ಕನ್ನಡ ಶಿಕ್ಷಕರೆಲ್ಲರೂ ಸೇರಿ ಸಂಘ ರಚಿಸಿಕೊಂಡಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಅನುಕೂಲವಾಗಲಿದೆ

ಸಿರುಗುಪ್ಪ: ಬಳ್ಳಾರಿಗೆ ಲಭಿಸಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2026ರ ಜೂನ್ ಅಥವಾ ಜುಲೈನಲ್ಲಿ ಆಯೋಜನೆಯಾಗುವ ಸಾಧ್ಯತೆ ಇದೆ ಎಂದು ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ ತಿಳಿಸಿದರು.

ತಾಲೂಕಿನ ಗಡಿ ಭಾಗದ ಸೀಮಾಂಧ್ರ ಪ್ರದೇಶದ ಆದೋನಿ ನಗರದ ಆಂಧ್ರಪ್ರದೇಶ ಕನ್ನಡ ಶಿಕ್ಷಕರ ಒಕ್ಕೂಟ ಹಾಗೂ ಆದೋನಿ ಎಲ್ಲ ಕನ್ನಡ ಸಂಘಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಹೇಮಂತ ಸಂಭ್ರಮ, ಆಂಧ್ರ ಗಡಿ ಕನ್ನಡ ಸಾಹಿತೋತ್ಸವ, ವಿಚಾರ ಸಂಕಿರಣ ಮತ್ತು ಕವಿಗೋಷ್ಠಿ, ಗಡಿಭಾಗದ ಕನ್ನಡ ಶಾಲೆಗೆ ಆಂಧ್ರಪ್ರದೇಶ ಸರ್ಕಾರದಿಂದ ಹೊಸದಾಗಿ ನೇಮಕಗೊಂಡ 58ಜನ ಶಿಕ್ಷಕರ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮ್ಮೇಳನ ಅಧ್ಯಕ್ಷರ ಆಯ್ಕೆ, ಸ್ಥಳ ನಿಗದಿ ಜತೆಗೆ ₹ 10ಕೋಟಿ ಈಗಾಗಲೇ ನಿಗದಿಯಾಗಿದೆ. ಕಸಾಪ ರಾಜ್ಯಾಧ್ಯಕ್ಷರಾಗಿದ್ದ ಮಹೇಶ್ ಜೋಶಿ ಅವರ ಮೇಲಿನ ಆರೋಪಗಳ ಕುರಿತ ಪ್ರಕರಣ ಹೈಕೋರ್ಟ್ ಮುಂದೆ ಜ.13ಕ್ಕೆ ವಿಚಾರಣೆಗೆ ಬರಲಿರುವುದರಿಂದ ಅಂದಿನ ಆಗುಹೋಗುಗಳನ್ನು ನಿರೀಕ್ಷಿಸಲಾಗುವುದು ಎಂದು ಅಭಿಪ್ರಾಯಪಟ್ಟರು.

ಆಂದ್ರಪ್ರದೇಶ ಸರ್ಕಾರ ಗಡಿಭಾಗದ ಕನ್ನಡ ಶಾಲೆಗಳಿಗೆ ಹೊಸದಾಗಿ 58 ಶಿಕ್ಷಕರನ್ನು ನೇಮಕ ಮಾಡಿರುವುದಕ್ಕೆ ಧನ್ಯವಾದ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಆಂಧ್ರದ ಗಡಿಕನ್ನಡಿಗರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿಗೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡುವುದರ ಜತೆಗೆ ಬಳ್ಳಾರಿ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿಯೂ ಈ ಕುರಿತ ನಿರ್ಣಯ ಅಂಗೀಕರಿಸಲು ಕ್ರಮ ಕೈಗೊಳ್ಳವುದಾಗಿ ತಿಳಿಸಿದರು.

ಡಿ. ಹಿರೇಹಾಳು ಎಂ. ಗಿರಿಜಾಪತಿ ಮಾತನಾಡಿ, ಕರ್ನೂಲ ಮತ್ತು ಅನಂತಪುರ ಗಡಿ ಭಾಗದ ಕನ್ನಡ ಶಿಕ್ಷಕರೆಲ್ಲರೂ ಸೇರಿ ಸಂಘ ರಚಿಸಿಕೊಂಡಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಆಂಧ್ರದಲ್ಲಿ ಕನ್ನಡ ಸಂಘ, ಕನ್ನಡ ಶಾಲೆಗಳು ನಡೆದು ಬಂದ ದಾರಿ ಕುರಿತು ಕನ್ನಡಪರ ಹೋರಾಟಗಾರ ಡಿ.ಎಚ್. ವೆಂಕಟೇಶ್ ಮಾತನಾಡಿದರು.

ಹೊಳಗುಂದ ಎಚ್. ಶಿವನಗೌಡ ಅಧ್ಯಕ್ಷತೆ ವಹಿಸಿದ್ದರು, ಪ್ರಮುಖರಾದ ಕೆ. ಸೂಗೂರಪ್ಪ, ನಾ.ಮ. ಮರುಳಾರಾಧ್ಯ, ಕೆ. ಶರಣಬಸಪ್ಪ, ಕೆ. ರಾಮು, ಬದನೆಹಾಳು ಭೀಮಣ್ಣ, ಐ. ಕೃಷ್ಣಮೂರ್ತಿ, ಪಿ. ಕಬೀರ್‍ ಸಾಬ್, ಎಚ್.ಎಂ. ಮಲ್ಲಿಕಾರ್ಜುನ, ಜಿ. ನರಸಿಂಹರಾಜು, ಅರುಣಜ್ಯೋತಿ, ಶಿವಪ್ರಕಾಶ್, ಮಂಜುನಾಥ, ಡಿ. ಶಿವಕುಮಾರಗೌಡ, ಆಂಧ್ರಪ್ರದೇಶ ಕನ್ನಡ ಶಿಕ್ಷಕರ ಒಕ್ಕೂಟ ಹಾಗೂ ಆದೋನಿ ಎಲ್ಲಾ ಕನ್ನಡ ಸಂಘಗಳ ಪದಾಧಿಕಾರಿಗಳು, ಗಡಿನಾಡ ಕನ್ನಡ ಶಾಲೆ ಶಿಕ್ಷಕರು ಉಪಸ್ಥಿತರಿದ್ದರು.