ಬಿಬಿಎಂಪಿಗೆ ಹೆಚ್ಚುವರಿ ₹750 ಕೋಟಿ ಸಂಗ್ರಹ : ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

KannadaprabhaNewsNetwork |  
Published : Aug 02, 2024, 01:00 AM ISTUpdated : Aug 02, 2024, 10:53 AM IST
ಬಿಬಿಎಂಪಿ | Kannada Prabha

ಸಾರಾಂಶ

ಆಸ್ತಿ ತೆರಿಗೆ ಪಾವತಿದಾರರಿಗೆ ಜುಲೈ ಅಂತ್ಯದ ವರೆಗೆ ಶೇಕಡ 5ರಷ್ಟು ರಿಯಾಯಿತಿ ಹಾಗೂ ಒನ್‌ ಟೈಮ್ ಸೆಟ್‌ಲ್ಮೆಂಟ್‌’ (ಒಟಿಎಸ್‌) ಯೋಜನೆ ಜಾರಿಯಿಂದ ಕಳೆದ ವರ್ಷಕ್ಕಿಂತ ₹750 ಕೋಟಿ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹವಾಗಿದೆ

 ಬೆಂಗಳೂರು :  ಆಸ್ತಿ ತೆರಿಗೆ ಪಾವತಿದಾರರಿಗೆ ಜುಲೈ ಅಂತ್ಯದ ವರೆಗೆ ಶೇಕಡ 5ರಷ್ಟು ರಿಯಾಯಿತಿ ಹಾಗೂ ಒನ್‌ ಟೈಮ್ ಸೆಟ್‌ಲ್ಮೆಂಟ್‌’ (ಒಟಿಎಸ್‌) ಯೋಜನೆ ಜಾರಿಯಿಂದ ಕಳೆದ ವರ್ಷಕ್ಕಿಂತ ₹750 ಕೋಟಿ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ 2023 ಏಪ್ರಿಲ್‌ನಿಂದ ಜುಲೈ 31ಕ್ಕೆ ₹2,457 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದರೆ ಈ ಬಾರಿ ₹3,200 ಕೋಟಿ ಆಗಿದ್ದು ಸುಮಾರು ₹750 ಕೋಟಿ ಹೆಚ್ಚುವರಿ ಸಂಗ್ರಹವಾಗಿದೆ ಎಂದು ತಿಳಿಸಿದರು.

ಈ ಬಾರಿ ಜುಲೈ ಅಂತ್ಯದವರೆಗೆ ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5 ರಷ್ಟು ರಿಯಾಯಿತಿ ನೀಡಿಕೆಯಿಂದ ಸುಮಾರು ₹270-300 ಕೋಟಿ ಹೆಚ್ಚುವರಿ ವಸೂಲಿ ಆಗಿದೆ. ಜತೆಗೆ ಓಟಿಎಸ್‌ ಯೋಜನೆ ಜಾರಿ ಫಲವಾಗಿ ಸುಮಾರು 400 ರಿಂದ 450 ಕೋಟಿ ರು. ವಸೂಲಿ ಆಗಿದೆ ಎಂದರು.

ಆರ್ಥಿಕ ವರ್ಷದ ಆರಂಭದಲ್ಲಿ 3.95 ಲಕ್ಷ ಆಸ್ತಿಗಳಿಂದ ₹733.71 ಕೋಟಿ ಆಸ್ತಿ ತೆರಿಗೆ ಸುಸ್ತಿ ವಸೂಲಿ ಬಾಕಿ ಇತ್ತು. ಈ ಪೈಕಿ 1.07 ಲಕ್ಷ ಆಸ್ತಿ ಮಾಲೀಕರು ₹217 ಕೋಟಿ ಬಾಕಿ ಪಾವತಿಸಿದ್ದಾರೆ. ಇದರಿಂದ ಸುಸ್ತಿದಾರರ ಸಂಖ್ಯೆ 2.74 ಲಕ್ಷಕ್ಕೆ ಇಳಿಕೆಯಾಗಿದ್ದು, ₹516 ಕೋಟಿ ವಸೂಲಿ ಬಾಕಿ ಇದೆ. ಇನ್ನು ತಪ್ಪಾಗಿ ಮತ್ತು ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಗೊಂಡ 6,723 ಆಸ್ತಿಗಳಿಂದ ₹163.13 ಕೋಟಿ ವಸೂಲಿಯಾಗಿದೆ ಎಂದು ವಿವರಿಸಿದರು.

ಓಟಿಎಸ್ ವಿಸ್ತರಣೆಗೆ ಚಿಂತನೆ

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಹಲವಾರು ಮಾಲೀಕರು ಓಟಿಎಸ್‌ ಅಡಿ ಪಾವತಿಗೆ ಮುಂದಾಗಿದ್ದಾರೆ. ಆದರೆ, ಜು.30 ಹಾಗೂ 31ರಂದು ಸರ್ವರ್‌ ಸಮಸ್ಯೆಯಿಂದ ಪಾವತಿ ಸಾಧ್ಯವಾಗಿಲ್ಲ. ಈ ಬಗ್ಗೆ ಕಂದಾಯ ವಿಭಾಗದ ಅಧಿಕಾರಿಗಳಿಂದ ವರದಿ ಪಡೆಯಲಾಗುವುದು. ಜತೆಗೆ, ಓಟಿಎಸ್‌ ಯೋಜನೆಯ ಅವಧಿ ವಿಸ್ತರಣೆಗೆ ಹಲವು ಸಂಘ ಸಂಸ್ಥೆಗಳು ಮನವಿ ಮಾಡಿವೆ. ಈ ಎಲ್ಲ ಮಾಹಿತಿಯನ್ನು ಆಧರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ಕಾರ ಅವಧಿ ವಿಸ್ತರಣೆ ಬಗ್ಗೆ ತೀರ್ಮಾನಿಸಲಿದೆ ಎಂದು ತುಷಾರ್‌ ತಿಳಿಸಿದರು.

ಆಸ್ತಿ ಹರಾಜಿಗೆ ಕಾಯ್ದೆ ತಿದ್ದುಪಡಿ

ಬಿಬಿಎಂಪಿ ಕಾಯ್ದೆಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಬ್ಯಾಂಕ್‌ ಖಾತೆ ಜಪ್ತಿ, ಸ್ತಿರಾಸ್ತಿ ಮತ್ತು ಚರಾಸ್ತಿ ಜಪ್ತಿ ಮಾಡಿದರೂ ಮಾರಾಟಕ್ಕೆ ಅವಕಾಶ ಇರಲಿಲ್ಲ. ಕಳೆದ ಫೆಬ್ರವರಿಯಲ್ಲಿ ಬಿಬಿಎಂಪಿಯ ಕಾಯ್ದೆಗೆ ಸರ್ಕಾರ ತಿದ್ದುಪಡಿ ಮಾಡಿದೆ. ಇದರಿಂದ ಹರಾಜು ಹಾಕುವ ಅಧಿಕಾರ ಬಿಬಿಎಂಪಿಗೆ ಲಭ್ಯವಾಗಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ಮೂರು ಬಾರಿ ನೋಟಿಸ್‌ ನೀಡಿ ಆಸ್ತಿ ತೆರಿಗೆ ವಸೂಲಿ ಮಾಡುವುದು. ಒಂದು ವೇಳೆ ಪಾವತಿ ಮಾಡದಿದ್ದರೆ ಚರಾಸ್ತಿ ಜಪ್ತಿ ಇಲ್ಲವೇ ಬ್ಯಾಂಕ್‌ ಖಾತೆ ಮತ್ತು ಸ್ಥಿರ ಆಸ್ತಿಯನ್ನು ಮುಟ್ಟುಗೋಲು ಹಾಕುವುದು. ಅಗತ್ಯವಾದರೆ, ಹರಾಜು ಹಾಕಲಾಗುವುದು ಎಂದು ತಿಳಿಸಿದರು.

ಜುಲೈ 31ಕ್ಕೆ ವಲಯವಾರು ಆಸ್ತಿ ತೆರಿಗೆ ಸಂಗ್ರಹ ವಿವರ (ಆನ್‌ಲೈನ್‌) (ಕೋಟಿ ರು.ಗಳಲ್ಲಿ)ವಲಯ2023-242024-25

ಬೊಮ್ಮನಹಳ್ಳಿ267.12316.10

ದಾಸರಹಳ್ಳಿ70.5896.21

ಪೂರ್ವ456.69544.46

ಮಹದೇವಪುರ643.43808.43

ಆರ್‌.ಆರ್‌.ನಗರ163.99212.42

ದಕ್ಷಿಣ385.86459.01

ಪಶ್ಚಿಮ267.36337.82

ಯಲಹಂಕ202.27291.40

ಒಟ್ಟು2,457.303,065.82

ಓಟಿಎಸ್ ಸಂಗ್ರಹ (ಏ.1ರಿಂದ ಜು.31)

ಆಸ್ತಿದಾರರುಆಸ್ತಿ ಸಂಖ್ಯೆಸಂಗ್ರಹ (ಕೋಟಿ ರು.)

ಸುಸ್ತಿದಾರರು1,07,344217.50

ಪರಿಷ್ಕೃತ ಬಾಕಿದಾರರು6,723163.13

ಒಟ್ಟು1,14,067380.63

₹3 ಸಾವಿರ ಕೋಟಿ ಸಾಲಕ್ಕೆ

ವಿಶ್ವ ಬ್ಯಾಂಕ್‌ ಅನುಮೋದನೆ

ಬೆಂಗಳೂರಿನ ವಿವಿಧ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೂಲಕ ವಿಶ್ವ ಬ್ಯಾಂಕ್‌ಗೆ ಸುಮಾರು ಮೂರು ಸಾವಿರ ಕೋಟಿ ರು. ಸಾಲ ನೀಡುವಂತೆ ಸಲ್ಲಿಸಿದ್ದ ಪ್ರಸ್ತಾವನೆಗೆ ವಿಶ್ವ ಬ್ಯಾಂಕ್‌ ಅನುಮೋದನೆ ನೀಡಿದೆ. ಈ ಸಂಬಂಧ ವಿಶ್ವ ಬ್ಯಾಂಕ್‌ ನೊಂದಿಗೆ ಒಪ್ಪಂದ ಬಾಕಿ ಇದೆ. ಮೂರು ಸಾವಿರ ಕೋಟಿ ರು. ಪೈಕಿ ಬಿಬಿಎಂಪಿಯ ವಿವಿಧ ಯೋಜನೆಗೆ ₹2 ಸಾವಿರ ಕೋಟಿ ಹಾಗೂ ಬೆಂಗಳೂರು ಜಲ ಮಂಡಳಿಗೆ ₹1 ಸಾವಿರ ಕೋಟಿ ಸಾಲ ಪಡೆಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಕಿ ಹಚ್ಚುವವರನ್ನು ನಂಬಬೇಡಿ: ಕೃಷಿ ಸಚಿವ ಚಲುವರಾಯಸ್ವಾಮಿ
ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಭಾಗಿತ್ವ ಅಗತ್ಯ