ಗೀತೆಯ ಸಂದೇಶ, ಬಸವಣ್ಣನವರ ಕಾಯಕ ತತ್ವದಿಂದ ರಾಷ್ಟ್ರ ಬಲಿಷ್ಠ

KannadaprabhaNewsNetwork |  
Published : Sep 05, 2026, 02:15 AM IST
ಗದಗ ಜಿಲ್ಲಾಡಳಿತ ಭವನದ ಅಡಿಟೋರಿಯಂನಲ್ಲಿ ಶುಕ್ರವಾರ ಶ್ರೀಕೃಷ್ಣ ಜಯಂತಿ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಗದಗ ಜಿಲ್ಲಾಡಳಿತ ಭವನದ ಅಡಿಟೋರಿಯಂನಲ್ಲಿ ಶುಕ್ರವಾರ ಭಗವಾನ್ ಶ್ರೀಕೃಷ್ಣ ಜಯಂತಿ 2026 ನಡೆಯಿತು. ಶ್ರೀಕೃಷ್ಣ ವೇಷ ಧರಿಸಿದ ವಿದ್ಯಾರ್ಥಿಗಳು ಗಮನ ಸೆಳೆದರು.

ಗದಗ: ಶ್ರೀಕೃಷ್ಣ ಪರಮಾತ್ಮನ ಭಗವದ್ಗೀತೆಯ ಸಂದೇಶಗಳು ಹಾಗೂ ಜಗಜ್ಯೋತಿ ಬಸವೇಶ್ವರರ ಕಾಯಕವೇ ಕೈಲಾಸ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮೃದ್ಧ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ವಿಧಾನಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿದರು.

ಜಿಲ್ಲಾಡಳಿತ ಭವನದ ಅಡಿಟೋರಿಯಂನಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಭಗವಾನ್ ಶ್ರೀಕೃಷ್ಣ ಜಯಂತಿ 2026 ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಫಲದ ನಿರೀಕ್ಷೆಯಿಲ್ಲದೆ ಕರ್ತವ್ಯ ನಿರ್ವಹಿಸುವುದೇ ನಿಜವಾದ ಧರ್ಮ. ಮಾಂಸಾಹಾರ, ಮದ್ಯಪಾನ, ಜೂಜಾಟದಂತಹ ದುಶ್ಚಟಗಳಿಂದ ದೂರವಿದ್ದು, ಸತ್ಯ ಮತ್ತು ನೈತಿಕತೆಯ ಹಾದಿಯಲ್ಲಿ ನಡೆಯಬೇಕು. ಹಿಂದುಳಿದ ಸಮಾಜಗಳು ಮುಂಚೂಣಿಗೆ ಬರಲು ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಶ್ರೀಕೃಷ್ಣ ತನ್ನ ಜೀವನದಲ್ಲಿ ಯಾವುದೇ ಕಾರ್ಯವನ್ನು ಸ್ವಾರ್ಥಕ್ಕಾಗಿ ಮಾಡಲಿಲ್ಲ. ಆತನ ಪ್ರತಿಯೊಂದು ಹೆಜ್ಜೆಯೂ ಸಮಾಜದ ಹಿತ ಹಾಗೂ ಧರ್ಮ ಸಂಸ್ಥಾಪನೆಗಾಗಿ ಇತ್ತು. ಕರ್ಣ, ದ್ರೋಣಾಚಾರ್ಯ ಹಾಗೂ ಭೀಷ್ಮರ ಪ್ರಸಂಗಗಳಲ್ಲಿ ಕೃಷ್ಣ ತೆಗೆದುಕೊಂಡ ನಿರ್ಧಾರಗಳು ಧರ್ಮದ ಗೆಲುವಿಗಾಗಿ ರೂಪಿಸಿದ ವಿಶಾಲ ಯೋಜನೆಯ ಭಾಗವಾಗಿದ್ದವು. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕು. ನಮಗೆ ತಪ್ಪು ಅನಿಸುವ ಕೆಲಸವನ್ನು ಮಾಡದಿರುವುದೇ ನಿಜವಾದ ಕರ್ತವ್ಯವಾಗಿದೆ. ಯಾವುದೇ ಕೆಲಸ ಕೈಗೊಳ್ಳುವ ಮುನ್ನ ಅದರ ಸಾಧಕ-ಬಾಧಕಗಳನ್ನು ಸರಿಯಾಗಿ ಲೆಕ್ಕಾಚಾರ ಮಾಡಿ ಮುನ್ನಡೆದರೆ ತಪ್ಪುಗಳು ಕಡಿಮೆಯಾಗುತ್ತವೆ. ಸದಾ ಧನಾತ್ಮಕ ಮನೋಭಾವನೆಯೊಂದಿಗೆ ಸಮಾಜದ ಒಳಿತಿಗಾಗಿ ಶ್ರಮಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.

ಉಪನ್ಯಾಸ ನೀಡಿದ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ, ಗೋವರ್ಧನ ಗಿರಿಧಾರಿ ಕೃಷ್ಣನ ಲೀಲೆಗಳು ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ಸಾರುತ್ತವೆ. ಯುವಜನತೆ ದುಶ್ಚಟಗಳಿಂದ ದೂರವಿದ್ದು ಶಿಕ್ಷಣ, ಕೌಶಲ್ಯಗಳ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಾಬರ್ಚಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಜಿಪಂ ಉಪ ಕಾರ್ಯದರ್ಶಿ ಸಿ. ಆರ್. ಮುಂಡರಗಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ವಿ. ಬಳ್ಳಾರಿ ಉಪಸ್ಥಿತರಿದ್ದರು. ಬಾಹುಬಲಿ ಜೈನ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಟ್ಟಿಹಳ್ಳಿ, ಹಿರೇಕೆರೂರು ತಾಲೂಕು ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಆಗ್ರಹ
ಚಳಿ, ಮಳೆ-ಗಾಳಿಯನ್ನದೆ ಪತ್ರಿಕೆ ವಿತರಣೆ ಮಾಡುವ ವಿತರಕರ ಸೇವೆ ನಿಜಕ್ಕೂ ಶ್ಲಾಘನೀಯ