ಕೊಡಗು ಬೋಧಕ ಆಸ್ಪತ್ರೆಗೆ ಹೆಚ್ಚುವರಿ 300 ಹಾಸಿಗೆ ಶೀಘ್ರ ಸೇರ್ಪಡೆ: ಡಾ. ಸೋಮಶೇಖರ್‌

KannadaprabhaNewsNetwork |  
Published : Sep 20, 2025, 01:02 AM IST
ಚಿತ್ರ : 19ಎಂಡಿಕೆ5 : ನಿವೃತ್ತ ನರ್ಸಿಂಗ್ ಸೂಪರಿಂಟೆಂಡೆಂಟ್ ವಸಂತಿ ಬಿ.ಅವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಕೊಡಗು ಪತ್ರಕರ್ತರ ಸಂಘ, ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಸಹಕಾರದೊಂದಿಗೆ ನಗರದ ಕಾವೇರಿ ಹಾಲ್‌ನಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬಸ್ಥರಿಗೆ ಆರೋಗ್ಯ ತಪಾಸಣಾ ಉಚಿತ ಶಿಬಿರ ನಡೆಯಿತು.

ಪತ್ರಕರ್ತರ ಆರೋಗ್ಯ ತಪಾಸಣಾ ಉಚಿತ ಶಿಬಿರಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಪತ್ರಕರ್ತರ ಸಂಘ, ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಸಹಕಾರದೊಂದಿಗೆ ನಗರದ ಕಾವೇರಿ ಹಾಲ್‌ನಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬಸ್ಥರಿಗೆ ಆರೋಗ್ಯ ತಪಾಸಣಾ ಉಚಿತ ಶಿಬಿರ ನಡೆಯಿತು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಎಚ್.ಕೆ.ಸೋಮಶೇಖರ್ ಮಾತನಾಡಿ, ನಗರದಲ್ಲಿರುವ ಬೋಧಕ ಆಸ್ಪತ್ರೆಯಲ್ಲಿ ಎರಡನೇ ಹಂತದ 300 ಹಾಸಿಗೆಗಳ ಆಸ್ಪತ್ರೆಯ ಕಾಮಗಾರಿಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಇದು ಪೂರ್ಣಗೊಳ್ಳುವ ಮೂಲಕ ಪ್ರಸ್ತುತ ಇರುವ ಆಸ್ಪತ್ರೆ 1050 ಹಾಸಿಗೆಗಳ ಆಸ್ಪತ್ರೆಯಾಗಿ ರೂಪುಗೊಳ್ಳಲಿದೆ. ಈ ಆಸ್ಪತ್ರೆಯಲ್ಲಿ ಅತ್ಯುನ್ನತ ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಶೀಘ್ರದಲ್ಲೇ ಸೂಪರ್ ಸ್ಪೆಷಾಲಿಟಿ ಮಟ್ಟದ ಸೌಲಭ್ಯ ದೊರಕುವ ವಿಶ್ವಾಸ ವ್ಯಕ್ತಪಡಿಸಿದರು.

ನ್ಯೂರೋಲಜಿ ಸೇರಿದಂತೆ ಕೆಲ ವಿಭಾಗಗಳ ಚಿಕಿತ್ಸಾ ಸೌಲಭ್ಯಗಳ ಆರಂಭ ಇನ್ನಷ್ಟೆ ಆಗಬೇಕಿದೆಯೆಂದು ತಿಳಿಸಿದ ಅವರು, ಉತ್ತಮ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ಬೋಧಕ ಆಸ್ಪತ್ರೆಯ ಪ್ರಯೋಜನವನ್ನು ಜಿಲ್ಲೆಯ ಜನತೆ ಪಡೆದುಕೊಳ್ಳುವಂತೆ ಕರೆ ನೀಡಿದರು.

ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ ಮಾತನಾಡಿ, ನಮ್ಮ ದೇಶದಲ್ಲಿ ಆರೋಗ್ಯ ಸಂರಕ್ಷಣೆಯನ್ನು ನಿರ್ಲಕ್ಷಿಸಿಕೊಂಡು ಬರಲಾಗುತ್ತಿದೆಯೆಂದು ಬೇಸರ ವ್ಯಕ್ತಪಡಿಸಿ, ವಿದೇಶಗಳಲ್ಲಿ 40 ವರ್ಷ ಪ್ರಾಯದ ಬಳಿಕ ವಾರ್ಷಿಕ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ರೂಢಿಗತವಾಗಿದೆ. ಅಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ ಮೂಲಕ ಆರೋಗ್ಯ ತಪಾಸಣೆ ಮಾಡಿಕೊಂಡು, ಯಾವುದೇ ಸಮಸ್ಯೆಗಳಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಬೇಕೆಂದು ಕರೆ ನೀಡಿದರು.

ಆಸ್ಪತ್ರೆಗಳು ಮೇಲ್ದರ್ಜೆಗೆ:

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸತೀಶ್ ಮಾತನಾಡಿ, ಕುಶಾಲನಗರದ 50 ಹಾಸಿಗೆ ಆಸ್ಪತೆಯನ್ನು 100 ಹಾಸಿಗೆಯ ಆಸ್ಪತ್ರೆಯನ್ನಾಗಿ ಶೀಘ್ರ ಮೇಲ್ದರ್ಜೆಗೇರಿಸಲಾಗುತ್ತದೆ. ವಿರಾಜಪೇಟೆಯ 90 ಹಾಸಿಗೆಯ ಆಸ್ಪತ್ರೆಯನ್ನು 240 ಹಾಸಿಗೆಯ ಸೌಲಭ್ಯವುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ.ಗೋಣಿಕೊಪ್ಪಲಿದ ಆರೋಗ್ಯ ಕೇಂದ್ರವನ್ನು ‘ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಯೆಂದು ತಿಳಿಸಿದರು.

ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ, ದಶಕಗಳ ಹಿಂದೆ ನಾವು ನೋಡಿದ್ದ ಜಿಲ್ಲಾ ಆಸ್ಪತ್ರೆ ಹಾಗೂ ಈಗಿನ ಬೋಧಕ ಆಸ್ಪತೆಗೆ ಅಜಗಜಾಂತರ ವ್ಯತ್ಯಾಸ ಕಾಣುತ್ತಿದ್ದು, ಪ್ರಸ್ತುತ ಬೋಧಕ ಆಸ್ಪತ್ರೆಯಲ್ಲಿ ಉತ್ತಮವಾದ ಚಿಕಿತ್ಸಾ ಸೌಲಭ್ಯಗಳು ದೊರಕುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿ.ರವಿ ಕುಮಾರ್, ಒತ್ತಡಗಳ ನಡುವೆ ಕಾರ್ಯನಿರ್ವಹಿಸುವ ಪತ್ರಕರ್ತರು ಹಾಗೂ ಅವರ ಕುಟುಂಬದ ಆರೋಗ್ಯ ಸಂರಕ್ಷಣೆಯ ಹಿತ ದೃಷ್ಟಿಯಿಂದ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಪ್ರಸ್ತುತ ನಗರದಲ್ಲಿ ಬೋಧಕ ಆಸ್ಪತ್ರೆಯನ್ನು ಶಾಸಕರ ಸಹಕಾರದೊಂದಿಗೆ ಮೇಲ್ದರ್ಜೆಗೇರಿಸಿರುವುದಲ್ಲದೆ, ಹೃದ್ರೋಗ ತಪಾಸಣಾ ಕೇಂದ್ರ ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದರು.ಕೊಡಗು ಪತ್ರಕರ್ತರ ಸಂಘದ ಖಜಾಂಚಿ ಟಿ.ಕೆ.ಸಂತೋಷ್ ಮಾತನಾಡಿದರು.ಫ್ಲಾರೆನ್ಸ್ ನೈಂಟಿಗೆಲ್ ಪ್ರಶಸ್ತಿ ಪುರಸ್ಕೃತೆಗೆ ಸನ್ಮಾನ:

ರಾಜ್ಯ ಸರ್ಕಾರ ಕೊಡಮಾಡುವ ಪ್ಲಾರೆನ್ಸ್ ನೈಂಟಿಗೆಲ್ ಪ್ರಶಸ್ತಿಗೆ ಭಾಜನರಾಗಿರುವ ನಿವೃತ್ತ ನರ್ಸಿಂಗ್ ಸೂಪರಿಂಟೆಂಡೆಂಟ್ ವಸಂತಿ ಬಿ. ಅವರನ್ನು ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು. ಇದೇ ಸಂದರ್ಭ ಡಾ.ಎಚ್.ಕೆ.ಸೋಮಶೇಖರ್, ಡಾ. ನಂಜುಂಡಯ್ಯ, ಡಾ.ಸತೀಶ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.ವೇದಿಕೆಯಲ್ಲಿ ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಚ್.ಆರ್.ಹರೀಶ್ ಕುಮಾರ್, ಕುಶಾಲನಗರ ತಾಲೂಕು ಅಧ್ಯಕ್ಷ ವಿಘ್ನೇಶ್ ಭೂತನಕಾಡು, ವಿರಾಜಪೇಟೆ ತಾಲೂಕು ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಉಪಸ್ಥಿತರಿದ್ದರು.ಸಂಘದ ಸದಸ್ಯರಾದ ಟಿ.ಜೆ.ಪ್ರವೀಣ್ ಕುಮಾರ್ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಅರುಣ್ ಕೂರ್ಗ್ ಸ್ವಾಗತಿಸಿದರು. ಪಿ.ಎಂ. ರವಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ವಂದಿಸಿದರು.ಬೆಳಗ್ಗಿನಿಂದ ಮಧ್ಯಾಹ್ನ 3 ಗಂಟೆ ವರೆಗೆ ಜಿಲ್ಲಾ ವ್ಯಾಪ್ತಿಯ ಪತ್ರಕರ್ತರು ಮತ್ತು ಅವರ ಕಟುಂಬದವರ ಆರೋಗ್ಯ ತಪಾಸಣಾ ಕಾರ್ಯ ನಡೆಯಿತು. ಕೊಡಗು ವ್ಯದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿಕೊಟ್ಟರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ