ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಭವಿಷ್ಯ ನಿಧಿಯ ಹಣದ ಬಳಕೆಯ ಬಗ್ಗೆ ಉದ್ಯೋಗಿಗಳು ಸಮರ್ಪಕ ಮಾಹಿತಿ ಹೊಂದಿರಬೇಕು ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮಂಗಳೂರು ಆಯುಕ್ತ ಎ.ಪಿ. ಉಣ್ಣಿಕೃಷ್ಣ ತಿಳಿಸಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ವ್ಯಾಪ್ತಿಯ ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸೋಮವಾರ ವಿದ್ಯಾಗಿರಿಯ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ‘ಜಂಟಿ ಸಾರ್ವಜನಿಕ ಮುಖಾಮುಖಿ- ಸಂವಾದಾತ್ಮಕ ವೇದಿಕೆ ಮತ್ತು ಮಾಹಿತಿ ವಿನಿಮಯ ಕಾರ್ಯಕ್ರಮ-‘ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಹಿಂದೆ ಕೃಷಿ ಆಧರಿತವಾಗಿದ್ದ ಸಮಾಜವು ಇಂದು ತಂತ್ರಜ್ಞಾನದೆಡೆಗೆ ಹೆಜ್ಜೆ ಇಡುತ್ತಿದೆ. ಹೊಸ ಹೊಸ ತಂತ್ರಜ್ಞಾನಗಳು ಬರುತ್ತಿವೆ. ಆದರೆ, ಮಾನವ ಶಕ್ತಿ ಅತ್ಯಂತ ಮುಖ್ಯವಾಗಿದೆ. ಒಂದು ಸಂಸ್ಥೆ ಬೆಳೆಯಬೇಕೆಂದರೆ ಹಣ ಮುಖ್ಯವಲ್ಲ, ಮಾನವ ಸಂಪತ್ತು ಮುಖ್ಯ. ಎಲ್ಲರಲ್ಲೂ ಒಳ್ಳೆಯ ಮನಸ್ಥಿತಿ ಮತ್ತು ಎಲ್ಲವನ್ನೂ ನಿಭಾಯಿಸುವ ಗುಣವಿರಬೇಕು ಎಂದರು.ಇಎಸ್‌ಐಸಿಯ ಸಾಮಾಜಿಕ ಭದ್ರತಾ ಅಧಿಕಾರಿ ನಾರಾಯಣಸ್ವಾಮಿ ಮಾತನಾಡಿದರು.ನಂತರ ಸ್ಥಳದಲ್ಲೇ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಯಿತು. ಕರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉದ್ಯೋಗಿಗಳು ಸೇರಿದಂತೆ , ಮೂಡುಬಿದಿರೆ ಸುತ್ತಮುತ್ತಲಿನ ಇಪಿಎಫ್‌ಒ ನೋಂದಾಯಿತ ಸಂಸ್ಥೆಗಳ 500ಕ್ಕೂ ಅಧಿಕ ಜನರು ಭಾಗಿಯಾಗಿದ್ದರು. ಮಂಗಳೂರಿನ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಸಿಬ್ಬಂದಿಗಳು ಹಾಗೂ ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ)ದ ಸಿಬ್ಬಂದಿಗಳು ಜನರ ಕುಂದುಕೊರೆತೆಗಳು ಹಾಗೂ ಸಂಶಯಗಳಿಗೆ ಪರಿಹಾರ ಒದಗಿಸಿದರು.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರಾದೇಶಿಕ ಸಮಿತಿಯ ಸದ್ಯಸ ವಿಶ್ವನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಣಕಾಸು ಅಧಿಕಾರಿ ಶಾಂತರಾಮ ಕಾಮತ್, ಆಳ್ವಾಸ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಭರತ್ ರೈ ಇದ್ದರು. ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.