ಕಾಯಕ ಸಹಿತವಾದ ಕಾಯವೇ ಸಾರ್ಥಕ. ಕಾಯಕವಿಲ್ಲದ ಕಾಯ ನಿರರ್ಥಕ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಯಕ ಸಹಿತವಾದ ಕಾಯವೇ ಸಾರ್ಥಕ. ಕಾಯಕವಿಲ್ಲದ ಕಾಯ ನಿರರ್ಥಕ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀಹಾಲಕೆರೆ ಅನ್ನದಾನೀಶ್ವರ ಶಾಖಾಮಠದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ 287ನೇ ಶಿವಾನುಭವ ಸಂಪದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಶರಣರು ಹಾಗೂ ದಾರ್ಶನಿಕರು ಕಾಯಕದ ಮೂಲಕ ಅನುಭವಮಂಟಪದ ತತ್ವವನ್ನು ನಂಬಿ, ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಮಾಜಕ್ಕೆ ಪ್ರತಿಪಾದಿಸಿದರು. ಈ ದಿಸೆಯಲ್ಲಿ ಮನುಷ್ಯನ ಜೀವನ ರೂಪುಗೊಳ್ಳಬೇಕಾದರೆ, ಕಾಯಕ ಮತ್ತು ದಾಸೋಹವನ್ನು ಅಳವಡಿಸಿಕೊಂಡು ಸಾರ್ಥಕ ಬದುಕು ನಡೆಸುವುದು ಅಗತ್ಯವಿದೆ ಎಂದು ಅವರು ತಿಳಿಸಿದರು.ಶರಣರು ಕಾಯಕದ ಮೂಲಕ ಸ್ವಾನುಭವವನ್ನು ಪಡೆದು, ಯಾವುದೇ ಅಪೇಕ್ಷೆ ಇಲ್ಲದೆ ಕಾಯಕ-ದಾಸೋಹದ ಚಿಂತನೆಯನ್ನು ನಡೆಸಿದರು. ಕಾಯಕದ ಸಾರವನ್ನು ಜಗತ್ತಿಗೆ ತೋರಿಸಿದ ಮಹಾನ್ಪರಂಪರೆ ಶರಣರದ್ದು ಎಂದು ಹೇಳಿದರು.
ದಾಸೋಹವೆಂದರೆ ಕೇವಲ ಅನ್ನದಾಸೋಹ ಮಾತ್ರವಲ್ಲ. ಪ್ರೀತಿ ದಾಸೋಹ, ಭಕ್ತಿ ದಾಸೋಹ, ಸ್ನೇಹ ದಾಸೋಹ, ಸೌಹಾರ್ದ ದಾಸೋಹ ಎಲ್ಲರನ್ನೂ ನಮ್ಮವರಂತೆ ಭಾವಿಸುವ ಉದಾತ್ತ ಪರಿಕಲ್ಪನೆಯನ್ನು ಬೆಳೆಸಿದವರು ಶರಣರು ಎಂದು ಶ್ರೀಗಳು ನುಡಿದರು.ಎಚ್.ಎಂ.ಗುರುಬಸಯ್ಯ ಕಾಯಕ ಮತ್ತು ದಾಸೋಹ ಕುರಿತು ಉಪನ್ಯಾಸ ನೀಡಿದರು.
ಅಮರಯ್ಯ ಗುರುವಿನ ಮಠ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಂ.ಅಡಿವೆಪ್ಪ, ನಾಗರಾಜ ಯರಗಲ್, ಕಲ್ಲೇಶ, ಎನ್.ಎ.ಗುರುರಾಜ, ವಿವೇಕ, ರಾಜು ಭಾವಿ, ಪತ್ರಕರ್ತ ಅನಿಲ್ ಕುಮಾರ ಭಾವಿ ಇತರರು ಇದ್ದರು.ಎಂ.ಜಿ.ಅಮರೇಶ ಮತ್ತು ಮಕ್ಕಳು ಭಕ್ತಿ ಸೇವೆ ಸಲ್ಲಿಸಿದರು.
ಸುನಂದಾ ಪ್ರಾರ್ಥಿಸಿದರೆ, ಮಹಾರುದ್ರಪ್ಪ ಮೆಣಸಿನ ಕಾಯಿ ಸ್ವಾಗತಿಸಿದರು. ಶಿಕ್ಷಕಿ ವಿ.ಬಿ.ತನುಜಾ ಕಾರ್ಯಕ್ರಮ ನಿರೂಪಿಸಿದರು.