ಎಐ ನೆರವಿನಿಂದ ಮಕ್ಕಳಿಗೆ ಪಾಠ; ಶಿಕ್ಷಕ ರವಿ ಅಂತರವಳ್ಳಿ ಮಾದರಿ

KannadaprabhaNewsNetwork |  
Published : Sep 05, 2026, 02:15 AM IST
ಹೊಸಹುಲಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಐ ನೆರವಿನಿಂದ ಸ್ಮಾರ್ಟ್‌ಕ್ಲಾಸ್ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕ ರವಿ ಅಂತರವಳ್ಳಿ. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಹೆಚ್ಚಾಗುತ್ತಿದ್ದು, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮಕ್ಕಳಿಗೆ ಪಾಠವನ್ನು ಸರಳವಾಗಿ, ಆಸಕ್ತಿದಾಯಕವಾಗಿ ಹಾಗೂ ಮನದಟ್ಟಾಗುವಂತೆ ಮಾಡುತ್ತಿರುವ ರಾಣಿಬೆನ್ನೂರು ತಾಲೂಕಿನ ಹೊಸಹುಲಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರವಿ ಅಂತರವಳ್ಳಿ ಅವರು ಗಮನ ಸೆಳೆದಿದ್ದಾರೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಹೆಚ್ಚಾಗುತ್ತಿದ್ದು, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮಕ್ಕಳಿಗೆ ಪಾಠವನ್ನು ಸರಳವಾಗಿ, ಆಸಕ್ತಿದಾಯಕವಾಗಿ ಹಾಗೂ ಮನದಟ್ಟಾಗುವಂತೆ ಮಾಡುತ್ತಿರುವ ರಾಣಿಬೆನ್ನೂರು ತಾಲೂಕಿನ ಹೊಸಹುಲಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರವಿ ಅಂತರವಳ್ಳಿ ಅವರು ಗಮನ ಸೆಳೆದಿದ್ದಾರೆ.

ಪಠ್ಯಕ್ರಮಕ್ಕೆ ಅನುಗುಣವಾಗಿ ಮಕ್ಕಳ ಕಲಿಕೆಗೆ ಅಗತ್ಯವಿರುವ ಮಾಹಿತಿಯನ್ನು ಎಐ ಆಧಾರಿತ ಜೆಮಿನಿ ಹಾಗೂ ಗೂಗಲ್ ಫ್ಲೋ ಅಪ್ಲಿಕೇಶನ್‌ಗಳ ಮೂಲಕ ಸಂಗ್ರಹಿಸುವ ಅವರು, ಸುಮಾರು 10ರಿಂದ 20 ನಿಮಿಷಗಳಲ್ಲಿ ಪಾಠಕ್ಕೆ ಬೇಕಾದ ವಿಷಯವನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಬಳಿಕ ಅದನ್ನು ಶಾಲೆಯ ಸ್ಮಾರ್ಟ್‌ಕ್ಲಾಸ್ ಟಿವಿಯಲ್ಲಿ ಪ್ರದರ್ಶಿಸಿ, ವಿಡಿಯೊ ಹಾಗೂ ದೃಶ್ಯಮಾಧ್ಯಮದ ಮೂಲಕ ಮಕ್ಕಳಿಗೆ ವಿಷಯವನ್ನು ವಿವರಿಸುತ್ತಿದ್ದಾರೆ.

ಪಾಠದ ಸಂದರ್ಭದಲ್ಲಿ ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೆ, ಚಿತ್ರ, ವಿಡಿಯೋ ಹಾಗೂ ಉದಾಹರಣೆಗಳ ಮೂಲಕ ವಿಷಯವನ್ನು ವಿವರಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚುತ್ತಿದೆ. ವಿಶೇಷವಾಗಿ ಇಂಗ್ಲಿಷ್ ವಿಷಯ ಬೋಧನೆಯಲ್ಲಿ ವ್ಯಾಕರಣಕ್ಕೆ ಒತ್ತು ನೀಡುತ್ತಿರುವ ರವಿ ಅವರು, ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಪಾಠಗಳನ್ನು ರೂಪಿಸುತ್ತಿದ್ದಾರೆ. ಅಗತ್ಯವಿದ್ದಾಗ ಇನ್‌ಶಾಟ್ ಸೇರಿದಂತೆ ವಿವಿಧ ಡಿಜಿಟಲ್ ಪರಿಕರಗಳ ಸಹಾಯದಿಂದ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಿ ಬಳಸುತ್ತಿದ್ದಾರೆ.

ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದಲ್ಲಿ ಕಲಿಕೆಗೆ ಒತ್ತು ನೀಡಿರುವ ಹಿನ್ನೆಲೆಯಲ್ಲಿ, ಇಂಗ್ಲಿಷ್ ಕಲಿಕೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ರವಿ ಅವರ ಈ ಪ್ರಯತ್ನ ಗಮನಾರ್ಹವಾಗಿದೆ. ತಂತ್ರಜ್ಞಾನವನ್ನು ಮಕ್ಕಳ ಕಲಿಕೆಗೆ ಪೂರಕವಾಗಿ ಬಳಸಿಕೊಂಡು, ಸಂಕೀರ್ಣ ವಿಷಯಗಳನ್ನೂ ಸರಳವಾಗಿ ಅರ್ಥೈಸುವಂತೆ ಮಾಡುತ್ತಿರುವುದು ಇತರ ಶಿಕ್ಷಕರಿಗೂ ಮಾದರಿಯಾಗಿದೆ.

ಶಿಕ್ಷಕರ ವಿವರ: ರವಿ ಅಂತರವಳ್ಳಿ, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸಹುಲಿಹಳ್ಳಿ, ರಾಣಿಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಟ್ಟಿಹಳ್ಳಿ, ಹಿರೇಕೆರೂರು ತಾಲೂಕು ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಆಗ್ರಹ
ಚಳಿ, ಮಳೆ-ಗಾಳಿಯನ್ನದೆ ಪತ್ರಿಕೆ ವಿತರಣೆ ಮಾಡುವ ವಿತರಕರ ಸೇವೆ ನಿಜಕ್ಕೂ ಶ್ಲಾಘನೀಯ