ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಗುರುವಾರ ಧರ್ಮಸ್ಥಳದಲ್ಲಿ, ರಾಜ್ಯಾದ್ಯಂತ ನಡೆಸಲಾದ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಸಂತೃಪ್ತ ಜೀವನ ನಡೆಸುತ್ತಿರುವ ಹಾಗೂ ವೇದಿಕೆಯ ಯಶಸ್ಸಿಗಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ಶ್ರಮಿಸುತ್ತಿರುವ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಹಮಿಲನ ಮತ್ತು ವ್ಯಸನಮುಕ್ತರ ಕುಟುಂಬೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಾತ್ಮ ಗಾಂಧೀಜಿಯವರು ಕನಸು ಕಂಡ ಗ್ರಾಮರಾಜ್ಯದ ಮೂಲಕ ರಾಮರಾಜ್ಯ ಸ್ಥಾಪನೆಯ ಕಲ್ಪನೆಯನ್ನು ಧರ್ಮಾಧಿಕಾರಿ ಹೆಗ್ಗಡೆಯವರು ಸಾಕಾರಗೊಳಿಸಿದ್ದಾರೆ. ತಮ್ಮ ಆಚಾರ- ವಿಚಾರದಲ್ಲಿ ಹಾಗೂ ಬಹುಮುಖಿ ಸಮಾಜಸೇವಾ ಕಾರ್ಯಗಳಲ್ಲಿ ಅವರು ಗಾಂಧೀಜಿಯವರ ತತ್ವ, ಸಿದ್ಧಾಂತಗಳನ್ನು ಅನುಷ್ಠಾನಗೊಳಿಸಿದ್ದಾರೆ. ಅವರ ಹಿತ-ಮಿತ ಮಾತು ಮತ್ತು ಕೃತಿಯಲ್ಲಿ ಸರ್ವರ ಸೇವಾ ಕಾಳಜಿ ಇದೆ. ಪ್ರಾಚೀನ ದೇಗುಲಗಳ ಜೀರ್ಣೋದ್ಧಾರ, ಕೆರೆಗಳಿಗೆ ಕಾಯಕಲ್ಪ, ಪ್ರಕೃತಿ-ಪರಿಸರ ಸಂರಕ್ಷಣೆ, ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮೊದಲಾದ ಜನಸೇವಾಕಾರ್ಯಗಳಿಂದ ಅವರು ನಡೆದಾಡುವ ದೇವರೆಂದೇ ಗೌರವಿಸಲ್ಪಡುತ್ತಾರೆ. ಧರ್ಮಸ್ಥಳದ ಇತಿಹಾಸದಲ್ಲಿ ಅವರ ಸೇವಾವಧಿ ಸುವರ್ಣಯುಗವಾಗಿದೆ. ಹೆಗ್ಗಡೆಯವರಿಗೆ ಭಾರತ ರತ್ನ ಸಿಗಬೇಕು. ಹೆಗ್ಗಡೆಯವರಿಗೆ ಎಲ್ಲ ವೀರಶೈವ ಮಠಗಳ ಪೂರ್ಣ ಬೆಂಬಲ, ಸಹಕಾರವಿದೆ ಎಂದು ಸ್ವಾಮೀಜಿ ಹೇಳಿದರು. ಗುಳೇದಗುಡ್ಡದಮಠದ ಒಪ್ಪಂತೇಶ್ವರ ಸ್ವಾಮೀಜಿ ಮಾತನಾಡಿದರು.ಸಮಾರಂಭವನ್ನು ಉದ್ಘಾಟಿಸಿದ ಹೇಮಾವತಿ ಹೆಗ್ಗಡೆ, ಲಕ್ಷದೀಪೋತ್ಸವದ ಶುಭಾವಸರದಲ್ಲಿ ಸಾವಿರಾರು ಮಂದಿ ವ್ಯಸನಮುಕ್ತರಾಗಿ ಸಾರ್ಥಕ ಜೀವನ ನಡೆಸಲು ದೃಢಸಂಕಲ್ಪ ಮಾಡಿರುವುದು ಶ್ರೀ ಸ್ವಾಮಿಗೆ ಅರ್ಪಿಸುವ ದೊಡ್ಡ ಸೇವೆ ಆಗಿದೆ. ದುಶ್ಚಟಗಳಿಗೆ ಬಲಿಯಾದರೆ ಮಾನಹಾನಿ, ಧನಹಾನಿ ಹಾಗೂ ಪ್ರಾಣಹಾನಿಯೊಂದಿಗೆ ಸರ್ವಸ್ವವೂ ನಾಶವಾಗುತ್ತದೆ. ವ್ಯಸನಮುಕ್ತರು ಇನ್ನಾದರೂ ಉತ್ತಮ ಜೀವನ ನಡೆಸಬೇಕು ಎಂದು ಅವರು ಶುಭಹಾರೈಸಿದರು.
ವ್ಯಸನಮುಕ್ತರಾಗಿ ಸಾರ್ಥಕ ಜೀವನ ನಡೆಸಲು ಸಹಕರಿಸಿದವರಿಗೆ ಜಾಗೃತಿಅಣ್ಣ ಮತ್ತು ಜಾಗೃತಿಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್, ಸತೀಶ್ ಹೊನ್ನವಳ್ಳಿ, ರಾಮಸ್ವಾಮಿ, ರಾಜಣ್ಣ ಕೊರವಿ ಉಪಸ್ಥಿತರಿದ್ದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ಸ್ವಾಗತಿಸಿದರು. ಅನಿಲ್ ಕುಮಾರ್ ವಂದಿಸಿದರು. ಯೋಜನಾಧಿಕಾರಿಗಳಾದ ಮೋಹನ್ ಕೆ., ಮತ್ತು ಗಣೇಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.