ಕಲಕೇರಿಯಲ್ಲಿ ಮಾರ್ಚ್‌ 27ರಂದು ಅಡ್ಡಪಲ್ಲಕ್ಕಿ ಮಹೋತ್ಸವ

KannadaprabhaNewsNetwork | Published : Mar 26, 2025 1:34 AM

ಸಾರಾಂಶ

ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮಾ. 27 ಹಾಗೂ 28ರಂದು ಎರಡು ದಿನಗಳ ಕಾಲ ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಭೆ ಕಾರ್ಯಕ್ರಮಗಳು ಜರುಗಲಿವೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ತಿಳಿಸಿದ್ದಾರೆ.

ಮುಂಡರಗಿ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮಾ. 27 ಹಾಗೂ 28ರಂದು ಎರಡು ದಿನಗಳ ಕಾಲ ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಭೆ ಕಾರ್ಯಕ್ರಮಗಳು ಜರುಗಲಿವೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ತಿಳಿಸಿದ್ದಾರೆ. ಅವರು ಮಂಗಳವಾರ ಮುಂಡರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 25 ವರ್ಷಗಳ ಹಿಂದೆ ಕಲಕೇರಿ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತ್ತು. ಹೀಗಾಗಿ ಗ್ರಾಮಸ್ಥರು ಮತ್ತೊಮ್ಮೆ ಮಾಡಬೇಕೆನ್ನುವ ಒತ್ತಾಸೆಯ ಹಿನ್ನೆಲೆಯಲ್ಲಿ ತಾಲೂಕಿನ ಜನತೆಗೆ ಹಾಗೂ ಯುವ ಪೀಳಿಗೆಗೆ ಒಳಿತಾಗಬೇಕೆನ್ನುವ ಉದ್ದೇಶದಿಂದ ಎರಡು ದಿನಗಳ ಕಾಲ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಮಾ.27ರಂದು ಸಾಯಂಕಾಲ 4 ಗಂಟೆಗೆ ಶ್ರೀಮದ್ರಂಭಾಪುರಿ ಅಡ್ಡಪಲ್ಲಕ್ಕಿ ಮಹೋತ್ಸವವು ಸಕಲ ಬಿರುದಾವಳಿಗಳೊಂದಿಗೆ ಪೂರ್ಣಕುಂಭು, ಕಳಶ, ಕನ್ನಡಿ, ವಾದ್ಯವೈಭವ ಕಲಾಮೇಳ ಸಮೇತವಾಗಿ ಕಲಕೇರಿ ಗ್ರಾಮದ ಎಂ.ಬಿ.ಪಾಟೀಲ ಪದವಿ ಪೂರ್ವ ಕಾಲೇಜು ಆವರಣದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಬಸವೇಶ್ವರ ದೇವಸ್ಥಾನ ತಲುಪುವುದು.

ನಂತರ ಸಂಜೆ 6 ಗಂಟೆಗೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಧರ್ಮಸಭೆ ಜರುಗಲಿದೆ. ಈ ಧರ್ಮಸಭೆಯ ಸಾನಿಧ್ಯವನ್ನು ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸುವರು. ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನೇತ್ರತ್ವ ವಹಿಸುವರು. ಸಮ್ಮುಖವನ್ನು ಕಲಕೇರಿ-ವಿರುಪಾಪೂರದ ಮುದುಕೇಶ್ವರ ಶಿವಾಚಾರ್ಯರು ವಹಿಸುವರು. ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ನುಡಿಮಂದಾರ ನಡಿಸಿಕೊಡುವರು.

ಬಂಕಾಪುರದ ರೇವಣಶಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇವಡ್ಡಟ್ಟಿಯ ವಿರೇಶ್ವರ ಶಿವಾಚಾರ್ಯ ಸ್ವಾಮೀಜಿ, ಎಮ್ಮಿಗನೂರಿನ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಜಿ, ಬನ್ನಿಕೊಪ್ಪದ ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಸೂಡಿಯ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಹರಪನಹಳ್ಳಿಯ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ನಾಡಿನ ಅನೇಕ ಹರಗುರು ಚರಮೂರ್ತಿಗಳು ಆಗಮಿಸಲಿದ್ದಾರೆ. ಮಾಜಿ ಸಚಿವ ಎಸ್.ಎಸ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕರಾದ ಜಿ.ಎಸ್. ಪಾಟೀಲ, ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ, ಚಂದ್ರು ಬಾಳಿಹಳ್ಳಿಮಠ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ನಿರ್ದೇಶಕ ಡಾ.ಮನು ಬಳಿಗಾರ ಉಪನ್ಯಾಸ ನೀಡುವರು.

ಮಾ.28ರಂದು ಬೆಳಗ್ಗೆ 8.30ಕ್ಕೆ ಇಷ್ಟಲಿಂಗ ಮಹಾಪೂಜೆ ಜರುಗುವುದು. ಈ ಸಂದರ್ಭದಲ್ಲಿ ಸಹಸ್ರಚಂದ್ರ ದರ್ಶನಾರ್ಥಿಗಳಾದ ಮಾಜಿ ಸಚಿವ ಎಸ್.ಎಸ್. ಪಾಟೀಲ ಮತ್ತು ಸುಸೀಲಮ್ಮ ಎಸ್. ಪಾಟೀಲ ದಂಪತಿಗಳಿಗೆ ಗುರುರಕ್ಷೆ ಜರುಗಲಿದೆ. ಎರಡು ದಿನಗಳ ಕಾರ್ಯಕ್ರಮಕ್ಕೆ ತಾಲೂಕಿನಾದ್ಯಂತ ಎಲ್ಲ ಗ್ರಾಮಗಳಿಂದಲೂ ಭಕ್ತರು ಆಗಮಿಸಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಸೇರುವ ನಿರೀಕ್ಷೆ ಇದೆ ಎಂದರು.

ಕಲಕೇರಿ-ವಿರುಪಾಪುರ ಮಠದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 1982ರಲ್ಲಿ ರಂಭಾಪುರಿ ವೀರಗಂಗಾಧರನಾಥ ಸ್ವಾಮೀಜಿಯವರನ್ನು ಕರೆದು ಕಾರ್ಯಕ್ರಮ ಮಾಡಲಾಗಿತ್ತು. ಕಲಕೇರಿ ಮುಂಡರಗಿ ತಾಲೂಕಿನಲ್ಲಿಯೇ ಒಂದು ವಿಶೇಷ ಗ್ರಾಮ. ಇಲ್ಲಿ ಜಾತ್ಯತೀತವಾಗಿ ಜಾತ್ರೆ, ಉರೂಸ್‌ ಹೀಗೆ ಎಲ್ಲ ಕಾರ್ಯಕ್ರಮಗಳನ್ನು ಎಲ್ಲರೂ ಸೇರಿ ಒಟ್ಟಾಗಿ ಮಾಡುತ್ತಾ ಬಂದಿದ್ದಾರೆ. ಇದೀಗ ಮಾ.27 ಹಾಗೂ 28ರ ಈ ಕಾರ್ಯಕ್ರಮವನ್ನೂ ಸಹ ಎಲ್ಲರೂ ಸೇರಿ ಭಕ್ತಿ ಭಾವದಿಂದ ಮಾಡಲು ಮುಂದಾಗಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಶಿವಪ್ಪ ಅಂಕದ, ಶಿವನಗೌಡ ಪಾಟೀಲ, ಗುಡದೀರಯ್ಯ ಹಿರೇಮಠ, ಗವಿಸಿದ್ದಯ್ಯ ಹಿರೇಮಠ, ಶಿವಕುಮಾರ ದೇವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article