ಹಣಗೆರೆಕಟ್ಟೆಯಲ್ಲಿ ಪ್ಯಾಲೆಸ್ತೈನ್ ಪರ ಪ್ಲೆಕ್ಸ್‌ ಅಳವಡಿಕೆ: ಸುಮೋಟ ಪ್ರಕರಣ ದಾಖಲು

KannadaprabhaNewsNetwork |  
Published : Sep 19, 2024, 01:55 AM IST
ಪೊಟೋ: 18ಟಿಟಿಎಚ್‌03ತೀರ್ಥಹಳ್ಳಿ ತಾಲೂಕಿನ ಹಣಹೆರೆಕಟ್ಟೆಯ ದರ್ಗಾದ ಎದುರು ಅಳವಡಿಸಿರುವ ಪ್ಯಾಲೇಸ್ತೈನ್ ಪರವಾದ ಪ್ಲೆಕ್ಸ್‌. | Kannada Prabha

ಸಾರಾಂಶ

ತೀರ್ಥಹಳ್ಳಿ ತಾಲೂಕಿನ ಹಣಹೆರೆಕಟ್ಟೆಯ ದರ್ಗಾದ ಎದುರು ಪ್ಯಾಲೇಸ್ತೈನ್ ಪರವಾದ ಪ್ಲೆಕ್ಸ್‌ ಅಳವಡಿಸಲಾಗಿದ್ದು, ಈದ್ ಮಿಲಾದ್ ಹಬ್ಬದಂದೇ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ಪ್ರಕರಣದ ಹಿಂದಿನ ಕೈವಾಡ ಪತ್ತೆಗೆ ಶಾಸಕ ಆರಗ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ತಾಲೂಕಿನ ಹಣಹೆರೆಕಟ್ಟೆಯ ದರ್ಗಾದ ಎದುರು ಪ್ಯಾಲೆಸ್ತೈನ್ ಪರವಾದ we stand with Palestine ಎಂಬ ಫ್ಲೆಕ್ಸ್ ಅಳವಡಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕಿಡಿಗೇಡಿಗಳ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದೆ.

ಈ ಘಟನೆಯು ಈದ್ ಮಿಲಾದ್ ಹಬ್ಬದಂದೇ ನಡೆದಿದ್ದು, ಈದ್ ಹಬ್ಬದ ಪ್ರಯುಕ್ತ ಹಣಗೆರೆ ಗ್ರಾಮದಲ್ಲಿರುವ ನೂರ್ ಜಾಮಿಯಾ ಮಸೀದಿ ಬಳಿ ಮುಸ್ಲಿಂ ಧರ್ಮ ದವರು ನಡೆಸುವ ಮೆರವಣಿಗೆಗೆ ಪೊಲೀಸ್ ಇಲಾಖೆಯ ಬಂದೋಬಸ್ತ್ ನಿಯೋಜಿಸಲಾಗಿತ್ತು. ಈದ್ ಮಿಲಾದ್ ಹಬ್ಬ ಅಂಗವಾಗಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲು ಸಿದ್ಧತೆ ನಡೆದಿತ್ತು. ಮೆರವಣಿಗೆಗೂ ಮೊದಲು ಮೆರವಣಿಗೆ ಮಾರ್ಗ ತಪಾಸಣೆ ನಡೆಸಿದ ಪೊಲೀಸರಿಗೆ ದರ್ಗಾದ ಎದುರೇ ಈ ಫ್ಲೆಕ್ಸ್ ಗೋಚರವಾಗಿದೆ.ಮೆರವಣಿಗೆಯ ಉದ್ದಕ್ಕೂ ಹಸಿರು ಮತ್ತು ಬಿಳಿಯ ಬಣ್ಣದ ಬಂಟಿಂಗ್ಸ್‌ಗಳನ್ನು ಕಟ್ಟಿದ್ದು, ಅಲ್ಲಿಲ್ಲಿ ಬ್ಯಾನರ್‌ಗಳನ್ನು ಸಹ ಹಾಕಲಾಗಿತ್ತು. ಹಣಗೆರೆ ಗ್ರಾಮದ ದರ್ಗಾದ ಹತ್ತಿರದ ಮುಖ್ಯರಸ್ತೆಯ ಪಕ್ಕದಲ್ಲಿ ಉದ್ದೇಶ ಪೂರ್ವಕವಾಗಿ ಪ್ಯಾಲೇಸ್ತಾನವನ್ನು ಬೆಂಬಲಿಸುವ ಫ್ಲೆಕ್ಸ್ ಹಾಕಲಾಗಿದೆ.

ಗಲಭೆಗೆ ಪ್ರಚೋದನೆಯಾಗುವಂತೆ ಒಂದು ದೊಡ್ಡ ಬ್ಯಾನ‌ರ್‌ನಲ್ಲಿ ಯುದ್ಧಭೂಮಿಯಿದ್ದು, ಅದರ ಕೆಳಗೆ ಮಸೀದಿಯಂತಹ ಚಿತ್ರ ಇದೆ. ಬ್ಯಾನರ್‌ನ ಮದ್ಯದಲ್ಲಿ WE STAND WITH PALESTIN ಎಂಬುದಾಗಿ ಇಂಗ್ಲಿಷ್‌ ನಲ್ಲಿ ಬರೆಯಲಾಗಿದೆ. ಸಾರ್ವಜನಿಕರ ಸ್ಥಳದಲ್ಲಿ ಪ್ರಚೋದನೆಗೆ ಕಾರಣವಾದ ಫ್ಲೆಕ್ಸ್ ಹಾಕಿದ ಕಿಡಿಗೇಡಿಗಳ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಮೋಟ ಪ್ರಕರಣ ಬೆನ್ನಲ್ಲೆ ತನಿಖೆ ಕೈಗೊಂಡಿರುವ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಘಟನೆ ಕುರಿತು, ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕೇಂದ್ರವಾದ ತಾಲೂಕಿನ ಹಣಗೆರೆಕಟ್ಟೆಯಲ್ಲಿ ಈದ್ ಮಿಲಾದ್ ಹಬ್ಬದ ದಿನವಾದ ಸೋಮವಾರ ಪ್ಯಾಲೇಸ್ತೈನ್ ಪರವಾದ ಫ್ಲೆಕ್ಸ್ ಅಳವಡಿಸಿರುವುದು ಖಂಡನೀಯವಾಗಿದ್ದು, ಈ ಘಟನೆಯನ್ನು ಹಗುರವಾಗಿ ಪರಿಗಣಿಸದೇ ಈ ಘಟನೆಯ ಹಿಂದೆ ಯಾವ ಸಂಘಟನೆಯ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚುವ ಅನಿವಾರ್ಯತೆ ಇದೆ ಎಂದು ಶಾಸಕ

ಆರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!