ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ನಟ ದರ್ಶನ್ ಆರೋಗ್ಯ ತಪಾಸಣೆ

KannadaprabhaNewsNetwork | Published : Dec 25, 2024 12:48 AM

ಸಾರಾಂಶ

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ನಟ ದರ್ಶನ್ ಅವರು ಮಂಗಳವಾರ ಕಾಮಾಕ್ಷಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಕನ್ನಡಪ್ರಭ ವಾರ್ತೆ ಮೈಸೂರು

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ನಟ ದರ್ಶನ್ ಅವರು ಮಂಗಳವಾರ ಕಾಮಾಕ್ಷಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ನಗರದ ಸರಸ್ವತಿಪುರಂನಲ್ಲಿರುವ ಕಾಮಾಕ್ಷಿ ಆಸ್ಪತ್ರೆಗೆ ಭೇಟಿ ನೀಡಿದ ದರ್ಶನ್, ವೈದ್ಯರನ್ನು ಭೇಟಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ವೇಳೆ ದರ್ಶನ್ ನೋಡಲು ಅವರ ಅಭಿಮಾನಿಗಳು ಮುಗಿಬಿದ್ದರು.

ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರಿಗೆ ಆಸ್ಪತ್ರೆಯ ವೈದ್ಯ ಅಜಯ್ ಹೆಗ್ಡೆ ಅವರು ಆರೋಗ್ಯ ತಪಾಸಣೆಯೊಂದಿಗೆ ಎಕ್ಸ್ ರೇ ತೆಗೆದು ಪರಿಶೀಲನೆ ನಡೆಸಿದ್ದು, ಅಗತ್ಯ ಚಿಕಿತ್ಸೆಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ. 20 ನಿಮಿಷ ಆಸ್ಪತ್ರೆಯಲ್ಲಿ ದರ್ಶನ್ ಇದ್ದು, ಬಳಿಕ ತಮ್ಮ ಕಾರಿನಲ್ಲಿ ಫಾರಂಹೌಸ್‌ಗೆ ತೆರಳಿದ್ದಾರೆ. ಈ ವೇಳೆ ನಟ ಧನ್ವೀರ್, ಸ್ನೇಹಿತರು ಇದ್ದರು.

ಆಸ್ಪತ್ರೆಗೆ ದರ್ಶನ್ ಬರಲಿದ್ದಾರೆ ಎಂಬ ಮಾಹಿತಿ ತಿಳಿದು ಬೆಳಗ್ಗೆಯಿಂದಲೇ ಆಸ್ಪತ್ರೆ ಮುಂದೆ ದರ್ಶನ್ ಅಭಿಮಾನಿಗಳು ಕಾದು ಕುಳಿತಿದ್ದರು. ಅವರು ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಡಿ ಬಾಸ್, ಡಿ ಬಾಸ್ ಎಂದು ಜೈಕಾರ ಕೂಗಿದರು. ವಾಪಸ್ ತೆರಳುವಾಗಲೂ ನೂಕುನುಗ್ಗಲು ಉಂಟಾಯಿತು.ರೇಣುಕಾ ಕೊಲೆ ಆರೋಪಿಗಳಾದ ವಿನಯ್‌, ನಂದೀಶ್‌ ಬಿಡುಗಡೆವಿಜಯಪುರ/ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರನಟ ದರ್ಶನ್ ಒಡನಾಡಿ ವಿನಯ್‌ ಹಾಗೂ ನಂದೀಶ್‌ಗೆ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಮಂಗಳವಾರ ಅವರಿಬ್ಬರೂ ಜೈಲಿನಿಂದ ಬಿಡುಗಡೆಯಾಗಿದ್ದಾರೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 10ನೇ ಆರೋಪಿಯಾಗಿರುವ ವಿನಯ್‌ನನ್ನು ಬಳ್ಳಾರಿ ಜೈಲಿನಿಂದ ಆ.31ರಂದು ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ವಿಜಯಪುರ ಜೈಲಿನ ಅಧಿಕಾರಿಗಳು ವಿನಯ್‌ನನ್ನು ಬಿಡುಗಡೆಗೊಳಿಸಿದರು. ಬಳಿಕ, ಸ್ನೇಹಿತರ ಜೊತೆ ವಿನಯ್‌, ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದರು.ಈ ಮಧ್ಯೆ, ಪ್ರಕರಣದ ಮತ್ತೊಬ್ಬ ಆರೋಪಿ, ಪವಿತ್ರಾಗೌಡ ಸ್ನೇಹಿತ ನಂದೀಶ್‌ ಅವರು ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಆದರೆ, ಮತ್ತೊಬ್ಬ ಆರೋಪಿ ದರ್ಶನ್‌ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಅವರು ಭದ್ರತೆಯ ಬಾಂಡ್ ಸಮಸ್ಯೆಯಿಂದ ಬಿಡುಗಡೆ ಆಗಿಲ್ಲ.

ಇಬ್ಬರೂ ಮೈಸೂರು ಜೈಲಿನಲ್ಲಿದ್ದರು. ಇಬ್ಬರು ಆರೋಪಿಗಳಿಗೂ ಸಿಸಿಎಚ್ 57ನೇ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಬುಧವಾರ ಸರ್ಕಾರಿ ರಜೆ ಇರುವ ಕಾರಣ, ರಾಘವೇಂದ್ರ ಕುಟುಂಬದವರು ಭದ್ರತೆಯ ಬಾಂಡ್ ಒದಗಿಸಿದರೆ ಗುರುವಾರ ಬಿಡುಗಡೆಗೊಳಿಸಲಾಗುವುದು ಎಂದು ಜೈಲಾಧಿಕಾರಿ ತಿಳಿಸಿದ್ದಾರೆ.

Share this article