ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ: ಹೊನ್ನೂರು ಪ್ರಕಾಶ್ ಸಲಹೆ

KannadaprabhaNewsNetwork |  
Published : Dec 23, 2024, 01:04 AM IST
37 | Kannada Prabha

ಸಾರಾಂಶ

ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ರೈತರು ಇವುಗಳ ಪ್ರಯೋಜನ ಪಡೆಯಬೇಕು .

ಕನ್ನಡಪ್ರಭ ವಾರ್ತೆ ಮೈಸೂರು

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ, ರೈತರು- ಗ್ರಾಹಕರ ಗುಂಪು ರಚಿಸಿಕೊಳ್ಳಿ ಎಂದು ಚಾಮರಾಜನಗರ ಜಿಲ್ಲೆ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಹೊನ್ನೂರು ಪ್ರಕಾಶ್‌ ಕರೆ ನೀಡಿದರು.

ಮಹಿಳಾ ವಿಶೇಷ ಕನ್ನಡ ಮಾಸಿಕ, ನಾಡಪ್ರಭು ಕೆಂಪೇಗೌಡ ಯುವ ಬ್ರಿಗೇಡ್‌, ಅಲಯನ್ಸ್‌ ಕ್ಲಬ್‌ ಆಫ್‌ ಸರಸ್ವತಿಪುರಂ ವತಿಯಿಂದ ಕೆಆರ್ಎಸ್‌ ರಸ್ತೆಯ ಶಿರ್ವಿ ಚಾರಿಟೇಬಲ್‌ ಟ್ರಸ್ಟ್‌ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ರೈತ ದಿನಾಚರಣೆ ಹಾಗೂ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಎಲ್ಲಿಯವರೆಗೆ ಈ ಕೆಲಸ ಆಗುವುದಿಲ್ಲವೋ ಅಲ್ಲಿಯವರೆಗೆ ರೈತರ ಉದ್ಧಾರ ಸಾಧ್ಯವಿಲ್ಲ ಎಂದರು.

ಪ್ರಸ್ತುತ ಬಿತ್ತನೆ ಬೀಜ, ರಸಗೊಬ್ಬರ ಮಾರಾಟಗಾರರು, ದಲ್ಲಾಳಿಗಳು ಉದ್ದಾರವಾಗುತ್ತಿದ್ದಾರೆ. ಆದರೆ ರೈತರಿಗೆ ಲಾಭ ಆಗುತ್ತಿಲ್ಲ. ಆದ್ದರಿಂದ ಗ್ರಾಹಕರು ಮತ್ತು ರೈತರ ನಡುವೆ ನೇರ ಸಂಪರ್ಕ ಏರ್ಪಟ್ಟಲ್ಲಿ ಇಬ್ಬರಿಗೂ ಲಾಭವಾಗುತ್ತದೆ. ಈ ಬಗ್ಗೆ ಗಮನ ನೀಡಬೇಕು ಎಂದು ಅವರು ಹೇಳಿದರು.

ರೈತರು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಗ್ರಾಹಕರು ಕೂಡ ಸಿರಿದಾನ್ಯ ಬಳಸಬೇಕು. ಮಾರುಕಟ್ಟೆಗಳಲ್ಲಿ ಕೇಳಿದಷ್ಟು ಹಣ ನೀಡಿ ಖರೀದಿಸುವ ಗ್ರಾಹಕರು ರೈತರ ಬಳಿ ಚೌಕಾಸಿ ಮಾಡುವುದನ್ನು ಬಿಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಬಾರತ ವೀರಶೈವ ಲಿಂಗಾಯತ ಮಹಾಸಭಾ ನಂಜನಗೂಡು ನಗರ ಘಟಕದ ಅಧ್ಯಕ್ಷ ಗುರುಮಲ್ಲಪ್ಪ ಮಾತನಾಡಿ, ಸಾವಯವ ಕೃಷಿಯ ಬಗ್ಗೆ ಗ್ರಾಮಾಂತರ ಪ್ರದೇಶದಲ್ಲಿ ಒಂದು ಸಾವಿರ ಜನರನ್ನು ಸೇರಿಸಿ, ಜಾಗೃತಿ ಕಾರ್ಯಕ್ರಮ ಮಾಡಿ. ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ರೈತರು ಏಕ ಬೆಳೆ ಪದ್ಧತಿ ಬದಲು ಬಹುಬೆಳೆ ಪದ್ಧತಿ ಅನುಸರಿಸಬೇಕು ಎಂದು ಸಲಹೆ ಮಾಡಿದರು.

ರೈತ ದೇಶದ ಬೆನ್ನೆಲುಬು ಎಂದು ಹೇಳಿ, ಸರ್ಕಾರಗಳು ಅವನಿಗೆ ಸಿಗಬೇಕಾದ ಸೌಲಭ್ಯ ನೀಡುತ್ತಿಲ್ಲ. ಸಮಾಜದ ಪ್ರತಿಯೊಂದು ವರ್ಗವೂ ಕೂಡ ರೈತರು ಹಾಗೂ ಸೈನಿಕರಿಗೆ ಋಣಿಯಾಗಿರಬೇಕು ಎಂದರು.

‘ಕಾಡಾ’ ಭೂ ಅಭಿವೃದ್ಧಿ ಜಂಟಿ ನಿರ್ದೇಶಕಿ ಡಾ.ಎಚ್‌.ಟಿ. ಚಂದ್ರಕಲಾ ಮಾತನಾಡಿ, ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ರೈತರು ಇವುಗಳ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ರೈತರ ಜೌಗು ಭೂಮಿಯ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ''''''''''''''''ಕಾಡಾ'''''''''''''''' ಮೂಲಕವೂ ಅನುಷ್ಠಾನ ಮಾಡಲಾಗುತ್ತಿದೆ ಎಂದರು.

ಉದ್ಯಮಿ ಖುಷಿ ಮಾತನಾಡಿ, ರೈತರು ಎರಡನೇ ತಾಯಿ ಇದ್ದಂತೆ. ರೈತರಿಲ್ಲದಿದ್ದಲ್ಲಿ ಯಾರಿಗೂ ಊಟ ಸಿಗುವುದಿಲ್ಲ ಎಂದರು.

ರೈತ ದಿನಾಚರಣೆ ಅಂಗವಾಗಿ ಸಾಧಕ ರೈತರಾದ ಎಂ. ರಾಜೇಂದ್ರ, ಚಿದವರವಳ್ಳಿ ನಾಗೇಂದ್ರ, ಜಿ.ಟಿ. ರಾಮೇಗೌಡ ಹಾಗೂ ನವೀನ್‌ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ವೆಂಕಟರಮಣ ಪ್ರಾರ್ಥಿಸಿದರು. ಸುಬ್ಬರಾವ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಸ್ವರೂಪ, ಸಮಾಜ ಸೇವಕಿ ಗಾಯತ್ರಿ ಪಾಂಡುಜೀ, ಪಾರಿಜಾತಾ ಉಷಾ, ಎಂ.ಎಂ. ರೇಖಾ, ಜಯಶ್ರೀ ಶಿವರಾಂ, ಶಿಲ್ಪಾ ರಾಣಿ, ಮೇನಕಾ ನಾಗರಾಜ್‌ ಮೊದಲಾದವರು ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ