ಹೃದ್ರೋಗದಿಂದ ಆದಿಲ್ ಸಾವು?: ಪಿಎಂ ರಿಪೋರ್ಟ್

KannadaprabhaNewsNetwork |  
Published : May 31, 2024, 02:15 AM ISTUpdated : May 31, 2024, 08:32 AM IST
(-ಆದಿಲ್‌, ಚನ್ನಗಿರಿ) | Kannada Prabha

ಸಾರಾಂಶ

ರಾಜ್ಯವ್ಯಾಪಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಚನ್ನಗಿರಿ ಪೊಲೀಸ್ ಠಾಣೆಯ ಆದಿಲ್ ಸಾವಿನ ಪ್ರಕರಣದ ಮರಣೋತ್ತರ ವರದಿ ಸಿಐಡಿ ತಂಡದ ಕೈಸೇರಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದಲೇ ಆದಿಲ್ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

  ದಾವಣಗೆರೆ :  ರಾಜ್ಯವ್ಯಾಪಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಚನ್ನಗಿರಿ ಪೊಲೀಸ್ ಠಾಣೆಯ ಆದಿಲ್ ಸಾವಿನ ಪ್ರಕರಣದ ಮರಣೋತ್ತರ ವರದಿ ಸಿಐಡಿ ತಂಡದ ಕೈಸೇರಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದಲೇ ಆದಿಲ್ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಚನ್ನಗಿರಿಯ ಟಿಪ್ಪು ನಗರದ ವಾಸಿ, ಕಾರ್ಪೆಂಟರ್ ಕೆಲಸಗಾರ ಆದಿಲ್‌ಗೆ ಪೊಲೀಸರು ವಿಚಾರಣೆಗೆ ಕರೆ ತಂದ ಕೆಲವೇ ನಿಮಿಷಗಳಲ್ಲಿ ಆತ ಸಾವನ್ನಪ್ಪಿದ್ದ. ಆತನನ್ನು ಪೊಲೀಸರೇ ಹೊಡೆದು ಕೊಂದಿದ್ದು, ಇದೊಂದು ಲಾಕಪ್ ಡೆತ್ ಎಂಬುದಾಗಿ ಸಂಬಂಧಿಗಳು, ಒಂದು ಕೋಮಿನ ಜನರು ಆರೋಪಿಸಿ ಆದಿಲ್ ಶವ ತಂದು ಠಾಣೆಯಲ್ಲಿಟ್ಟು ಪ್ರತಿಭಟಿಸಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಪೊಲೀಸ್ ಠಾಣೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಇಲಾಖೆ ಜೀಪು, ಇತರೆ ವಾಹನಗಳನ್ನು ಜಖಂ ಮಾಡಿದ್ದರು. ಘಟನೆಯಲ್ಲಿ ಪೊಲೀಸ್‌ ಸಿಬ್ಬಂದಿ ಸಹ ಗಾಯಗೊಂಡಿದ್ದರು.

ಮೃತ ಆದಿಲ್ ಶವವನ್ನು ಚನ್ನಗಿರಿಯಿಂದ ದಾವಣಗೆರೆ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ತರಲಾಗಿತ್ತು. ನ್ಯಾಯಾಧೀಶರ ಸಮ್ಮುಖ ಆದಿಲ್‌ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿತ್ತು. ಮರಣೋತ್ತರ ಪರೀಕ್ಷಾ ವರದಿ ಇದೀಗ ಸಿಐಡಿ ತನಿಖಾಧಿಕಾರಿಗಳ ಕೈ ಸೇರಿದೆ. ಮರಣೋತ್ತರ ವರದಿ ಪರೀಕ್ಷೆಯಲ್ಲಿ ಆದಿಲ್‌ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿರುವ ಮಾಹಿತಿ ಇದೆ. ಕಡಿಮೆ ರಕ್ತದೊತ್ತಡದಿಂದಾಗಿ ಹೃದಯಸ್ತಂಭನಗೊಂಡು ಆದಿಲ್ ಸಾವನ್ನಪ್ಪಿರುವ ಬಗ್ಗೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಶವ ಪರೀಕ್ಷೆ ನಡೆಸಿದ ವೈದ್ಯರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಮೃತ ಆದಿಲ್‌ನ ಇತರೆ ದೇಹದ ಇನ್ನು ಕೆಲ ಅಂಶಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್ಎಲ್‌)ಕ್ಕೆ ಕಳಿಸಲಾಗಿದೆ. ಈಗ ಸಿಐಡಿ ತನಿಖಾ ತಂಡವು ಎಫ್‌ಎಸ್‌ಎಲ್‌ ವರದಿಗಾಗಿ ಕಾಯುತ್ತಿದೆ. ಆದಿಲ್ ಸಾವಿನ ಕುರಿತಂತೆ ಸಿಐಡಿ ಪೊಲೀಸ್ ಅಧಿಕಾರಿಗಳ ತಂಡದ ತನಿಖೆ ಮುಂದುವರಿದಿದೆ. 

PREV

Recommended Stories

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : 3 ಜಿಲ್ಲೆಗಳಿಗೆ 3 ದಿನ ಯೆಲ್ಲೋ, 2 ದಿನ ಆರೆಂಜ್‌ ಅಲರ್ಟ್‌
ಅಲೆಮಾರಿಗಳಿಗೆ 6 ನಿರ್ಣಯ ಜಾರಿ ಮಾಡಿ ವಿಶೇಷ ಪ್ಯಾಕೇಜ್‌ಗೆ ಸಮಾಜ ಆಗ್ರಹ