆ. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡುವ ಅವಕಾಶ ಕೂಡ ಇರುತ್ತದೆ.

ಧರ್ಮಸ್ಥಳ ವಿರುದ್ಧ ಹೋರಾಟ:

ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಅಧ್ಯಕ್ಷರಾಗಿ ತಿಮರೋಡಿ ಗುರುತಿಸಿಕೊಂಡಿದ್ದು, ಧರ್ಮಸ್ಥಳ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಸೌಜನ್ಯ ಪ್ರಕರಣದಲ್ಲಿ ಆರೋಪಿಯೆಂದು ಗುರುತಿಸಲಾಗಿದ್ದ ಸಂತೋಷ್‌ ರಾವ್‌ ಖುಲಾಸೆಗೊಂಡ ಬಳಿಕ ಇಡೀ ರಾಜ್ಯದಲ್ಲಿ ಪ್ರತಿಭಟನೆ ಕಾರ್ಯಕ್ರಮ ನಡೆಸಿ, ಸಾವಿರಾರು ಜನರು ಸೌಜನ್ಯ ಪರ ಅಭಿಯಾನ ಮಾಡುವಂತೆ ಮುಂದಾಳತ್ವ ವಹಿಸಿದ್ದರು.

ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳನ್ನು ಹೂತ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯನಿಗೆ ಆಶ್ರಯ ಕೊಟ್ಟಿರುವುದು, ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ವಿರುದ್ಧ ಅವಮಾನಕರ ಹೇಳಿಕೆ ನೀಡಿರುವುದು ಸೇರಿ ಕಳೆದ ಎರಡು ತಿಂಗಳಲ್ಲಿ ತಿಮರೋಡಿ ವಿರುದ್ಧ ಐದಾರು ಎಫ್‌ಐಆ‌ರ್ ದಾಖಲಾಗಿದ್ದವು. ಸಂತೋಷ್ ವಿರುದ್ಧ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಿ, ಒಂದು ದಿನ ಜೈಲಿನಲ್ಲಿ ಇರಿಸಲಾಗಿತ್ತು.ಗಡೀಪಾರಿಗೆ ತುರ್ತು ಆದೇಶ- ಎಸ್ಪಿ:

ಗಡೀಪಾರು ಪ್ರಕ್ರಿಯೆ ನಡೆಯುತ್ತಿರುವಾಗಲೇ ತಿಮರೋಡಿ ವಿರುದ್ಧ ಮತ್ತೆ ವಿವಿಧ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ತುರ್ತಾಗಿ ಗಡೀಪಾರು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಡಾ.ಅರುಣ್‌ ಕುಮಾರ್‌ ತಿಳಿಸಿದ್ದಾರೆ. ಅಲ್ಲದೆ, ಎಲ್ಲಿಗೆ ಗಡೀಪಾರು ಮಾಡಬೇಕು ಎಂಬುದು ಪೊಲೀಸರ ವಿವೇಚನೆಗೆ ಬಿಟ್ಟದ್ದು ಎಂದು ಅವರು ಹೇಳಿದರು.

ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿಗಾರ, ಕ್ಯಾಮೆರಾಮೆನ್‌ ಮೇಲೆ ಹಲ್ಲೆ ಸೇರಿದಂತೆ ಐದು ಪ್ರಕರಣಗಳು ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿವೆ. ನೂರಕ್ಕೂ ಅಧಿಕ ಮಂದಿ ಸೇರಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ದೊಂಬಿ ಎಬ್ಬಿಸಿದ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದರು.

ಯೂಟ್ಯೂಬ್‌ನಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಚರಣ್‌ ಎಂಬುವರ ದೂರಿನ ಮೇರೆಗೆ ಕೇಸು ದಾಖಲಾಗಿತ್ತು. ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಿಕ್ಕಿದ ಹಿನ್ನೆಲೆಯಲ್ಲಿ ಎಸ್‌ಐಟಿ ಎಸ್ಪಿ ಸೈಮನ್‌ ದೂರಿನಡಿ ಕೂಡ ಕೇಸು ದಾಖಲಾಗಿತ್ತು. ಬ್ರಹ್ಮಾವರ ಪೊಲೀಸ್‌ ಠಾಣೆಯ ಪ್ರಕರಣ ಮತ್ತು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ದಸ್ತಗಿರಿ ಮಾಡಲು ಬಂದಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ