ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಅಧ್ಯಕ್ಷರ ಸಹೋದರರ ಮಕ್ಕಳಿಗೆ ಕ್ರಯ, ಆರೋಪ

KannadaprabhaNewsNetwork | Published : Jan 14, 2024 1:31 AM

ಸಾರಾಂಶ

ಆದಿಕರ್ನಾಟಕ ಅಭಿವೃದ್ಧಿ ಸಂಘದ ಹೆಸರಿನಲ್ಲಿರುವ ಆಸ್ತಿಯು ಸಂಘದ ಅಧ್ಯಕ್ಷರ ಸಹೋದರರ ಮಕ್ಕಳ ಹೆಸರಿಗೆ ಕ್ರಯವಾಗಿದ್ದು, ಖಾತೆಯಾಗುವ ಹಂತಕ್ಕೆ ತಲುಪಿದ್ದರು ಸಹ ಯಾವುದೇ ರೀತಿಯ ಕ್ರಮ ವಹಿಸದೇ ಮೌನವಾಗಿರುವ ಮತ್ತು ಅಧ್ಯಕ್ಷರು ಹೇಳಿದಂತೆ ಕೇಳುತ್ತಿರುವ ನಿರ್ದೇಶಕರ ಮಂಡಳಿಯನ್ನು ಸರ್ಕಾರ ಹಾಗೂ ಸಹಕಾರ ಇಲಾಖೆಯ ಸೂಪರ್ ಸೀಡ್ ಮಾಡಿ, ದಲಿತ ಸಮುದಾಯಕ್ಕೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.

ಆದಿಕರ್ನಾಟಕ ಅಭಿವೃದ್ಧಿ ಸಂಘವನ್ನು ಸೂಪರ್ ಸೀಡ್ ಮಾಡಲು ಆಗ್ರಹ । ನ್ಯಾಯಕ್ಕಾಗಿ ಸಮಿತಿಯಿಂದ ಒತ್ತಾಯ

ಕನ್ನಡಪ್ರಭ ವಾರ್ತೆ ಚಾಮರಾಜನಗರಆದಿಕರ್ನಾಟಕ ಅಭಿವೃದ್ಧಿ ಸಂಘದ ಹೆಸರಿನಲ್ಲಿರುವ ಆಸ್ತಿಯು ಸಂಘದ ಅಧ್ಯಕ್ಷರ ಸಹೋದರರ ಮಕ್ಕಳ ಹೆಸರಿಗೆ ಕ್ರಯವಾಗಿದ್ದು, ಖಾತೆಯಾಗುವ ಹಂತಕ್ಕೆ ತಲುಪಿದ್ದರು ಸಹ ಯಾವುದೇ ರೀತಿಯ ಕ್ರಮ ವಹಿಸದೇ ಮೌನವಾಗಿರುವ ಮತ್ತು ಅಧ್ಯಕ್ಷರು ಹೇಳಿದಂತೆ ಕೇಳುತ್ತಿರುವ ನಿರ್ದೇಶಕರ ಮಂಡಳಿಯನ್ನು ಸರ್ಕಾರ ಹಾಗೂ ಸಹಕಾರ ಇಲಾಖೆಯ ಸೂಪರ್ ಸೀಡ್ ಮಾಡಿ, ದಲಿತ ಸಮುದಾಯಕ್ಕೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಪ್ರಮುಖರು ದಾಖಲಾತಿ ಸಮೇತ ಸಂಘದ ಅಧ್ಯಕ್ಷರು ಹಾಗೂ ಅಡಳಿತ ಮಂಡಳಿಯ ನಿರ್ದೇಶಕರ ವಿರುದ್ಧ ಆರೋಪಗಳ ಸುರಿಮಳೆಗೈದರು.

ಜಿ.ಪಂ. ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್ ಮಾತನಾಡಿ, ತಾಲೂಕಿನ ದಲಿತ ಸಮುದಾಯದ ಶೈಕ್ಷಣಿಕ ಅಭಿವೃದ್ದಿಗಾಗಿ ಅಂದು ರಾಜ್ಯಪಾಲರಾಗಿದ್ದ ದಿ. ಬಿ.ರಾಚಯ್ಯ, ಶಿಕ್ಷಣ ತಜ್ಞ ದಿ.ಕೆ.ಸಿ.ರಂಗಯ್ಯ, ಗುತ್ತಿಗೆದಾರ ದಿ.ಹೆಗ್ಗವಾಡಿ ರಂಗಸ್ವಾಮಿ ಸೇರಿದಂತೆ ಅನೇಕ ಮುಖಂಡರು ನಗರ ಹೃದಯಭಾಗದಲ್ಲಿ ಸಂಘವನ್ನು ರಚನೆಮಾಡಿ, ೧.೨೦ ಎಕರೆ ಜಮೀನು ಪಡೆದುಕೊಂಡು ಹಾಸ್ಟೆಲ್ ನಿರ್ಮಾಣ ಮಾಡಿ, ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಆಶ್ರಯ ನೀಡಿದ್ದರು. ಕೆ.ಸಿ. ರಂಗಯ್ಯ ನಂತರ ಬಂದ ಮಾಜಿ ನಗರಸಭಾ ಅಧ್ಯಕ್ಷ ಎಸ್. ನಂಜುಂಡಸ್ವಾಮಿ ಅವರು ಸಂಘವನ್ನು ತಮ್ಮ ಕುಟುಂಬದ ಅಸ್ತಿಯೆಂಬಂತೆ ನೋಡಿಕೊಂಡು ತಮ್ಮ ಮಾತು ಕೇಳುವ ಕೆಲವು ಮಂದಿಯನ್ನು ಸದಸ್ಯರು ಹಾಗು ನಿರ್ದೇಶಕರನ್ನಾಗಿ ಮಾಡಿಕೊಂಡಿದ್ದಾರೆ.

ಇವರು ನಗರಸಭೆಗೆ 9 ಬಾರಿ ಆಯ್ಕೆಯಾಗಿದ್ದು, ಬಹಳ ಅನುಭವಿಗಳು ಹಾಗೂ ಸಮಾಜದ ಹಿತ ಚಿಂತಕರು. ನಮ್ಮ ಸಮುದಾಯ ಅಸ್ತಿಯನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿ, ಸಂರಕ್ಷಣೆ ಮಾಡುತ್ತಾರೆ ಎಂಬ ವಿಶ್ವಾಸ ಹೊಂದಿದ್ದೇವು. ಅದರೆ, ಅಧ್ಯಕ್ಷರು ಮತ್ತು ನಿರ್ದೇಶಕರು ಅಲ್ಲಿ ಬರುವ ಅದಾಯಕ್ಕೆ ನೀಡಿದ ಗಮನವನ್ನು ಆಸ್ತಿ ಸಂರಕ್ಷಣೆ ಮಾಡಲು ತೋರಿಸಿಲ್ಲ. ಹೀಗಾಗಿ ಅವರು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವೇ ಸರ್ಕಾರ ಈ ಎಲ್ಲಾ ಅಕ್ರಮ ವಿರುದ್ಧ ತನಿಖೆ ನಡೆಸಿ, ಸಂಘವನ್ನು ವಜಾಗೊಳಿಸಿ, ಸಂಘದ ಹೆಸರಿನವಲ್ಲಿ ೧.೨೦ ಎಕರೆ ಜಮೀನನ್ನು ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಅನ್ಯ ಜಾತಿಯವರಿಗೆ ಪರಭಾರೆ ? ಆದಿ ಕರ್ನಾಟಕ ಸಂಘಕ್ಕೆ ಸೇರಿದ ಆಸ್ತಿಯು ಅನ್ಯ ಜಾತಿಯವರಿಗೆ ಆರ್‌ಟಿಸಿಯಲ್ಲಿ ಪರಭಾರೆಯಾಗಿದೆ. ಇದು ಹೇಗೆ ಸಾಧ್ಯ ? ಒಟ್ಟು ೨೯೫ರ ಸರ್ವೆನಂಬರ್ ನಲ್ಲಿರುವ ೧.೨೦ ಎಕರೆ ಜಮೀನನ್ನು ತಲಾ ೮ ಗುಂಟೆಯಂತೆ ಎಂಟು ಮಂದಿಗೆ ಆರ್‌ಟಿಸಿಯಲ್ಲಿ ಪರಭಾರೆ ಮಾಡಿ, ಅವರ ಹೆಸರು ಆರ್‌ಟಿಸಿಯಲ್ಲಿದ್ದು, ಇದರ ಹಿಂದಿನ ಕಾಣದ ಕೈಗಳು ಯಾರು ಎಂಬುವುದು ನಮ್ಮ ಪ್ರಶ್ನೆಯಾಗಿದೆ?. ಇದರಲ್ಲಿ ಚಾಮರಾಜನಗರದ ಸರ್ವೆ ನಂ. ೨೯೫/೪ಸಿಯಲ್ಲಿ ೮ ಗುಂಟೆ ಜಮೀನನ್ನು ಅಧ್ಯಕ್ಷ ನಂಜುಂಡಸ್ವಾಮಿ ಅವರ ಸಹೋದರ ಮಕ್ಕಳಾದ ದಿ.ಕೃಷ್ಣಮೂರ್ತಿ ಪುತ್ರ ಸಿ.ಕೆ. ದಿಲೀಪ್‌ಕುದರ್, ಹಾಗೂ ಮತ್ತೊಬ್ಬ ಸಹೋದರ ದಿ. ಸಿದ್ದಯ್ಯ ಪುತ್ರ ಸಿ.ಎಸ್. ಶ್ರೀನಿಧಿ ಅವರಿಗೆ ಅನ್ಯ ಕೋಮಿನ ಮಹೇಶ್‌ಕುಮಾರ್ ಬಿ.ಬಿನ್ ಬಸವರಾಜು ಮತ್ತು ಶಿವರಾಜು ಬಿನ್ ಮಹದೇವಶೆಟ್ಟಿ ಅವರು ನೊಂದಣಿ ಸಂಖ್ಯೆ ಸಿಆರ್‌ಜೆ-೧-೦೨೭೬೦-೨೦೨೩-೨೪ ೨೦೨೩ ರ ಜುಲೈ ೩೧ ರಂದು ನೊಂದಣಿ ಕ್ರಯ ಮಾಡಿದ್ದಾರೆ. ಇದು ಹೇಗೆ ಸಾಧ್ಯ. ಜೊತೆಗೆ ತಮ್ಮ ಮುಖಸ್ತುತಿಯಲ್ಲಿ ನಡೆಯುತ್ತಿದ್ದರು ಅಧ್ಯಕ್ಷರು ಮೌನ ವಹಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಆದಿಕರ್ನಾಟಕ ಅಭಿವೃದ್ಧಿ ಸಂಘದ ಮೂಲ ಆಸ್ತಿಯು ೮ ಪೋಡುಗಳಾಗಿದ್ದು, ಒಂದು ಪೋಡು ಸಿ.ಕೆ.ದಿಲೀಪ್ ಕುದರ್, ಶ್ರೀನಿಧಿ ಕುದರ್ ಅವರಿಗೆ ಕ್ರಯವಾಗಿದೆ. ಇದು ಖಾತೆಗೆ ಬಂದಾಗ ಹಗರಣ ಬಯಲಿಗೆ ಬಂದಿದೆ. ತಹಸೀಲ್ದಾರ್ ಅವರು ಖಾತೆಗೆ ವರ್ಗಾವಣೆ ಮಾಡದೇ ತನಿಖೆಗೊಳಪಡಿಸಿರುವುದು ಹಾಗೂ ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸುವಂತೆ ಕ್ರಯದಾರರಿಗೆ ಸೂಚನೆ ನೀಡಿದ ಫಲವಾಗಿ ಈಗ ಸಮಾಜಕ್ಕೆ ಅಕ್ರಮ ತಿಳಿದಿದೆ. ಈ ಬಗ್ಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

ಸಂರಕ್ಷಣಾ ಸಮಿತಿ ನಲ್ಲೂರು ಸೋಮೇಶ್ವರ ಮಾತನಾಡಿ, ನಮ್ಮ ಸಮುದಾಯದ ಹಿರಿಯರು ಗ್ರಾಮೀಣ ಪ್ರದೇಶಗಳಲ್ಲಿ ಭಿಕ್ಷೆ ಬೇಡಿ ಈ ಅಸ್ತಿಯನ್ನು ಸಂರಕ್ಷಣೆ ಮಾಡಿದ್ದಾರೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹೀಗಾಗಿ ಸಂಘ ಅಧ್ಯಕ್ಷರು ಈ ಬಗ್ಗೆ ಉತ್ತರಾದಾಯಿ ಆಗಿದ್ದು, ಕೂಡಲೇ ರಾಜೀನಾಮೇ ನೀಡಬೇಕು. ಇಲ್ಲವೇ ಗಡಿ ಕಟ್ಟೆ ಹಾಗೂ ತಾಲೂಕಿನ ವ್ಯಾಪ್ತಿಯ ಸಮುದಾಯ ಮುಖಂಡರ ಸಭೆ ಸೇರಿಸಿ, ದೊಡ್ಡ ಮಟ್ಟದ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾ.ಪಂ. ಮಾಜಿ ಅಧ್ಯಕ್ಷ ಆರ್.ಮಹದೇವ್ ಮಾತನಾಡಿ, ದಿವಂಗತ ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯನವರು, ಕೆ.ಸಿ.ರಂಗಯ್ಯನವರು ಹಾಗೂ ಸಮುದಾಯದ ಇತರ ಮುಖಂಡರ ಶ್ರಮದಿಂದ ಕಟ್ಟಿದ ಸಂಘಟನೆಯಾಗಿದೆ. ಬಹಳಷ್ಟು ಮಂದಿ ನನ್ನನ್ನು ಸೇರಿದಂತೆ ಈ ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡಿ, ಭವಿಷ್ಯವನ್ನು ರೂಪಿಸಿಕೊಂಡಿದ್ದೇವೆ. ಇದನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿದೆ. ಈಗಾಗಲೇ ತಹಸೀಲ್ದಾರ್‌ಗೆ ಖಾತೆ ವರ್ಗಾವಣೆ ಮಾಡದಂತೆ ದೂರು ನೀಡಿದ್ದೇವೆ. ಇನ್ನು ಸಹಕಾರ ಸಂಘಗಳ ರಿಜಿಸ್ಟಾರ್‌ಗೆ ಸಂಘದ ನಿರ್ವಹಣೆ ಮತ್ತು ಆಡಳಿತ ಮಂಡಳಿಯನ್ನು ವಜಾಗೊಳಿಸಲು ಮನವಿ ಮಾಡುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ತಾ.ಪಂ. ಮಾಜಿ ಅಧ್ಯಕ್ಷ ಆರ್.ಮಹದೇವ್, ಮಾಜಿ ಸದಸ್ಯರಾದ ನಲ್ಲೂರು ಸೋಮೇಶ್‌, ಕಾಗಲವಾಡಿ ಶಿವಸ್ವಾಮಿ, ಮುಖಂಡರಾದ ನಾಗಯ್ಯ, ರಂಗಸ್ವಾಮಿ ಇದ್ದರು.

Share this article