ಚಳ್ಳಕೆರೆ: ಚಳ್ಳಕೆರೆಯ ಎಸ್‌ಆರ್‌ಎಸ್ ಶಾಲೆ ವಿದ್ಯಾರ್ಥಿಗಳು ಅಭಿನಯಿಸಿದ ಸಂಪೂರ್ಣ ರಾಮಾಯಣ ದೃಶ್ಯಗಳು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದೆ.ಭಾನುವಾರ ರಾತ್ರಿ ಜರುಗಿದ ಮನರಂಜನೆ ಕಾರ್ಯಕ್ರಮದ ನಂತರ ಐಬಿಆರ್ ಸೇರ್ಪಡೆ ಸಂಗತಿಯ ಘೋಷಿಸಲಾಯಿತು. ಚಿತ್ರದುರ್ಗದ ಎಸ್‌ಆರ್‌ಎಸ್ ಸಮೂಹ ವಿದ್ಯಾಸಂಸ್ಥೆಯ ಅಂಗಸಂಸ್ಥೆಯಾದ ಚಳ್ಳಕೆರೆಯ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷದಂತೆ ಈ ವರ್ಷವೂ ಸಾಂಸ್ಕೃತಿಕ ಕಾರ್ಯಕ್ರಮ ಸಾಕಾರಗೊಳಿಸಿದ್ದರು. ರಂಗತರಂಗ ವರ್ಣರಂಜಿತ ಪ್ರತಿಭೆಗಳ ಝೆಂಕಾರ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರುಗಂಟೆಗಳಿಗೂ ಹೆಚ್ಚು ಕಾಲ ಮಹರ್ಷಿ ವಾಲ್ಮೀಕಿಯವರ ಸಂಪೂರ್ಣ ರಾಮಾಯಣದ ದೃಶ್ಯಗಳನ್ನು ನಿರಂತರವಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸಾಲದೆಂಬಂತೆ ಇದು ಇಂಡಿಯಾಬುಕ್ ಆಫ್ ರೆಕಾರ್ಡ್‌ಗೆ ದಾಖಲಾಯಿತು. ಬಳ್ಳಾರಿ ರಸ್ತೆಯ ಎಸ್‌ಆರ್‌ಎಸ್ ಪದವಿಪೂರ್ವಕಾಲೇಜಿನಲ್ಲಿ ಆಯೋಜಿಸಿದ್ದ ಈ ವರ್ಣರಂಜಿತ ಕಾರ್ಯಕ್ರಮವನ್ನು ಸುಮಾರು 3 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು, ಮೂರು ಗಂಟೆಗಳ ಕಾಲ ಕುಳಿತಲ್ಲೇ ಕುಳತು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ರಾಮಾಯಣದ ಪ್ರತಿದೃಶ್ಯವನ್ನು ಕಣ್ಣಿಗೆಕಟ್ಟುವಂತೆ ಅಭಿಯನಿಸಿದ ವಿದ್ಯಾರ್ಥಿಗಳ ಪ್ರೌಡಿಮೆಯನ್ನು ಕೊಂಡಾಡಿದರು. ಇದೇ ಮೊದಲ ಬಾರಿಗೆ ಇಂತಹ ವಿನೂತನ ಕಾರ್ಯಕ್ರಮವನ್ನು ಎಸ್‌ಆರ್‌ಎಸ್ ವಿದ್ಯಾಸಂಸ್ಥೆ ಕೈಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸಿದ್ದ ಬುಕ್ ಆಫ್ ರೆಕಾರ್ಡ್‌ನ ಅಧಿಕಾರಿ ಡಾ.ಸಹಾಯರಾಜ್ ತಂಡ ಪ್ರದರ್ಶನವನ್ನು ವೀಕ್ಷಿಸಿ ಸಂತಸಪಟ್ಟು ಸ್ಥಳದಲ್ಲೇ ಈ ಪ್ರದರ್ಶನ ಇಂಡಿಯಾಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ, ಎಸ್‌ಆರ್‌ಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮೂರು ಗಂಟೆಗಳ ಕಾಲ ಸಂಪೂರ್ಣ ರಾಮಾಯಣವನ್ನು ಅಭಿನಯದ ಮೂಲಕ ಪ್ರದರ್ಶಿಸಿರುವುದು ಸಂತಸ ತಂದಿದೆ. ವಿಶ್ವವೇ ಮೆಚ್ಚುವಂತಹ ರಾಮಾಯಣದ ಪಾತ್ರಗಳಿಗೆ ಶಾಲಾ ವಿದ್ಯಾರ್ಥಿಗಳು ಜೀವತುಂಬಿ ಅಭಿನಯಿಸಿದ್ದಾರೆ. ಇಡಿ ನಾಟಕ ಪ್ರದರ್ಶನದಲ್ಲಿ ಯಾವುದೇ ಸಣ್ಣಲೋಪವಾಗದಂತೆ ಜಾಗ್ರತೆ ವಹಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಅಪರೂಪವಷ್ಟೆಯಲ್ಲ, ಅಮೋಘದಿಂದ ಕೂಡಿದೆ ಎಂದ ಅವರು, ರಾಮಾಯಣ ನಾಟಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಆಗಿರುವುದು ಸಂತಸ ತಂದಿದೆ ಎಂದು ಹೇಳಿದರು..