ಬರಪೀಡಿತ ತಾಲೂಕುಗಳ ಘೋಷಣೆಯಲ್ಲಿ ಮೊದಲಿಗೆ ಕೈ ಬಿಟ್ಟಿದ್ದ ಸರ್ಕಾರ ಇದೀಗ ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ ನಗರ ತಾಲೂಕುಗಳನ್ನು ಬರಪೀಡಿತ ಪ್ರವೇಶವೆಂದು ಘೋಷಿಸಿದ್ದು ಇದರ ಲಾಭ ಪಡೆಯಲು ಕ್ರೆಡಿಟ್ ವಾರ್ ಶುರುವಾಗಿದೆ.
ಹುಬ್ಬಳ್ಳಿ:
ಬರಪೀಡಿತ ತಾಲೂಕುಗಳ ಘೋಷಣೆಯಲ್ಲಿ ಮೊದಲಿಗೆ ಕೈ ಬಿಟ್ಟಿದ್ದ ಸರ್ಕಾರ ಇದೀಗ ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ ನಗರ ತಾಲೂಕುಗಳನ್ನು ಬರಪೀಡಿತ ಪ್ರವೇಶವೆಂದು ಘೋಷಿಸಿದ್ದು ಇದರ ಲಾಭ ಪಡೆಯಲು ಕ್ರೆಡಿಟ್ ವಾರ್ ಶುರುವಾಗಿದೆ.
ಮೊದಲ ಪಟ್ಟಿಯಲ್ಲಿ ಧಾರವಾಡ ಜಿಲ್ಲೆಯ ಯಾವುದೇ ತಾಲೂಕು ಇರಲಿಲ್ಲ. ಇದಕ್ಕೆ ಆಡಳಿತ ಪಕ್ಷ ಸೇರಿದಂತೆ ಪ್ರತಿಪಕ್ಷದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್, ಬಿಜೆಪಿಗರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ರೈತರು ಹೋರಾಟ ನಡೆಸಿದ್ದರು. ಈ ನಡುವೆ ಇದೀಗ ರಾಜ್ಯ ಸರ್ಕಾರ ಶುಕ್ರವಾರ 24 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಪಟ್ಟಿ ಬಿಡುಗಡೆ ಮಾಡಿದೆ. ತೀವ್ರ ಬರ ಇಲ್ಲ. ಸಾಧಾರಣ ಬರ ಎಂದು ತಿಳಿಸಿದೆ. ಆದರೂ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ತಾಲೂಕುಗಳ ಪಟ್ಟಿ ಇರುವ ರೈತರಲ್ಲಿ ಕೊಂಚ ಸಮಾಧಾನವನ್ನುಂಟು ಮಾಡಿದೆ. ಅಣ್ಣಿಗೇರಿ, ನವಲಗುಂದ, ಹುಬ್ಬಳ್ಳಿ, ಹುಬ್ಬಳ್ಳಿ ನಗರ ಈ ನಾಲ್ಕು ತಾಲೂಕಗಳನ್ನು ಬರಪೀಡಿತ ಎಂದು ಘೋಷಿಸಿದೆ.
ಇದೀಗ ಕಾಂಗ್ರೆಸ್ ತಾವು ಸಲ್ಲಿಸಿದ ಮನವಿಗೆ ಸ್ಪಂದಿಸಿ ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಎಂದು ತಿಳಿಸಿದ್ದರೆ, ಹೋರಾಟದ ಎಚ್ಚರಿಕೆ ನೀಡಿದ ಕಾರಣ ಬರಪೀಡಿತ ಎಂದು ಘೋಷಿಸಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
ನಮ್ಮ ತಾಲೂಕು ಏಕಿಲ್ಲ:
ಈ ನಡುವೆ ಕಲಘಟಗಿ, ಅಳ್ನಾವರ, ಕುಂದಗೋಳ ಹಾಗೂ ಧಾರವಾಡ ತಾಲೂಕುಗಳನ್ನು ಕೈ ಬಿಡಲಾಗಿದೆ. ನಮ್ಮ ತಾಲೂಕುಗಳಲ್ಲೂ ಮಳೆ ಕೊರತೆಯಿಂದಾಗಿ ಸಾಕಷ್ಟು ಬೆಳೆಹಾನಿ ಅನುಭವಿಸಿದ್ದೇವೆ. ಇಡೀ ಜಿಲ್ಲೆಯನ್ನೇ ಬರಪೀಡಿತ ಎಂದು ಘೋಷಿಸಬೇಕು. ತಾರತಮ್ಯ ಮಾಡಬೇಡಿ ಎಂಬ ಒತ್ತಾಯ ಬರಪೀಡಿತ ವಂಚಿತ ತಾಲೂಕುಗಳ ರೈತ ಸಮುದಾಯದ್ದು.ಸಲ್ಲಿಸಿದ ಮನವಿಗೆ ಸರ್ಕಾರ ಸ್ಪಂದಿಸಿದೆ: ಕೋನರಡ್ಡಿ
ಧಾರವಾಡ ಜಿಲ್ಲೆಯ ನವಲಗುಂದ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಇದೀಗ ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಇದಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಡಿಸಿಎಂ ಜಿ. ಪರಮೇಶ್ವರ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದು ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದ್ದಾರೆ.ರೈತರ ಹೋರಾಟಕ್ಕೆ ಸಂದ ಜಯ: ಮುನೇನಕೊಪ್ಪ
ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಸೆ. 8ರೊಳಗೆ ಘೋಷಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದೆ. ಇದೀಗ ಗಡುವಿನೊಳಗೆ ಸರ್ಕಾರ 3 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ. ಇದರೊಂದಿಗೆ ರೈತರ ಪರವಾಗಿ ನಡೆದ ಹೋರಾಟಕ್ಕೆ ಜಯ ದೊರೆತಂತಾಗಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.
ಸರ್ಕಾರಕ್ಕೆ ಧನ್ಯವಾದಗಳು: ಅಸೂಟಿ
ಬರಪೀಡಿತ ತಾಲೂಕುಗಳ ಘೋಷಣೆಯಾದ ವೇಳೆ ಮೊದಲಿಗೆ ಜಿಲ್ಲೆಯನ್ನು ಕೈಬಿಡಲಾಗಿತ್ತು. ಅದರಲ್ಲೂ ಬರ ಎದುರಿಸುತ್ತಿರುವ ನವಲಗುಂದ ಕ್ಷೇತ್ರವನ್ನು ಬಿಟ್ಟಿರುವುದು ಬೇಸರವನ್ನುಂಟು ಮಾಡಿತ್ತು. ಈ ಸಂಬಂಧ ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಲಾಗಿತ್ತು. ಇದೀಗ ಸರ್ಕಾರ 2ನೇ ಪಟ್ಟಿಯಲ್ಲಿ ನವಲಗುಂದ ಕ್ಷೇತ್ರವನ್ನೂ ಸೇರಿಸಿ ಘೋಷಿಸಿರುವುದು ಒಳ್ಳೆಯದು. ಇದಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಡಿಸಿಎಂ ಜಿ. ಪರಮೇಶ್ವರ ಅವರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಯುವ ಮುಖಂಡ ವಿನೋದ ಅಸೂಟಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.