ರಾಮನಗರ: ಹೃದಯಾಘಾತದಿಂದ ನಿಧನರಾದ ನಟ, ನಿರ್ಮಾಪಕ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ತಾಲೂಕಿನ ಕೈಲಾಂಚ ಹೋಬಳಿ ಗುನ್ನೂರು ಬಳಿಯ ಫಾರ್ಮ್ ಹೌಸ್‌ನಲ್ಲಿ ಬುಧವಾರ ಸಂಜೆ ನೆರವೇರಿತು
ರಾಮನಗರ: ಹೃದಯಾಘಾತದಿಂದ ನಿಧನರಾದ ನಟ, ನಿರ್ಮಾಪಕ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ತಾಲೂಕಿನ ಕೈಲಾಂಚ ಹೋಬಳಿ ಗುನ್ನೂರು ಬಳಿಯ ಫಾರ್ಮ್ ಹೌಸ್‌ನಲ್ಲಿ ಬುಧವಾರ ಸಂಜೆ ನೆರವೇರಿತು.
ಅಂತ್ಯಕ್ರಿಯೆಗೂ ಮುನ್ನ ಶ್ರೀ ರೇವಣಸಿದ್ದೇಶ್ವರ ಮಠದ ಶ್ರೀ ರಾಜಶೇಖರ ಸ್ವಾಮೀಜಿ ನೇತೃತ್ವದಲ್ಲಿ, ದಿಲೀಪ್ ರಾಜ್ ಅಣ್ಣನ ಮಗ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಈ ವೇಳೆ ಪಾರ್ಥಿವ ಶರೀರದ ಎದುರು ಪತ್ನಿ ವಿದ್ಯಾ, ಮಕ್ಕಳು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ದಿಲೀಪ್ ಜೊತೆಗಿನ ಒಡನಾಟ ನೆನೆದು ಗ್ರಾಮಸ್ಥರು ಮತ್ತು ಆಪ್ತರು ಕಣ್ಣೀರಿಟ್ಟರು.
ದಿಲೀಪ್ ರಾಜ್ ಅಂತ್ಯಕ್ರಿಯೆಯಲ್ಲಿ ನಟ ಸೃಜನ್ ಲೋಕೇಶ್, ನಟಿ ಅನುಪ್ರಭಾಕರ್, ರಘು ಮುಖರ್ಜಿ, ಕಾಮಿಡಿ ಕಿಲಾಡಿ ಖ್ಯಾತಿಯ ಜಗಪ್ಪ, ಸೃಜನ್, ಮಂಜು ಪಾವಗಡ, ಹುಲಿ ಕಾರ್ತಿಕ್ ಸೇರಿ ಕಿರುತೆರೆ ಕಲಾವಿದರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಭಾಗಿಯಾಗಿದ್ದರು.
10 ವರ್ಷಗಳ ಹಿಂದೆ ನಟ ದಿಲೀಪ್ ರಾಜ್ ಗುನ್ನೂರು ಬಳಿ 1 ಎಕರೆ ಜಮೀನು ಖರೀದಿಸಿದ್ದರು. ಇಲ್ಲಿ ತೋಟ ನಿರ್ಮಾಣ ಮಾಡಿಕೊಂಡು ಹಳೇ ಶೈಲಿಯಲ್ಲಿ ತೊಟ್ಟಿ ಮನೆ ನಿರ್ಮಾಣ ಮಾಡಿಕೊಂಡಿದ್ದರು. ತಿಂಗಳಿಗೊಮ್ಮೆ ಫಾರ್ಮ್‌ಹೌಸ್‌ಗೆ ಭೇಟಿ ನೀಡುತ್ತಿದ್ದರು. ಗ್ರಾಮಸ್ಥರ ಜೊತೆಗೂ ದಿಲೀಪ್ ರಾಜ್ ಉತ್ತಮ ಒಡನಾಟ ಹೊಂದಿದ್ದರು. ಹೀಗಾಗಿ ಕುಟುಂಬದವರು ಇಲ್ಲೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಮಿಲನ ಚಿತ್ರದಿಂದ ಖ್ಯಾತಿಗೆ:
ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ದಿಲೀಪ್ ರಾಜ್ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದರು. ಆ ಪಾತ್ರಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ಮತ್ತು ಟಿವಿ ಎರಡರಲ್ಲೂ ನಟ, ನಿರ್ಮಾಪಕ ದಿಲೀಪ್ ರಾಜ್ ಗುರುತಿಸಿಕೊಂಡಿದ್ದರು. 2005ರಲ್ಲಿ ಬಿಡುಗಡೆಯಾದ ಬಾಯ್‌ಫ್ರೆಂಡ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಿಲನ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದರು. ಸುಗ್ರೀವ, ಗೆಳೆಯ, ಯೂಟರ್ನ್, ಸೇರಿದಂತೆ 28 ಚಿತ್ರಗಳಲ್ಲಿ ದಿಲೀಪ್ ರಾಜ್ ನಟಿಸಿದ್ದಾರೆ. ಸದ್ಯ ಜನಪ್ರಿಯ ಧಾರಾವಾಹಿ `ಕೃಷ್ಣ ರುಕ್ಕು’ ಧಾರಾವಾಹಿ ಪ್ರೊಡ್ಯೂಸ್ ಮಾಡುತ್ತಿದ್ದರು. 47 ವರ್ಷದ ದಿಲೀಪ್ ರಾಜ್ ಕೊನೆಯದಾಗಿ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಮನೆಯೊಂದು ಮೂರು ಬಾಗಿಲು, ರಥಸಪ್ತಮಿ, ಪ್ರೀತಿಗಾಗಿ ಧಾರಾವಾಹಿಗಳಲ್ಲೂ ನಟಿಸಿದ್ದರು.
13ಕೆಆರ್ ಎಂಎನ್ 6,7.ಜೆಪಿಜಿ
ಗುನ್ನೂರು ಬಳಿಯ ಫಾರ್ಮ್ ಹೌಸ್ ನಲ್ಲಿ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ ನೆರವೇರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.