ಹಾಸನ: ಚೆಲುವಿನ ಚಿತ್ತಾರ ಖ್ಯಾತಿಯ ನಟಿ ಅಮೂಲ್ಯ ಅವರು ಗುರುವಾರ ಶ್ರೀ ಹಾಸನಾಂಬೆ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಾಲಯದ ಆವರಣಕ್ಕೆ ಬಂದಾಗ ಅಭಿಮಾನಿಗಳು ಕೈಬೀಸಿ ಕರೆದಾಗ ಸ್ಥಳಕ್ಕೆ ಹೋಗಿ ಸೆಲ್ಫಿಗೆ ನಗೆ ಬೀರಿದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹಾಸನಾಂಬೆ ದೇವಿಯ ದರ್ಶನ ಪಡೆಯಬೇಕು ಎಂಬ ಆಸೆ ಬಹಳ ವರ್ಷಗಳಿಂದ ಇತ್ತು. ಜೀವನದಲ್ಲಿ ಏನೇ ಕೆಲಸಗಳಿದ್ದರೂ, ವರ್ಷಕ್ಕೊಮ್ಮೆಯಾದರೂ ಇಲ್ಲಿಗೆ ಬಂದು ದೇವಿಯ ದರ್ಶನ ಪಡೆದು ಹೋಗಬೇಕು ಎಂಬುದು ನನ್ನ ಮನದ ಬಯಕೆ. ಈ ಬಾರಿ ದೇವಿಯ ದರ್ಶನ ಪಡೆದಿರುವುದು ತುಂಬಾ ಸಂತೋಷ ತಂದಿದೆ " ಎಂದರು. ದೇವಿಯ ಮುಂದೆ ವಿಶೇಷವಾಗಿ ಏನನ್ನೂ ಬೇಡಿಕೊಳ್ಳಲಿಲ್ಲ. ಕೈಮುಗಿದು ನಮಸ್ಕರಿಸಿ, ಇಲ್ಲಿಯವರೆಗೆ ಜೀವನದಲ್ಲಿ ನೀಡಿರುವ ಎಲ್ಲ ಒಳ್ಳೆಯ ಸಂಗತಿಗಳಿಗಾಗಿ ಕೃತಜ್ಞತೆ ಸಲ್ಲಿಸಿದೆ. ನಮ್ಮ ಕುಟುಂಬ, ಮಕ್ಕಳು ಸೇರಿದಂತೆ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದೆ. ದೇವರಲ್ಲಿ ಬೇಡಿಕೊಳ್ಳುವುದಕ್ಕಿಂತ ಧನ್ಯವಾದ ಹೇಳುವುದೂ ಮುಖ್ಯ ಎಂಬುದು ನನ್ನ ಭಾವನೆ ಎಂದು ತಿಳಿಸಿದರು. ಹಿಂದೆ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿಯೂ ಹಾಸನಕ್ಕೆ ಬರುವ ಅವಕಾಶಗಳು ಸಿಕ್ಕಿದ್ದವು. ಕುಟುಂಬದ ಹಿರಿಯರು ಮಕ್ಕಳನ್ನು ದೇವರ ಮುಂದೆ ಕರೆದುಕೊಂಡು ಹೋಗುತ್ತಿದ್ದ ನೆನಪುಗಳಿವೆ. ಆದರೆ ಈಗ ನನ್ನ ಮಕ್ಕಳಿಗೂ ದೇವಿಯ ಆಶೀರ್ವಾದ ದೊರೆಯಲಿ ಎಂಬ ಆಸೆ ಇದೆ ಎಂದು ತಮ್ಮ ಭಾವನೆ ಹಂಚಿಕೊಂಡರು.ಇದೇ ವೇಳೆ ತಮ್ಮ ಸಿನಿಮಾ ಪಯಣದ ಕುರಿತು ಮಾತನಾಡಿದ ಅವರು, ಬಹಳ ವರ್ಷಗಳ ನಂತರ ಪ್ರೇಕ್ಷಕರ ಮುಂದೆ ಹೊಸ ಚಿತ್ರದ ಮೂಲಕ ಬರಲು ಸಿದ್ಧತೆ ನಡೆಯುತ್ತಿದೆ. ಚಿತ್ರದ ಕಥಾವಸ್ತು ಮತ್ತು ಪರಿಕಲ್ಪನೆ ತುಂಬಾ ಚೆನ್ನಾಗಿದ್ದು, ಹಾಡಿನ ಚಿತ್ರೀಕರಣ ಸೇರಿದಂತೆ ಕೆಲಸಗಳು ನಡೆಯುತ್ತಿವೆ. ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿರುವುದು ಸಂತಸ ತಂದಿದೆ ಎಂದರು.ನಾನು ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಒಬ್ಬ ಸಿನಿಮಾ ಅಭಿಮಾನಿಯಾಗಿಯೂ ಉಳಿದಿದ್ದೇನೆ. ಒಳ್ಳೆಯ ಸಿನಿಮಾಗಳು ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಮತ್ತೆ ಸಿನಿಮಾ ವೀಕ್ಷಿಸಲು ಬರುತ್ತಿರುವುದು ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಿಂದ ಆಶಾದಾಯಕ ಸಂಗತಿ. ಸಿನಿಮಾ ಕ್ಷೇತ್ರದಲ್ಲಿ ಮತ್ತೆ ಚಟುವಟಿಕೆಗಳು ಹೆಚ್ಚುತ್ತಿರುವುದು ಕಲಾವಿದರಾದ ನಮಗೂ ಖುಷಿ ನೀಡಿದೆ ಎಂದು ನಟಿ ಅಮೂಲ್ಯ ಹೇಳಿದರು.====