ಮಾರುತಿ ಶಿಡ್ಲಾಪೂರ
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕೆರೆ ಒಳಗೊಂಡ ಹಾನಗಲ್ಲ ತಾಲೂಕಿನಲ್ಲಿ ೯೦೧ ಕೆರೆಗಳ ಸರ್ವೇ ಮೂಲಕ ಒತ್ತುವರಿ ತೆರವುಗೊಳಿಸಿ, ಅಳತೆಗನುಗುಣವಾಗಿ ಸುತ್ತಲೂ ಕಂದಕ ನಿರ್ಮಾಣಕ್ಕೆ ತಾಲೂಕು ಆಡಳಿತ ಮುಂದಾಗಿದೆ.
ರಾಜ್ಯದಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸಲು ರಾಜ್ಯ ಸರ್ಕಾರದ ಆದೇಶಿಸಿದೆ. ಅದರಂತೆ ತಾಲೂಕಿನ ಎಲ್ಲ ೯೦೧ ಕೆರೆಗಳ ಸರ್ವೇ ಹಾಗೂ ಒತ್ತುವರಿ ಗುರುತಿಸಿ ತೆರವುಗೊಳಿಸುವತ್ತ ಸ್ಥಳೀಯ ಆಡಳಿತ ಚಿತ್ತ ನೆಟ್ಟಿದೆ. ೪೦ ಪರವಾನಿಗೆ ಪಡೆದ ಭೂಮಾಪಕರು, ೫ ಸರ್ಕಾರಿ ಭೂಮಾಪಕರು, ತಹಸೀಲ್ದಾರರನ್ನೊಳಗೊಂಡು ಮೇಲ್ವಿಚಾರಕರು, ೪೫ ಗ್ರಾಮ ಆಡಳಿತದ ಕಂದಾಯ ನಿರೀಕ್ಷಕರು ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದು, ಇನ್ನೆರಡು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.ತಾಲೂಕಿನಲ್ಲಿ ೯೦೧ ಕೆರೆಗಳು ೭೫೪೭ ಎಕರೆಯಷ್ಟು ಒಟ್ಟು ವಿಸ್ತೀರ್ಣ ಹೊಂದಿವೆ ಎಂದು ಗುರುತಿಸಲಾಗಿದೆ. ೯೦೧ ಕೆರೆಗಳಲ್ಲಿ ಈಗಾಗಲೇ ೨೪೭ ಕೆರೆಗಳ ಮೋಜಣಿ ಪೂರ್ಣಗೊಂಡಿದ್ದು, ಒತ್ತುವರಿಯಾದ ಪ್ರದೇಶಗಳನ್ನು ಗುರುತಿಸಿ ರೈತರಿಗೆ ಮಾಹಿತಿ ನೀಡಲಾಗಿದೆ. ಇದರಲ್ಲಿ ೧೭೮ ಕೆರೆಗಳು ಒತ್ತುವರಿ ಮುಕ್ತ ಕೆರೆಗಳಾಗಿದ್ದು ೬೯ ಕೆರೆಗಳು ಒತ್ತುವರಿಯಾಗಿವೆ ಎಂಬ ಮಾಹಿತಿ ಇದೆ. ಈಗಾಗಲೇ ಇದರಲ್ಲಿ ೩೫ ಕೆರೆಗಳ ಒತ್ತುವರಿ ತೆರವುಗೊಳಿಸಿ ಕ್ರಮ ಜರುಗಿಸಲಾಗಿದೆ.
ಕೋಡಿ ನಿರ್ಮಾಣ:
ಸರ್ಕಾರದ ನಿರ್ದೇಶನದಂತೆ ಸರ್ವೇ ಹಾಗೂ ಒತ್ತುವರಿ ತೆರವು ಕಾರ್ಯ ಶೀಘ್ರಗತಿಯಲ್ಲಿ ನಡೆದಿದೆ. ಎರಡು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಅತಿ ಹೆಚ್ಚು ಕೆರೆಗಳಿರುವ ತಾಲೂಕಿನಲ್ಲಿ ಬಹುತೇಕ ನೀರಾವರಿ ಕೆರೆಗಳಿವೆ. ಈ ಮೋಜಣಿಯಿಂದಾಗಿ ಕೆರೆಗಳು ಅಭಿವೃದ್ಧಿಯಾಗಿ ರೈತರಿಗೆ ಸರಿಯಾದ ನೀರು ಒದಗಿಸಲು ಸಾಧ್ಯ. ಈಗಾಗಲೇ ಶೇ.೩೦ರಷ್ಟು ಮೋಜಣಿ ಕಾರ್ಯ ಮುಗಿದಿದೆ ಎನ್ನುತ್ತಾರೆ ಗ್ರೇಡ್-೨ ತಹಸೀಲ್ದಾರ ರವಿಕುಮಾರ ಕೊರವರ.