₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ

KannadaprabhaNewsNetwork |  
Published : Dec 23, 2025, 04:15 AM IST
Metro train | Kannada Prabha

ಸಾರಾಂಶ

ನಗರದಲ್ಲಿ ಬಹು ಚರ್ಚಿತ 16.75 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣ ಟೆಂಡರ್‌ನಲ್ಲಿ ಅದಾನಿ ಗ್ರೂಪ್ ಮತ್ತು ಹೈದರಾಬಾದ್ ಮೂಲದ ವಿಶ್ವ ಸಮುದ್ರ ಎಂಜಿನಿಯರಿಂಗ್ ಕಂಪನಿಗಳು ಅರ್ಹತೆ ಪಡೆದಿದ್ದು, ಅದಾನಿ ಗ್ರೂಪ್ ಅತ್ಯಂತ ಕಡಿಮೆ ದರಕ್ಕೆ ಬಿಡ್ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಬಹು ಚರ್ಚಿತ 16.75 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣ ಟೆಂಡರ್‌ನಲ್ಲಿ ಅದಾನಿ ಗ್ರೂಪ್ ಮತ್ತು ಹೈದರಾಬಾದ್ ಮೂಲದ ವಿಶ್ವ ಸಮುದ್ರ ಎಂಜಿನಿಯರಿಂಗ್ ಕಂಪನಿಗಳು ಅರ್ಹತೆ ಪಡೆದಿದ್ದು, ಅದಾನಿ ಗ್ರೂಪ್ ಅತ್ಯಂತ ಕಡಿಮೆ ದರಕ್ಕೆ ಬಿಡ್ ಸಲ್ಲಿಸಿದೆ.

ಟೆಂಡರ್‌ನಲ್ಲಿ ಅರ್ಹತೆ ಪಡೆದು ಅತ್ಯಂತ ಕಡಿಮೆ ದರಕ್ಕೆ ಬಿಡ್ ಸಲ್ಲಿಸಿದ್ದರೂ, ಸರ್ಕಾರ ನಿಗದಿಪಡಿಸಿರುವ ಮೊತ್ತಕ್ಕಿಂತ ಶೇ.24ರಿಂದ ಶೇ.28ರಷ್ಟು ಹೆಚ್ಚು ದರಕ್ಕೆ ಅದಾನಿ ಗ್ರೂಪ್‌ ಬಿಡ್ ಮಾಡಿದೆ. ರಾಜ್ಯ ಸರ್ಕಾರ ₹17,698 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಿದ್ದರೆ, ಅದಾನಿ ಕಂಪನಿಯು ₹22,267 ಕೋಟಿಗೆ ಬಿಡ್ ಸಲ್ಲಿಸಿದೆ.

ಬಿಡ್ಡಿಂಗ್ ದರ ಹೆಚ್ಚಾಗಿರುವುದರಿಂದ ಹೆಚ್ಚುವರಿ ಮೊತ್ತವನ್ನು ಭರಿಸಲು ಬಿ-ಸ್ಲೈಲ್ ರಾಜ್ಯ ಸರ್ಕಾರದ ಅನುಮೋದನೆ ಕೋರಬಹುದು. ಒಪ್ಪಿಗೆ ನೀಡಿದರೆ ಮಾತ್ರ ಟೆಂಡರ್ ಪ್ರಕ್ರಿಯೆ ಮುಂದಿನ ಹಂತಕ್ಕೆ ತಲುಪಲಿದೆ ಎಂದು ಹೇಳಲಾಗಿದೆ.

ಸರ್ಕಾರದಿಂದ ಶೇ.40ರಷ್ಟು ವೆಚ್ಚ:

ಒಟ್ಟು 4 ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದರೂ, ಆರ್ಥಿಕ ಅರ್ಹತೆಯನ್ನು ಈ ಎರಡು ಕಂಪನಿಗಳು ಮಾತ್ರ ಪಡೆದುಕೊಂಡಿವೆ. ಈ ಸುರಂಗ ರಸ್ತೆಯನ್ನು ನಿರ್ಮಾಣ ಮಾಡಿ, ನಿರ್ವಹಿಸಿ ನಂತರ ವರ್ಗಾವಣೆ ಮಾಡುವ ಮಾದರಿಯನ್ನು ಅನುಸರಿಸಲಾಗುತ್ತದೆ. ಯೋಜನೆಗೆ ಸರ್ಕಾರದಿಂದ ಶೇ.40ರಷ್ಟು ವೆಚ್ಚ ಭರಿಸಿದರೆ ಉಳಿದ ಹಣವನ್ನು ಬಿಲ್ಡರ್ ಭರಿಸಬೇಕು.

ಸಲ್ಲಿಕೆಯಾದ ಅರ್ಜಿಗಳ ತಾಂತ್ರಿಕ ಮೌಲ್ಯಮಾಪನದ ವೇಳೆ ಆರ್ಥಿಕ ಸುತ್ತಿಗೆ ಅದಾನಿ ಮತ್ತು ವಿಶ್ವ ಸಮುದ್ರ ಎಂಜಿನಿಯರಿಂಗ್ ಕಂಪನಿ ಮಾತ್ರ ಅರ್ಹತೆ ಪಡೆದಿದ್ದವು. ದಿಲೀಪ್ ಬಿಲ್ಡ್‌ಕಾನ್ ಮತ್ತು ರೇಲ್ ವಿಕಾಸ್ ನಿಗಮ ಕೂಡ ಅರ್ಜಿ ಸಲ್ಲಿಸಿದ್ದವು. ತಾಂತ್ರಿಕ ಅರ್ಹತೆ ಕಾರಣದಿಂದ ದಿಲೀಪ್ ಬಿಲ್ಡ್‌ಕಾನ್ ಹಾಗೂ ರೇಲ್ ವಿಕಾಸ ನಿಗಮವೂ ಅರ್ಹತೆ ಪಡೆದುಕೊಳ್ಳುವುದರಲ್ಲಿ ವಿಫಲವಾಗಿವೆ. ಹೀಗಾಗಿ, ಎರಡೇ ಕಂಪನಿಗಳು ಟೆಂಡರ್‌ನ ಅಂತಿಮ ರೇಸ್‌ನಲ್ಲಿ ಉಳಿದಿವೆ. ಅದಾನಿ ಕಂಪನಿಯೇ ಅತಿ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿದ್ದು, ರಾಜ್ಯ ಸರ್ಕಾರದ ನಡೆ ಏನಾಗಿರುತ್ತದೆ ಎನ್ನುವ ಕುತೂಹಲ ಮೂಡಿದೆ.

ಬಿಜೆಪಿ-ಜೆಡಿಎಸ್ ತೀವ್ರ ವಿರೋಧ:

ಈ ಬೃಹತ್ ಯೋಜನೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಗರಿಷ್ಠ ಟೋಲ್ ಶುಲ್ಕದೊಂದಿಗೆ ಕಾರುಗಳಿಗೆ ಮಾತ್ರ ಅವಕಾಶ ಮಾಡಿಕೊಡುವ ಈ ಯೋಜನೆಯು ಕೆಲವೇ ಜನರಿಗೆ ಅನುಕೂಲ ಮಾಡಿಕೊಡುತ್ತದೆ. ಬೃಹತ್ ಮೊತ್ತದ ಯೋಜನೆಯಿಂದ ನಗರದ ದೊಡ್ಡ ಸಂಖ್ಯೆಯ ಜನರಿಗೆ ಪ್ರಯೋಜನ ಇಲ್ಲವೆಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ಆರೋಪಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನಬಸವ ಶ್ರೀ ಇಡೀ ಮನುಕುಲ ಪ್ರೀತಿಸುವ ಗುಣದವರು
ಮಕ್ಕಳಲ್ಲಿ ಪರಿಸರ ಜ್ಞಾನ ಮೂಡಿಸುತ್ತಿರುವ ಪ್ರಶಂಸಾರ್ಹ: ಎಂ.ಎನ್.ಪಾಟೀಲ