ಗುತ್ತಲ: ಕಬ್ಬಿನ ದರ ನಿಗದಿ ಮಾಡದೇ ಕಾರ್ಖಾನೆ ಪ್ರಾರಂಭಿಸಲು ಅವಕಾಶ ಕೊಡಬಾರದು ಮತ್ತು ರೈತರು ಯಾವುದೇ ಕಾರ್ಖಾನೆಯವರು ಕಬ್ಬು ಕಟಾವು ಮಾಡಲು ಬ್ಯಾಚ್ ಹಾಕಿದರೆ ಕಬ್ಬನ್ನು ಕಟಾವು ಮಾಡಲು ಅವಕಾಶ ಕೊಡದಂತೆ ಒಟ್ಟಿನಿಂದ ಇದ್ದರೇ ಮಾತ್ರ ರೈತರಿಗೆ ನ್ಯಾಯಯುತ ಬೆಲೆ ಸಿಗಲು ಸಾಧ್ಯ ಎಂದು ಜಿಲ್ಲಾ ಕಬ್ಬು ಬೆಳೆಗಾರರ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕರಡ್ಡಿ ಮರ್ಚರಡ್ಡೇರ ರೈತರಿಗೆ ಕರೆ ನೀಡಿದರು.
ಸಭೆಯಲ್ಲಿ ಕಬ್ಬಿನ ದರ ನಿಗದಿ, ಕಬ್ಬಿನ ರಿಕವರಿ ಚೆಕ್ ಮಾಡುವ ಲ್ಯಾಬ್ ಸ್ಥಾಪನೆ, ತುರ್ತಾಗಿ ಅಗ್ನಿಶಾಮಕ ಠಾಣೆ ಸ್ಥಾಪನೆ ಹಾಗೂ ಸಕ್ಕರೆ ಕಾರ್ಖಾನೆ ಲೋಪದೋಷಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.
ಸಂಗೂರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ಮುತ್ತಣ ಯಲಿಗಾರ, ಗೌಡಪ್ಪಗೌಡ ಪಾಟೀಲ, ಸಿ. ಸಿ. ತೋಟಗೇರ, ಸುರೇಶ ಸಜ್ಜನವರ, ದಿಳ್ಳೆಪ್ಪ ಕುದರ‍್ಯಾಳ, ಬಸಲಿಂಗಪ್ಪ ನರಗುಂದ ಸೇರಿದಂತೆ ಅನೇಕರು ಮಾತನಾಡಿದರು.ಸಭೆಯಲ್ಲಿ 1) 2026-27 ನೇ ಸಾಲಿನ ಕಬ್ಬಿನ ದರ ನಿಗದಿ ಮಾಡದೇ ಕಾರ್ಖಾನೆಯನ್ನು ಪ್ರಾರಂಭಿಸಲು ಅವಕಾಶ ಕೊಡಬಾರದು. ಮತ್ತು ನವ್ಹಂಬರ್ 1ನೇ ತಾರೀಖಿನ ಒಳಗಾಗಿ ಕಾರ್ಖಾನೆಯನ್ನು ಪ್ರಾರಂಭಿಸದಂತೆ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸುವುದು. 2) ಕಬ್ಬಿನ ರಿಕವರಿ ಚೆಕ್ ಮಾಡುವ ಲ್ಯಾಬ್‌ನ್ನು ಕೆಎಸ್‌ಎಸ್‌ಕೆ ಸಂಗೂರ ಕಾರ್ಖಾನೆಯ ಆವರಣದಲ್ಲಿ ತೆರೆಯಲು ಮತ್ತು ವೇಬ್ರೀಡ್ಜ್ ನ್ನು ಅಳವಡಿಸಲು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸುವದು. 3) ಕಬ್ಬನ್ನು ಯಂತ್ರದ ಕಟಾವ ಮುಖಾಂತರ ಮಾಡಿದಾಗ 8% ವೇಸ್ಟೇಜ್ ಕಡಿತಗೊಳಿಸುವುದನ್ನು ಕೆಲವು ಕಾರ್ಖಾನೆಗಳು 6% ಗೆ ಕಟಿಂಗ್ ಮಾಡುತ್ತಿದ್ದು, ಅದು ರೈತರಿಗೆ ತುಂಬಾ ಹೊರೆಯಾಗುತ್ತದೆ ಕಾರಣ ಸದರಿ ವೇಸ್ಟೇಜ್ ಕಡಿತವನ್ನು ಇನ್ನೂ 2% ರಂತೆ ಕಡಿಮೆ ಮಾಡಲು ವಿನಂತಿಸಿ ಮನವಿ ಕೊಡುವುದು. 4) ಕಾರ್ಖಾನೆಗಳು ಕಬ್ಬು ಕಟಾವು ಮಾಡಲು ಬ್ಯಾಚ್‌ಗಳನ್ನು ಹಾಕಿದಾಗ ಅವರಿಂದ ಕಾರ್ಖಾನೆಗಳು ಕೊಡುವ ರಕುಮುನ ಮೇಲೆ ಮತ್ತೆ ರೈತರಿಂದ ಸಿಕ್ಕಾಪಟ್ಟೆ ಹಣ ವಸೂಲಿ ಮಾಡುತ್ತಿದ್ದು ಆ ರೀತಿ ಆಗದಂತೆ ಕ್ರಮ ತೆಗೆದುಕೊಳ್ಳಲು ಕಾರ್ಖಾನೆಯವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸುವದು. 5) ಕಬ್ಬಿಗೂ ಸಹ ಬೆಳೆವಿಮೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಆಗ್ರಹಿಸುವುದು ಎಂದು 5 ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.