ಹೇಮಾವತಿ ಉಕ್ಕಿನ ಸೇತುವೆ ನಿರ್ವಹಣೆಯನ್ನೂ ಮರೆತ ಆಡಳಿತ

KannadaprabhaNewsNetwork |  
Published : Jul 08, 2026, 01:45 AM IST
7ಎಚ್ಎಸ್ಎನ್3ಎ : ಕಬ್ಬಿಣದ ಸೇತುವೆ ಮೇಲೆ ನಿರ್ಮಾಣಗೊಂಡಿರುವ ಪಾದಚಾರಿ ರಸ್ತೆಯ ದುಸ್ಥಿತಿ. ಹಾಗು ಕಬ್ಬಿಣದ ಸೇತುವೆ. | Kannada Prabha

ಸಾರಾಂಶ

ಹೇಮಾವತಿ ನದಿಗೆ ಅಂದು ಸೇತುವೆ ನಿರ್ಮಾಣಗೊಂಡ ನಂತರ ತಾಲೂಕಿನಲ್ಲಿ ಸಾಕಷ್ಟು ಕಾಫಿತೋಟಗಳು ನಿರ್ಮಾಣಗೊಂಡರೆ ಪಟ್ಟಣದಲ್ಲಿ ಹಲವು ಕಟ್ಟಡಗಳು ತಲೆ ಎತ್ತಿದ್ದಲ್ಲದೆ ಕರಾವಳಿಗೂ ಒಳನಾಡಿಗೂ ಸಾರಿಗೆ ಸೌಕರ್ಯ ಏರ್ಪಟ್ಟಿತ್ತು. ಸತತ ಒಂದು ಶತಮಾನಗಳ ಕಾಲ ಕರಾವಳಿ ಹಾಗೂ ಒಳನಾಡಿನ ಕೊಂಡಿಯಾಗಿ ಕೆಲಸ ಮಾಡಿದ ಕಬ್ಬಿಣದ ಸೇತುವೆ ಬೃಹತ್ ವಾಹನಗಳ ಸಂಚಾರಕ್ಕೆ ಸರಿಯಲ್ಲ ಎಂಬಕಾರಣದಿಂದ ೧೯೬೦ರ ದಶಕದಲ್ಲಿ ಹೇಮಾವತಿ ನದಿಗೆ ಮತ್ತೊಂದು ಸೇತುವೆ ನಿರ್ಮಾಣ ಮಾಡಿದ ಪರಿಣಾಮ ಕಳೆದ ಅರ್ಧ ಶತಮಾನದಿಂದ ಸೇತುವೆ ನಿರುಪಯೋಗಿಯಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಟ್ಟಣದ ಹೇಮಾವತಿ ನದಿಗೆ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆ ನಿರ್ವಹಣೆಯ ಕೊರತೆಯಿಂದ ನಲುಗುತ್ತಿದೆ.

ಹೌದು ೧೮೬೦ರ ದಶಕದಲ್ಲಿ ಬ್ರೀಟಿಷರು ಕರಾವಳಿ ತಲುಪುವ ಉದ್ದೇಶದಿಂದ ಹಾಗೂ ತಾಲೂಕಿನಲ್ಲಿ ಕಾಫಿ ತೋಟ ನಿರ್ವಹಣೆಯ ಉದ್ದೇಶದಿಂದ ಲಂಡನ್‌ನಿಂದ ಕಬ್ಬಿಣ ರಫ್ತು ಮಾಡಿಕೊಳ್ಳುವ ಮೂಲಕ ಹೇಮಾವತಿ ನದಿಗೆ ಅತ್ಯದ್ಭುತವಾದ ಎರಡು ಪಥದ ಕಬ್ಬಿಣದ ಸೇತುವೆ ನಿರ್ಮಾಣ ಮಾಡಿದ್ದರು. ಹೇಮಾವತಿ ನದಿಗೆ ಅಂದು ಸೇತುವೆ ನಿರ್ಮಾಣಗೊಂಡ ನಂತರ ತಾಲೂಕಿನಲ್ಲಿ ಸಾಕಷ್ಟು ಕಾಫಿತೋಟಗಳು ನಿರ್ಮಾಣಗೊಂಡರೆ ಪಟ್ಟಣದಲ್ಲಿ ಹಲವು ಕಟ್ಟಡಗಳು ತಲೆ ಎತ್ತಿದ್ದಲ್ಲದೆ ಕರಾವಳಿಗೂ ಒಳನಾಡಿಗೂ ಸಾರಿಗೆ ಸೌಕರ್ಯ ಏರ್ಪಟ್ಟಿತ್ತು. ಸತತ ಒಂದು ಶತಮಾನಗಳ ಕಾಲ ಕರಾವಳಿ ಹಾಗೂ ಒಳನಾಡಿನ ಕೊಂಡಿಯಾಗಿ ಕೆಲಸ ಮಾಡಿದ ಕಬ್ಬಿಣದ ಸೇತುವೆ ಬೃಹತ್ ವಾಹನಗಳ ಸಂಚಾರಕ್ಕೆ ಸರಿಯಲ್ಲ ಎಂಬಕಾರಣದಿಂದ ೧೯೬೦ರ ದಶಕದಲ್ಲಿ ಹೇಮಾವತಿ ನದಿಗೆ ಮತ್ತೊಂದು ಸೇತುವೆ ನಿರ್ಮಾಣ ಮಾಡಿದ ಪರಿಣಾಮ ಕಳೆದ ಅರ್ಧ ಶತಮಾನದಿಂದ ಸೇತುವೆ ನಿರುಪಯೋಗಿಯಾಗಿದೆ.

ಸೇತುವೆ ನಿರ್ಮಾಣಗೊಂಡು ಒಂದೂವರೆ ಶತಮಾನವೇ ಕಳೆದಿದ್ದರು ಇಂದಿಗೂ ಸೇತುವೆಯ ಒಂದು ಬೋಲ್ಟ್ ಸಹ ತುಕ್ಕು ಹಿಡಿಯದಾಗಿದೆ. ಹೀಗೆ ನಿರುಪಯೋಗಿಯಾಗಿದ್ದ ಸೇತುವೆಯನ್ನು ಕೇಂದ್ರ ಸರ್ಕಾರದಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿದ್ದ ಬೈಕೆರೆ ನಾಗೇಶ್ ಕಬ್ಬಿಣ ಸೇತುವೆಯ ಒಂದು ಪಥಕ್ಕೆ ೨೦೧೦ರಲ್ಲಿ ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ಕಾಂಕ್ರಿಟಿಕರಣ ಮಾಡುವ ಮೂಲಕ ಪಾದಚಾರಿ ಸಂಚಾರಕ್ಕೆ ಈ ಸೇತುವೆಯನ್ನು ಸಜ್ಜುಗಳಿಸಿದ್ದರು. ಪಾದಚಾರಿ ಸೇತುವೆ ನಿರ್ಮಾಣಗೊಂಡ ನಂತರ ಹೊಸ ಸೇತುವೆಯ ಮೇಲೆ ವಾಹನದ ನಡುವೆ ಸಂಚರಿಸುತ್ತಿದ್ದ ಪಾದಚಾರಿಗಳಿಗೆ ನಿರ್ಭಯವಾಗಿ ಸಂಚರಿಸಲು ಸಹಕರಿಯಾಗಿತ್ತು. ಪಾದಚಾರಿ ರಸ್ತೆಯೊದ್ದಕ್ಕೂ ಬೀದಿ ದೀಪ ಆಳವಡಿಸಿದ್ದರಿಂದ ರಾತ್ರಿಯ ವೇಳೆಯು ಜನರು ನಿರ್ಭಯಾಗಿ ಸಂಚರಿಸ ಬಹುದಾಗಿತ್ತು. ಆದರೆ, ಇತ್ತಿಚ್ಚಿನ ವರ್ಷಗಳಲ್ಲಿ ಪಾದಚಾರಿ ಮಾರ್ಗದ ನಿರ್ವಹಣೆಯನ್ನು ಪುರಸಭೆ ಮರೆತಿರುವ ಕಾರಣ ರಸ್ತೆಯ ಎರಡು ಬದಿಯಲ್ಲಿ ಗಿಡಗಂಟಿಗಳು ಬೆಳೆದಿದ್ದರೆ, ಈ ರಸ್ತೆ ಶೌಚಾಲಯವಾಗಿ ಬದಲಾಗಿದೆ. ಜನರು ತಿಳಿದೂ ತಿಳಿಯದು ಈ ರಸ್ತೆಯಲ್ಲಿ ಸಂಚರಿಸಿದರೆ ನರಕ ದರ್ಶನವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಲ್ಲದೆ ಪಾದಚಾರಿ ರಸ್ತೆಗೆ ಹಾಕಲಾಗಿದ್ದ ಬೀದಿದೀಪಗಳು ನಂದಿ ಹಲವು ವರ್ಷಗಳೆ ಕಳೆದಿದ್ದು ಸರಿಪಡಿಸುವ ಗೋಜಿಗೆ ಪರುಸಭೆ ಮುಂದಾಗಿಲ್ಲ. ಇದರಿಂದಾಗಿ ಲಕ್ಷಾಂತರ ರುಪಾಯಿ ವೆಚ್ಚಮಾಡಿ ನಿರ್ಮಿಸಿದ್ದ ಪಾದಚಾರಿ ರಸ್ತೆ ಸದ್ಯ ಉಪಯೋಗಕ್ಕಿಲ್ಲದಂತಾಗಿದೆ.ಸ್ಮಾರಕ ಮಾಡಿ:

ಬ್ರೀಟಿಷರಿಂದ ನಿರ್ಮಾಣವಾದ ಕಬ್ಬಿಣದ ಸೇತುವೆ ಇಂದಿಗೂ ನೋಡುಗರ ಪಾಲಿಗೆ ಸೋಜಿಗದಂತಿದೆ. ಆದರೆ, ಸೇತುವೆಯ ಮೇಲ್ಬಾಗದಲ್ಲಿ ಬೆಳೆದಿರುವ ಬೃಹತ್ ಮರಗಳು ಸೇತುವೆಯ ಅಸ್ತಿತ್ವಕ್ಕೆ ಕುತ್ತು ತರುತ್ತಿವೆ. ಸೇತುವೆ ನಿರ್ಮಾಣವಾದ ವೇಳೆ ಎರಡು ಬದಿಯಲ್ಲಿ ನಿರ್ಮಿಸಿದ್ದ ಕಟ್ಟೆಗಳು ಈಗಾಗಲೇ ಮರಗಳಿಂದಾಗಿ ನಾಶದ ಹಂತ ತಲುಪಿದ್ದು ಹಲವು ಬಾರಿ ಪಟ್ಟಣದ ಕೆಲವು ಸಂಘಟನೆಯ ಮುಖಂಡರು ಮರಗಳನ್ನು ಕತ್ತರಿಸಿ ಸೇತುವೆ ರಕ್ಷಣೆಗೆ ಮುಂದಾಗಿದ್ದರು. ಆದರೆ, ಮರಗಳ ಬೇರುಗಳನ್ನೆ ಸಂಪೂರ್ಣ ಕಿತ್ತುಹಾಕದ ಹೊರತು ಮರಗಳ ನಿರ್ನಾಮ ಅಸಾದ್ಯ ಎಂಬ ಮಾತಿದ್ದು ಈ ಕೆಲಸವಾಗದ ಹೊರತು ಸೇತುವೆಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಆದ್ದರಿಂದ ಪುರಸಭೆ ಸ್ಮಾರಕವಾಗ ಬಲ್ಲ ಸೇತುವೆಯನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ತೋರ್‍ಪಡಿಸಬೇಕು ಎಂಬ ಕೂಗು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.ಹೊಸ ಸೇತುವೆಯ ದುಸ್ಥಿತಿ:

ಮೋಟರ್‌ ವಾಹನಗಳ ಸಂಖ್ಯೆ ಹಾಗೂ ತೋಕ ಸಾಗಣೆ ಹೆಚ್ಚಿದ ಪರಿಣಾಮ ಅಂದು ಎತ್ತು,ಕುದುರೆಗಾಡಿ ಹಾಗೂ ಲಘುವಾಹನಗಳ ಸಂಚಾರಕ್ಕೆ ನಿರ್ಮಾಣ ಮಾಡಿದ್ದ ಕಬ್ಬಿಣದ ಸೇತುವೆ ಬದಲಿಗೆ ೧೯೬೦ರ ದಶಕದಲ್ಲಿ ಕಬ್ಬಿಣದ ಸೇತುವೆಗೆ ಪರ್ಯಾಯವಾಗಿ ಹೊಸಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ, ೧೯೬೦ರ ದಶಕದಲ್ಲಿ ನಿರ್ಮಾಣವಾದ ಸೇತುವೆಯ ಮೇಲ್ಮೈ ಭಾರಿ ವಾಹನಗಳ ಸಂಚಾರದ ವೇಳೆ ಅದುರುವುದರಿಂದ ಭಯ ಸೃಷ್ಟಿಯಾಗುತ್ತಿತ್ತು. ಈ ಬಗ್ಗೆ ಹಲವು ದೂರುಗಳು ಹೆದ್ದಾರಿ ಇಲಾಖೆಗೆ ಸಲ್ಲಿಕೆಯಾದ ನಂತರ ೨೦೧೦ ಹಾಗೂ ೨೦೧೬ರಲ್ಲಿ ಎರಡು ಬಾರಿ ಸೇತುವೆಗೆ ಹೆಚ್ಚುವರಿ ಪಿಲ್ಲರ್‌ಗಳನ್ನು ಆಳವಡಿಸಿ ಸೇತುವೆ ರಕ್ಷಣೆ ಮಾಡಲಾಗಿದೆ. ಇದರಿಂದ ಕೆಲಕಾಲ ಸೇತುವೆ ಅದುರುವುದು ನಿಲುಗಡೆಯಾಗಿತ್ತಾದರೂ ಇತ್ತೀಚಿನ ದಿನಗಳಲ್ಲಿ ಮತ್ತದೆ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ, ಸಂಕಷ್ಟದ ಸಮಯದಲ್ಲಿ ಸೇತುವೆಯ ಅಡಿಗೆ ತೆರಳಲು ಬಿಡಲಾಗಿದ್ದ ರಸ್ತೆ ಇತ್ತಿಚ್ಚಿನ ದಿನಗಳಲ್ಲಿ ಒತ್ತುವರಿಯಾಗಿದ್ದು ಸೇತುವೆ ದುರಸ್ತಿಗೆ ತೆರಳಲು ಸಾಧ್ಯವಿಲ್ಲದಂತಾಗಿದೆ. ತಾಲೂಕು ಆಡಳಿತ ಒತ್ತುವರಿಯಾಗಿರುವ ರಸ್ತೆಯನ್ನು ತೆರವುಗೊಳಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಲೂಕಿನಲ್ಲಿ ೧೯೬೭ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು
ಬೆಳೆಗೆ ನೀರು ಕೊಡದಿದ್ದರೆ ಕೋಟ್ಯಂತರ ರು. ನಷ್ಟ