ಹಾವೇರಿ ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ

KannadaprabhaNewsNetwork |  
Published : Sep 05, 2026, 02:15 AM IST
4ಎಚ್‌ವಿಆರ್1-  | Kannada Prabha

ಸಾರಾಂಶ

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ಹಾನಗಲ್ಲ ರಸ್ತೆಯಲ್ಲಿರುವ ಶ್ರೀಕೃಷ್ಣ ಮಂದಿರದಲ್ಲಿ ಶುಕ್ರವಾರ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಗಳು ಭಕ್ತಿಭಾವದಿಂದ ಜರುಗಿದವು.

ಹಾವೇರಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ಹಾನಗಲ್ಲ ರಸ್ತೆಯಲ್ಲಿರುವ ಶ್ರೀಕೃಷ್ಣ ಮಂದಿರದಲ್ಲಿ ಶುಕ್ರವಾರ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಗಳು ಭಕ್ತಿಭಾವದಿಂದ ಜರುಗಿದವು.

ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಬೆಳಗಿನ ಜಾವ ಶ್ರೀಕೃಷ್ಣ ದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಕಾಕಡಾ, ಮಲ್ಲಿಗೆ, ಸೇವಂತಿಗೆ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ಶ್ರೀಕೃಷ್ಣ ದೇವರನ್ನು ಅಲಂಕರಿಸಿ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು. ಜನ್ಮಾಷ್ಟಮಿಯೆಂದು ದೇವರ ದರ್ಶನ ಪಡೆದು ಭಕ್ತರು ಪುನೀತರಾದರು.

ಸಂಜೆ ಬೆಂಗಳೂರಿನ ಆಕಾಶವಾಣಿ ಕಲಾವಿದ ತುಷಾರ್ ಮಳಗಿ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು. ಭಕ್ತಿಗೀತೆ ಹಾಗೂ ದಾಸರ ಪದಗಳ ಗಾಯನಕ್ಕೆ ಭಕ್ತರು ಮಂತ್ರಮುಗ್ಧರಾದರು. ನಂತರ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಶುಕ್ರವಾರ ರಾತ್ರಿ 12.01ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿಶೇಷವಾಗಿ ತೊಟ್ಟಿಲಲ್ಲಿ ಶ್ರೀಕೃಷ್ಣನನ್ನು ಹಾಕುವ ಕಾರ್ಯಕ್ರಮ ನಡೆಯಿತು. ಶ್ರೀಕೃಷ್ಣನ ಜನನದ ಕ್ಷಣವನ್ನು ಭಕ್ತಿಭಾವದಿಂದ ಆಚರಿಸಿದ ಭಕ್ತರು ಜಯಘೋಷ ಮೊಳಗಿಸಿದರು. ಬಳಿಕ ಶ್ರೀಕೃಷ್ಣ ದೇವರಿಗೆ ವಿಶೇಷ ಪೂಜೆ, ಅರ್ಘ್ಯ, ಅಷ್ಟಾವಧಾನ ಹಾಗೂ ತೀರ್ಥ ಪ್ರಸಾದ ಸೇವೆ ಜರುಗಿತು. ಶ್ರೀಕೃಷ್ಣನ ಜನ್ಮದ ಮಹತ್ವ, ಧರ್ಮಸಂಸ್ಥಾಪನೆ ಹಾಗೂ ಭಕ್ತಿಮಾರ್ಗದ ಕುರಿತು ವಿವರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ವೆಂಕಟೇಶ್ವರ ಸೇವಾ ಟ್ರಸ್ಟ್ನ ಧರ್ಮದರ್ಶಿ ವಸಂತ ಮೊಕ್ತಾಲಿ ಸೇರಿದಂತೆ ನಗರದ ವಿವಿಧ ಬಡಾವಣೆಗಳ ಶ್ರೀಕೃಷ್ಣನ ಭಕ್ತರು, ಮಹಿಳೆಯರು, ಮಕ್ಕಳು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನದಲ್ಲಿ ದಿನವಿಡೀ ಭಕ್ತರ ಸಂಚಾರ ಕಂಡುಬಂದಿದ್ದು, ಜನ್ಮಾಷ್ಟಮಿ ಆಚರಣೆ ಸಂಭ್ರಮದಿಂದ ನೆರವೇರಿತು.

ಗಮನ ಸೆಳೆದ ಕೃಷ್ಣ, ಗೋಪಿಕೆಯರು:

ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಜಿಲ್ಲೆಯ ಕೃಷ್ಣ ಮಂದಿರದಲ್ಲಿ ಮುದ್ದು ಮಕ್ಕಳು ಗೋಪಿಕಾ ಹಾಗೂ ರಾಧೆಯ ಉಡುಗೆ-ತೊಡುಗೆ ಧರಿಸಿ ಮಿಂಚಿದರು. ಬಣ್ಣಬಣ್ಣದ ಸಾಂಪ್ರದಾಯಿಕ ಉಡುಪು, ಆಭರಣ, ಹೂವಿನ ಅಲಂಕಾರ ಹಾಗೂ ಕೃಷ್ಣನ ಬಾಲಲೀಲೆಯನ್ನು ಬಿಂಬಿಸುವ ವೇಷಭೂಷಣ ತೊಟ್ಟ ಮಕ್ಕಳು ಎಲ್ಲರ ಗಮನ ಸೆಳೆದರು. ಕೆಲ ಮಕ್ಕಳು ಕೃಷ್ಣನ ವೇಷದಲ್ಲಿಯೂ ಕಂಗೊಳಿಸಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

ಮಕ್ಕಳ ಅಂದ-ಚಂದದ ಅಲಂಕಾರ ಕಂಡ ಪೋಷಕರು ಖುಷಿಪಟ್ಟರು. ಮುದ್ದು ಮಕ್ಕಳೊಂದಿಗೆ ಪೋಷಕರು ಛಾಯಾಚಿತ್ರಗಳನ್ನು ಸೆರೆಹಿಡಿದು ಸಂಭ್ರಮಿಸಿದರು. ಮಕ್ಕಳ ನಗು, ಸಂಭ್ರಮ ಹಾಗೂ ಕೃಷ್ಣನಾಮದ ಜಯಘೋಷದಿಂದ ಮಂದಿರದ ಆವರಣದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು.

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆ.5ರಂದು ಶ್ರೀ ಕೃಷ್ಣನ ಪೂಜೆ, ನೈವೇದ್ಯ ಸಮರ್ಪಣೆ, ತೀರ್ಥ ಪ್ರಸಾದ ಹಾಗೂ ಮಹಾ ಪ್ರಸಾದ ವಿತರಣೆ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಟ್ಟಿಹಳ್ಳಿ, ಹಿರೇಕೆರೂರು ತಾಲೂಕು ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಆಗ್ರಹ
ಚಳಿ, ಮಳೆ-ಗಾಳಿಯನ್ನದೆ ಪತ್ರಿಕೆ ವಿತರಣೆ ಮಾಡುವ ವಿತರಕರ ಸೇವೆ ನಿಜಕ್ಕೂ ಶ್ಲಾಘನೀಯ