ನಟ ದರ್ಶನ್‌ಗೆ ನಿಯಮ ಮೀರಿ ಸೌಕರ್ಯ ನೀಡಲು ಒತ್ತಡ, ಆಮಿಷ ಬಂದಿಲ್ಲ: ಡಿಐಜಿ ಟಿ.ಪಿ. ಶೇಷಾ

KannadaprabhaNewsNetwork | Updated : Sep 01 2024, 10:29 AM IST

ಸಾರಾಂಶ

ನಟ ದರ್ಶನ್ ಅವರಿಗೆ ನಿಯಮ ಮೀರಿ ಸೌಕರ್ಯ ನೀಡುವಂತೆ ನನಗ್ಯಾವ ಒತ್ತಡ, ಆಮಿಷ ಬಂದಿಲ್ಲ.

ಬಳ್ಳಾರಿ: ಇಲ್ಲಿನ ಬಳ್ಳಾರಿ ಜೈಲಿನ ಹೈ ಸೆಕ್ಯುರಿಟಿ ಸೆಲ್‌ನಲ್ಲಿರುವ ನಟ ದರ್ಶನ್‌ ಅವರನ್ನು ಬೇರೆ ಸೆಲ್‌ಗೆ ಶಿಫ್ಟ್ ಮಾಡುವುದಿಲ್ಲ. ಅದರ ಅಗತ್ಯವೂ ಇಲ್ಲ. ಆ ರೀತಿಯ ಕೋರಿಕೆ ಬಂದರೂ ಕೇಳುವುದಿಲ್ಲ ಎಂದು ಉತ್ತರ ವಲಯದ ಡಿಐಜಿ ಟಿ.ಪಿ. ಶೇಷಾ ಸ್ಪಷ್ಟಪಡಿಸಿದ್ದಾರೆ.

ನಟ ದರ್ಶನ್ ಜೈಲಿನಲ್ಲಿ ಇರುವುದರಿಂದ ಭದ್ರತೆ ವೀಕ್ಷಣೆಗೆ ಶನಿವಾರ ಆಗಮಿಸಿದ್ದ ಅವರು ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ನಟ ದರ್ಶನ್ ಅವರಿಗೆ ನಿಯಮ ಮೀರಿ ಸೌಕರ್ಯ ನೀಡುವಂತೆ ನನಗ್ಯಾವ ಒತ್ತಡ, ಆಮಿಷ ಬಂದಿಲ್ಲ. ಒಂದು ವೇಳೆ ಒತ್ತಡ ಬಂದರೂ ನಾನು ಯಾವ ರಾಜಕಾರಣಿಗಳ ಮಾತು ಕೇಳುವುದಿಲ್ಲ. ಈ ರೀತಿಯ ಆರೋಪಗಳೆಲ್ಲ ಸುಳ್ಳು. ನಾನು ಪಾರದರ್ಶಕವಾಗಿದ್ದೇನೆ. ಈ ವರೆಗೆ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸಿದ್ದೇನೆ. ನಟ ದರ್ಶನ್ ವಿಚಾರದಲ್ಲೂ ಯಾವುದೇ ನಿಯಮ ಉಲ್ಲಂಘನೆಯಾಗಲು ಬಿಡುವುದಿಲ್ಲ ಎಂದು ತಿಳಿಸಿದರು.

ದರ್ಶನ್ ಮೇಲೆ ಪ್ರತಿಕ್ಷಣವೂ ನಿಗಾ:

ದರ್ಶನ್‌ ಅವರನ್ನು ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಇರಿಸಲಾಗಿದೆ. ಈ ಬ್ಯಾರಕ್‌ನ 15 ಸೆಲ್‌ಗಳಲ್ಲಿ ನಾಲ್ವರು ಮಾತ್ರ ಇದ್ದಾರೆ. ಬೇರೆ ಬೇರೆ ಸೆಲ್‌ಗಳಲ್ಲಿರುವ ಅಷ್ಟೂ ಜನರನ್ನು ಬೇರೆಯಾಗಿಯೇ ಇಟ್ಟಿದ್ದೇವೆ. ಕೊನೆಯ ಸೆಲ್‌ನಲ್ಲಿ ದರ್ಶನ್ ಇದ್ದಾರೆ. ದರ್ಶನ್ ಇರುವ ಸೆಲ್‌ಗೆ ಸಿಸಿ ಕ್ಯಾಮೆರಾಗಳ ವಿಶೇಷ ನಿಗಾ ಇದೆ. 2 ಬಾಡಿ ಕ್ಯಾಮೆರಾ, 3 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಬ್ಯಾರಕ್‌ನಲ್ಲಿ ಪ್ರತಿಕ್ಷಣದ ಮಾನಿಟರ್ ಇರುತ್ತದೆ. ಇಬ್ಬರು ಸಿಬ್ಬಂದಿ 24 ತಾಸುಗಳ ಕಾಲ ಕಾರ್ಯ ನಿರ್ವಹಿಸುತ್ತಾರೆ. ದರ್ಶನ್ ಇರುವ ಸೆಲ್‌ನಲ್ಲಿ ತಟ್ಟೆ, ಲೋಟ, ಚಂಬು, ಹೊದಿಕೆ ಬಿಟ್ಟರೆ ಮತ್ತೇನೂ ಇಲ್ಲ. ಬೇರೆ ಕೈದಿಗಳಿಗೆ ನೀಡಿದಂತೆ ಟಿವಿ ವೀಕ್ಷಣೆಗೆ ಅವಕಾಶ ನೀಡಬಹುದು. ಆದರೆ, ಈ ವರೆಗೆ ಅವರು ಬೇಡಿಕೆ ಇಟ್ಟಿಲ್ಲ. ಕೇಳಿದರೆ ಕೊಡಬಹುದು; ತಪ್ಪೇನಿಲ್ಲ ಎಂದರು.

ರಕ್ತ ಸಂಬಂಧಿಗಳು ವಕೀಲರು ಹೊರತುಪಡಿಸಿ ಬೇರೆ ಯಾರಿಗೂ ದರ್ಶನ್ ಭೇಟಿಗೆ ಅವಕಾಶ ನೀಡಬಾರದು ಎಂದು ನಾನೇ ಆದೇಶಿಸಿದ್ದೇನೆ. ಸಿಬ್ಬಂದಿ ಅಲರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಿಬ್ಬಂದಿ ಮೊಬೈಲ್ ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ. ದರ್ಶನ್ ವಿಚಾರದಲ್ಲಿ ಯಾವುದೇ ನಿಯಮ ಉಲ್ಲಂಘನೆಗೆ ಆಸ್ಪದ ನೀಡುವುದಿಲ್ಲ ಎಂದರು.

ಇಲಾಖೆಗೆ ಅನುದಾನ ಕಡಿಮೆ:

ಬೇರೆ ಇಲಾಖೆಗಳಿಗೆ ಹೋಲಿಸಿದರೆ ಬಂದೀಖಾನೆ ಇಲಾಖೆಗೆ ಅನುದಾನ ಕಡಿಮೆಯೇ. ಸಿಬ್ಬಂದಿ ಕೊರತೆ ಸೇರಿದಂತೆ ನಾನಾ ಸೌಕರ್ಯಗಳ ಅಗತ್ಯವಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲೂ ಜೈಲು ಸಿಬ್ಬಂದಿ, ಭದ್ರತಾ ಸಿಬ್ಬಂದಿಯ ಕೊರತೆ ಸಾಕಷ್ಟಿದೆ. ಅನುದಾನದ ಅಭಾವವೂ ಇದೆ. ಹೀಗಾಗಿಯೇ ಒಂದಷ್ಟು ಸಮಸ್ಯೆಗಳು ಇರುತ್ತವೆ. ಬೆಂಗಳೂರು ಜೈಲಿನಲ್ಲಿ ಸುಮಾರು 5 ಸಾವಿರ ಕೈದಿಗಳಿದ್ದಾರೆ. ಆದರೆ, ಬರೀ 30ರಿಂದ 35 ಸಿಬ್ಬಂದಿ ಇದ್ದಾರೆ. ಜೈಲಿನಲ್ಲಿ ಸಾಕಷ್ಟು ಸುಧಾರಣೆ ಕೆಲಸಗಳು ಆಗುತ್ತಿರುತ್ತವೆ. ಕೆಲವೊಮ್ಮೆ ನಿಯಮ ಉಲ್ಲಂಘನೆ ಪ್ರಕರಣಗಳು ಸಹ ಕಣ್ತಪ್ಪಿ ಆಗುತ್ತವೆ. ಕೂಡಲೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚೆತ್ತುಕೊಂಡು ಸರಿಪಡಿಸುತ್ತಾರೆ ಎಂದು ತಿಳಿಸಿದರು.

ಸರ್ಜಿಕಲ್ ಚೇರ್ ಬೇಡಿಕೆ:

ನಟ ದರ್ಶನ್ ಇರುವ ಸೆಲ್‌ನಲ್ಲಿ ಭಾರತೀಯ ಶೈಲಿಯ ಶೌಚಾಲಯವಿದೆ. ಮೋಷನ್ ಕಷ್ಟವಾಗುತ್ತಿದೆ. ಆರೋಗ್ಯದ ಸಮಸ್ಯೆಯೂ ಇದೆ. ಸರ್ಜಿಕಲ್ ಚೇರ್ ಕೊಡಿ ಎಂದು ದರ್ಶನ್ ಕೇಳಿದ್ದಾರೆ. ಮೆಡಿಕಲ್ ರಿಪೋರ್ಟ್‌ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ದರ್ಶನ್ ಆರೋಗ್ಯವಾಗಿದ್ದಾರೆ. ಮತ್ಯಾವ ಆರೋಗ್ಯ ಸಮಸ್ಯೆಯಿಲ್ಲ. ದರ್ಶನ್ ಧರಿಸಿದ್ದು ಕೂಲಿಂಗ್ ಗ್ಲಾಸ್ ಅಲ್ಲ; ಟೆಸ್ಟೆಡ್ ಗ್ಲಾಸ್ ಎಂದು ತಿಳಿದು ಬಂದಿದೆ ಎಂದು ಉತ್ತರ ವಲಯ ಡಿಐಜಿ ಟಿ.ಪಿ. ಶೇಷಾ ಖಚಿತಪಡಿಸಿದರು.

ಬಳ್ಳಾರಿ ಜೈಲಿಗೆ ಬರುವಾಗ ದರ್ಶನ್ ಕೈಯಲ್ಲಿ ಕಡಗ ಹೇಗೆ ಬಂತು? ಬೆಂಗಳೂರಿನಿಂದ ಬಳ್ಳಾರಿ ಕಾರಾಗೃಹಕ್ಕೇ ಏಕೆ ಶಿಫ್ಟ್ ಮಾಡಲಾಯಿತು ಎಂದು ಕೇಳಿದ ಪ್ರಶ್ನೆಗೆ, ಈ ಬಗ್ಗೆ ನನಗೇನೂ ಗೊತ್ತಿಲ್ಲ. ಮೇಲಧಿಕಾರಿಗಳ ಸೂಚನೆಯಷ್ಟೇ ಪಾಲಿಸುತ್ತೇವೆ ಎಂದರು.

ಜೈಲಿನಲ್ಲಿ ಸಾಕಷ್ಟು ಸುಧಾರಣೆ:

ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಮೊಬೈಲ್ ಜಾಮರ್ ಇಲ್ಲ. ಅತ್ಯಾಧುನಿಕ ತಂತ್ರಜ್ಞಾನದ ಜಾಮರ್ ಅಳವಡಿಕೆಯಾಗುತ್ತದೆ. ಆದರೆ, ಕೈದಿಗಳು ಮೊಬೈಲ್ ಬಳಕೆ ಮಾಡದಂತೆ ಆಗಾಗ್ಗೆ ದಾಳಿ ನಡೆಸಿ ಕ್ರಮ ವಹಿಸಲಾಗುತ್ತಿರುತ್ತದೆ. ಕೆಲವೊಮ್ಮೆ ಸಿಬ್ಬಂದಿಯ ಕಣ್ತಪ್ಪಿಸಿ ಮೊಬೈಲ್ ಬಳಕೆ ಮಾಡಿರುವ ಪ್ರಕರಣಗಳೂ ಇವೆ. ಪತ್ತೆ ಹಚ್ಚಿ ದೂರು ದಾಖಲಿಸಿಕೊಳ್ಳುತ್ತಿದ್ದೇವೆ.

ಈ ಸಂಬಂಧ 22 ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.

Share this article