ಹಾನಗಲ್ಲ: ಸನಾತನ ಹಿಂದೂ ಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅನಾದಿ ಕಾಲದಿಂದಲೂ ಗೋಮಾತೆಯನ್ನು ತಾಯಿಯಂತೆ ಭಾವಿಸಿ ಪೂಜಿಸುತ್ತ ಬಂದಿದ್ದಾರೆ. ಇಂತಹ ಧಾರ್ಮಿಕ ನಾಡಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಚಟುವಟಿಕೆ ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಹಿಂದೂ ಜಾಗರಣಾ ವೇದಿಕೆಯ ಉತ್ತರ ಪ್ರಾಂತದ ಸಹ ಸಂಯೋಜಕ ಶ್ರೀಕಾಂತ ಹೊಸಕೇರಾ ಹೇಳಿದರು.
ಇತ್ತೀಚೇಗೆ ಅಕ್ಕಿಆಲೂರಿನಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿದಾಗ ಅಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 900 ಕೆಜಿಗಳಷ್ಟು ಗೋವಿನ ಕೊಬ್ಬಿನ ಎಣ್ಣೆ ಪತ್ತೆಯಾಗಿದೆ. ಅಂತಹ ದ್ರೋಹಿಗಳ ವಿರುದ್ಧ ಹತ್ತಾರು ಪ್ರಕರಣಗಳು ದಾಖಲಾಗಿದ್ದರೂ ಸಹ ಏನು ಪ್ರಯೋಜನವಾಗಿಲ್ಲ. ಗೋಹತ್ಯೆ ನಿರಂತರವಾಗಿ ನಡೆದಿದೆ. ಈ ಪ್ರತಿಭಟನೆ ಕೇವಲ ನಮ್ಮ ಕೂಗಲ್ಲ, ಎಲ್ಲರ ಜವಾಬ್ದಾರಿ ಕೂಡ ಆಗಿದೆ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಅಕ್ರಮ ಗೋವು ಸಾಗಾಣಿಕೆ, ಅಕ್ರಮ ಗೋಹತ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದರು.
ವಿರಕ್ತಮಠದ ಶಿವಬಸವ ಶ್ರೀಗಳು ಆಶೀರ್ವಚನ ನೀಡಿ, ನಾಡಿನ ಮಠಮಾನ್ಯಗಳು ಹಿಂದೂ ಧರ್ಮದ ಸಂಪ್ರದಾಯಾಚರಣೆ ಪಾಲಿಸಿ ಪೋಷಿಸುವ ಕಾರ್ಯದಲ್ಲಿ ತೊಡಗಿವೆ. ಅಕ್ರಮ ಗೋಹತ್ಯೆ, ದೇಶಿ ಗೋವುಗಳ ರಕ್ಷಣೆ ಕುರಿತು ಈಗಾಗಲೇ ಮಠಮಾನ್ಯಗಳು ಕಾರ್ಯಪ್ರವೃತ್ತವಾಗಿವೆ. ಗೋಮಾತೆ ಪೂಜಿಸುವ ಹಿಂದೂಗಳ ಮನಸ್ಥಿತಿಗೆ ನಿಜವಾದ ನ್ಯಾಯ ದೊರಕಿಸಿ ಕೊಡಬೇಕಾದ್ದು ಅಧಿಕಾರಿಗಳ, ಸಂಬಂಧಪಟ್ಟ ಇಲಾಖೆಗಳ ಕರ್ತವ್ಯವಾಗಿದೆ ಎಂದರು.ಹಾನಗಲ್ಲಿನ ವಿರಕ್ತಮಠದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲೆ ಸೇರಿದಂತೆ ಸುತ್ತಲಿನ ಜಿಲ್ಲೆಗಳಿಂದ ನೂರಾರು ಹೆಸರಾಂತ ಹೋರಿಗಳು, ಅಭಿಮಾನಿಗಳು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ರ‍್ಯಾಲಿ ಸಾಗುವ ಮಾರ್ಗದಲ್ಲಿ ಕೇಸರಿ ಬಂಟಿಂಗ್ಸ್, ದೇಶಭಕ್ತರ ಭಾವಚಿತ್ರಗಳು, ಭಗವಾ ಧ್ವಜಗಳು ರಾರಾಜಿಸುತ್ತಿದ್ದವು. ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಸಾಗಿಬಂದ ಪ್ರತಿಭಟನಾ ರ‍್ಯಾಲಿ ಸಿಂಧೂರ ಸಿದ್ದಪ್ಪ ವೃತ್ತದಲ್ಲಿ ನಿರ್ಮಿಸಲಾಗಿದ್ದ ಪ್ರಧಾನ ವೇದಿಕೆ ತಲುಪಿ ಸಂಪನ್ನಗೊಂಡಿತು. ಸಮಾಜ ಸೇವಕ ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.