ರಾಮನಗರ: ಟೌನಿನ ಮನೆಗಳಿಗೆ ಕುಡಿಯುವ ನೀರನ್ನು ಕಾವೇರಿ ನದಿ ಮೂಲದ ನೆಟ್ಕಲ್ ಜಲಾಶಯದಿಂದ ಸರಬರಾಜು ಮಾಡುವ ಯೋಜನೆಯಡಿ ನಡೆದಿರುವ ಕಾಮಗಾರಿಗಳ ಸಂಬಂಧ ಸಮಿತಿ ಪಟ್ಟಿ ಮಾಡಿರುವ ಲೋಪದೋಷಗಳನ್ನು ಕೂಡಲೇ ಸರಿಪಡಿಸುವಂತೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ನಗರಸಭೆ ಸಭಾಂಗಣದಲ್ಲಿ ನೆಟ್ಕಲ್ ಯೋಜನೆಯಲ್ಲಿ ಕುಡಿಯುವ ನೀರು ಪೂರೈಸುವುದರಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ವಾಸ್ತವ ಮಾಹಿತಿ ಸಂಗ್ರಹಿಸಲು ರಚನೆಗೊಂಡಿದ್ದ ಸಮಿತಿ ವಾರ್ಡ್‌ವಾರು ಸಿದ್ದಪಡಿಸಿದ ವರದಿ ಕುರಿತಂತೆ ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಜಲಮಂಡಳಿ ಅಧಿಕಾರಿಗಳ ಸಭೆಯಲ್ಲಿ ಸುಧೀರ್ಘವಾಗಿ ಚರ್ಚೆ ನಡೆದು ಅಧ್ಯಕ್ಷರು, ದುರಸ್ತಿ ಕಾರ್ಯಗಳನ್ನು ಕೂಡಲೇ ಕೈಗೆತ್ತಿಗೊಂಡು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.ಮೊದಲಿಗೆ ಸಮಿತಿಯಲ್ಲಿದ್ದ ಸದಸ್ಯ ಬೈರೇಗೌಡ ಮಾತನಾಡಿ, ವಾರ್ಡುಗಳಿಗೆ ಭೇಟಿ ನೀಡಿದ ವೇಳೆ ನೆಟ್ಕಲ್ ಯೋಜನೆ ಕಾಮಗಾರಿಯಲ್ಲಿ ಸಾಕಷ್ಟು ನ್ಯೂನತೆಗಳು ಪತ್ತೆಯಾಗಿವೆ. ಒಂದೂವರೆ ಆಳದಲ್ಲಿ ಕುಡಿಯುವ ಪೈಪ್ ಅಳವಡಿಸಿಲ್ಲ. ವಠಾರಗಳಿರುವ ಮನೆಗಳಿಗೆ ಸಂಪರ್ಕವನ್ನೇ ನೀಡಿಲ್ಲ. ನಳಗಳನ್ನು ಅಳವಡಿಸದ ಪೈಪ್ ಗಳಿಗೆ ಎಂಡ್ ಕ್ಯಾಪ್ ಗಳನ್ನು ಹಾಕಿಲ್ಲ. ಯುಜಿಡಿ ಮೇಲೆಯೇ ನೀರಿನ ಪೈಪ್ ಅಳವಡಿಸಿದ್ದಾರೆ. ರಸ್ತೆ, ಚರಂಡಿ ಕಾಮಗಾರಿ ವೇಳೆ ನೀರಿನ ಪೈಪ್‌ಗಳಿಗೆ ಹಾನಿಯಾಗಿವೆ. ಕೆಲ ಬಡಾವಣೆಗಳಲ್ಲಿ ಹೊಸ ಮತ್ತು ಹಳೇಯ ಲೈನ್‌ಗಳಲ್ಲಿ ನೀರು ಪೂರೈಕೆಯೇ ಆಗುತ್ತಿಲ್ಲ ಎಂದು ದೂರಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಅಬ್ದುಲ್ ಸಮದ್, ಕೆಲ ವಾರ್ಡುಗಳಲ್ಲಿ ಶೇಕಡ 50ರಷ್ಟು ಮನೆಗಳಿಗೆ ನಳಗಳ ಸಂಪರ್ಕವನ್ನೇ ನೀಡಿಲ್ಲ. ಬಹುತೇಕ ಕಡೆಗಳಲ್ಲಿ ಮನೆ ಮಾಲೀಕರೇ ಹೆಚ್ಚಿನ ಬಿಲ್ ಬರುತ್ತದೆ ಎಂಬ ಭೀತಿಯಿಂದ ಮೀಟರ್ ಗಳನ್ನು ಬಿಚ್ಚಿ ಮನೆಯಲ್ಲಿ ಇಟ್ಟುಕೊಂಡಿದ್ದರೆ, ಕೆಲವೆಡೆ ಮೀಟರ್‌ಗಳು ಕಳ್ಳತನವಾಗಿವೆ. ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ನೀರಿಗಾಗಿ ನಳ ಸಂಪರ್ಕ ಕಲ್ಪಿಸುವ ಸೌಜನ್ಯವನ್ನೂ ಅಧಿಕಾರಿಗಳು ತೋರಿಲ್ಲ. ಕಾಮಗಾರಿಯಲ್ಲಿ ಬಳಸಿರುವ ಪೈಪ್ , ನಳಗಳು ಮಾತ್ರವಲ್ಲದೆ ಇಡೀ ಕಾಮಗಾರಿಯೇ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿದರು.ಆನಂತರ ವಾರ್ಡ್ ವಾರು ಸಮಸ್ಯೆಗಳನ್ನು ಚರ್ಚೆಗೆ ತೆಗೆದುಕೊಂಡ ಅಧ್ಯಕ್ಷ ಕೆ.ಶೇಷಾದ್ರಿರವರು, 3ನೇ ವಾರ್ಡಿನಲ್ಲಿ 15 ಮನೆಗಳಿಗೆ ಹೊಸ ಸಂಪರ್ಕ ನೀಡಿಲ್ಲ. ಇಲ್ಲಿ 1085 ನಳಗಳಿದ್ದು, 50 ಮನೆಗಳಿಗೆ ಹೊಸ ನಳ ಅಳವಡಿಸಿಲ್ಲ ಏಕೆ. 7ನೇ ವಾರ್ಡಿನಲ್ಲಿ 50 ಕಡೆ ನೀರು ಸೋರಿಕೆಯಾಗುತ್ತಿದೆ. ಮೀಟರ್ ಗಳಿಗೆ ಕಾಂಕ್ರಿಟ್ ಹಾಕಿಲ್ಲ. ಕುಂಬಾರಬೀದಿಯಲ್ಲಿ 17 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಿಲ್ಲ ಏಕೆಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಜಲಮಂಡಳಿ ಜೆಇ ಶಿವರಾಜ್, ಬಳೆ ಪೇಟೆ ಸೇರಿದಂತೆ ಕೆಲವೆಡೆ ಹೊಸ ಪೈಪ್ ಲೈನ್ ಹಾಕಿ ಮನೆಗಳಿಗೆ ನಳಗಳ ಸಂಪರ್ಕ ನೀಡಬೇಕಿದೆ. ಮನೆಯ ಗೇಟಿನೊಳಗೆ ಜಾಗ ಇಲ್ಲದಿರುವ ಕಡೆಗಳಲ್ಲಿ ಚರಂಡಿ ಮೇಲೆಯ ಮೀಟರ್ ಬಾಕ್ಸ್ ಅಳವಡಿಸಿದ್ದೇವೆ. ಎಲ್ಲೆಡೆ ಮೀಟರ್ ಬಾಕ್ಸ್‌ಗೆ ಕಾಂಕ್ರಿಟ್ ಹಾಕುವ ಕೆಲಸ ಪ್ರಾರಂಭಿಸಿದ್ದೇವೆ ಎಂದರು.ಅಧ್ಯಕ್ಷರು ಅಗ್ರಹಾರ ಬೀದಿಯಲ್ಲಿ ಬೃಹತ್ ಗಾತ್ರ ಮತ್ತು ತೂಕವುಳ್ಳ ರಥ ಸಂಚರಿಸಲಿದೆ. ಹೀಗಾಗಿ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದಾಗ ಜಲಮಂಡಳಿ ಇಇ ಪವಿತ್ರ, ಅಗ್ರಹಾರ ಬೀದಿ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ರೋಡ್ ರೆಸ್ಟೋರೇಷನ್ ಸಮಸ್ಯೆ ಆಗಿರುವುದರಿಂದ ರಸ್ತೆ ಸರಿ ಪಡಿಸಲು ಆಗುತ್ತಿಲ್ಲ ಎಂದಾಗ ಅಧ್ಯಕ್ಷರು, ನೀರಿನ ಪೈಪ್ ಕಾಮಗಾರಿ ಪೂರ್ಣಗೊಳಿಸಿದ ಮೇಲೆ ಸ್ಥಳದಲ್ಲಿದ್ದು ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸದಸ್ಯ ನರಸಿಂಹ ಮಾತನಾಡಿ, ನೀರಿಗೆ ಸಂಬಂಧಿಸಿದಂತೆ ಜನರಿಂದ ದೂರು ಸ್ವೀಕರಿಸಲು ಸಹಾಯವಾಣಿ ಅಥವಾ ದೂರು ಸ್ವೀಕಾರ ಕೇಂದ್ರ ಪ್ರಾರಂಭಿಸುವುದು. ಇದರಿಂದ ದೂರು ಬಂದ ತಕ್ಷಣ ಸ್ಪಂದಿಸಲು ಸಹಾಯವಾಗಲಿದೆ. ಜೋನ್ ವಾರು ಅಥವಾ ಬಡಾವಣೆವಾರು ಟ್ರಯಲ್ ಚೆಕ್ ಮಾಡಿ ಕಾಮಗಾರಿ ಪೂರ್ಣಗೊಳಿಸಿದರೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.ಮೀಟರ್ ಕಳುವಾದರೆ ಹೊಣೆ ಯಾರು?
ಸದಸ್ಯ ಮಂಜುನಾಥ್ ಮಾತನಾಡಿ, ಕೆಲ ವಾರ್ಡುಗಳಲ್ಲಿ ಅವೈಜ್ಞಾನಿಕವಾಗಿ ಮೀಟರ್ ಗಳನ್ನು ಅಳವಡಿಸಲಾಗಿದೆ. ಅವುಗಳು ಕಳುವಾದರೆ ಯಾರು ಹಣ ಕಟ್ಟಿ ಮರು ಸಂಪರ್ಕ ಪಡೆಯಬೇಕು. 15 ದಿನಗಳಾದರು ಬೋರ್ ವೆಲ್ ದುರಸ್ತಿ ಪಡಿಸಿಲ್ಲ. ನಗರಸಭೆ ಗಮನಕ್ಕು ತರದೆ ಹಾಗೂ ಟ್ರಯಲ್ ರನ್ ಯಶಸ್ವಿಯಾಗದೆ ಬೋರ್ ವೆಲ್ ಗಳ ಸಂಪರ್ಕಗಳನ್ನು ಹೇಗೆ ಕಡಿತಗೊಳಿಸಿದ್ದೀರಿ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಇಇ ಪವಿತ್ರ, ಮನೆ ಮಾಲೀಕರು ಹೇಳಿದ ಜಾಗದಲ್ಲಿ ಮೀಟರ್ ಅಳವಡಿಸಿದ್ದೇವೆ. ಹೊಸದಾಗಿ ಗೃಹ ಬಳಕೆಗೆ 2700 ರು, ಗೃಹಯೇತರ - 6500 ರು., ವಾಣಿಜ್ಯ ಬಳಕೆಗೆ 12,000 ರು. ದರ ನಿಗದಿ ಪಡಿಸಿದ್ದೇವೆ. ಟ್ರಯಲ್ ಯಶಸ್ವಿಯಾದ ನಂತರವೇ ಬೋರ್ ವೆಲ್ ಗಳನ್ನು ನಿಲ್ಲಿಸಿದ್ದೇವೆ ಎಂದರು.
ಸಮಿತಿ ಕಾರ್ಯ ಶ್ಲಾಘನೀಯ:ಆಗ ಶೇಷಾದ್ರಿರವರು, ಸಮಿತಿ ಸದಸ್ಯರು ಭೇಟಿ ನೀಡಿದ ಮೇಲೆ ನಗರದಲ್ಲಿ ನೀರು ಸೋರಿಕೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಇದಕ್ಕಾಗಿ ಅವರಿಗೆಲ್ಲ ಅಭಿನಂದನೆ ಸಲ್ಲಿಸುತ್ತೇನೆ. ನೀರಿನ ಅಭಾವ ತಲೆದೂರಿದಾಗ ಬೋರ್ ವೆಲ್ ಗಳ ಮೂಲಕವಾದರು ಪೂರೈಕೆ ಮಾಡಬೇಕಾಗುತ್ತದೆ. ಆದ್ದರಿಂದ ಬೋರ್ ವೆಲ್ ಗಳನ್ನು ದುರಸ್ತಿ ಪಡಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಆಯುಕ್ತ ಜಯಣ್ಣ ಉಪಸ್ಥಿತರಿದ್ದರು.ಬಾಕ್ಸ್ .........
ರಾಮನಗರ ಟೌನಿಗೆ ಪ್ರತಿನಿತ್ಯ 21 ಎಂಎಲ್ ಡಿ ನೀರು ಬೇಕು. ಈಗ 24 ಎಂಎಲ್ ಡಿ ನೀರು ಪೂರೈಕೆ ಆಗುತ್ತಿದೆ. ಬೇಸಿಗೆ ಅವಧಿಯಲ್ಲಿ ನೀರಿನ ಸಮಸ್ಯೆ ಆಗುವುದಿಲ್ಲ. ಕನಿಷ್ಠ 8 ಸಾವಿರ ಲೀಟರ್ ವರೆಗೆ ನೀರಿಗೆ ಕನಿಷ್ಠ 100 ರುಪಾಯಿ ದರ ನಿಗದಿ ಪಡಿಸುತ್ತೇವೆ. ಶೇಕಡ ನೂರರಷ್ಟು ಮೀಟರ್ ಅವಳಡಿಕೆ ಕಾರ್ಯ ಪೂರ್ಣವಾದ ಮೇಲೆ ಒಂದು ತಿಂಗಳು ಟ್ರಯಲ್ ಚೆಕ್ ಮಾಡಿ ಬಿಲ್ ವಸೂಲಿ ಮಾಡುತ್ತೇವೆ.- ಪವಿತ್ರ, ಇಇ, ಜಲಮಂಡಳಿ, ರಾಮನಗರ
24ಕೆಆರ್ ಎಂಎನ್ 1.ಜೆಪಿಜಿರಾಮನಗರ ನಗರಸಭೆಯಲ್ಲಿ ಅಧ್ಯಕ್ಷ ಶೇಷಾದ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಆಯುಕ್ತ ಜಯಣ್ಣ ಉಪಸ್ಥಿತರಿದ್ದರು.