ಹುಬ್ಬಳ್ಳಿ: ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಳ್ಳಲು ಹಾಗೂ ಇರುವ ಸ್ಥಾನ ಉಳಿಸಿಕೊಳ್ಳಲು ಶಾಸಕರು- ಸಚಿವರು ಪರಸ್ಪರ ಬಡಿದಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದೆ. ಪಕ್ಷದಲ್ಲಿನ ಈ ಗೊಂದಲದಿಂದಾಗಿ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಜಾಲರಿ ಟೋಪಿ ಎನ್ನಲಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಶಾಸಕ ಮುನಿರತ್ನ ಅವರಿಗೆ ಏಯ್ ಕರಿ ಟೋಪಿ ಎಂದು ಕರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಡಿ.ಕೆ. ಶಿವಕುಮಾರ ಮುಸ್ಲಿಮರು ಟೋಪಿ ಹಾಕಿಕೊಂಡು ಬಂದಾಗ ಇದೇ ಮಾದರಿಯಲ್ಲಿ ಕರೆಯುತ್ತಾರೆಯೇ? ಧೈರ್ಯ ಇದ್ದರೆ, ಅವರು ಹಾಕುವ ಟೋಪಿಗೆ ಜಾಲರಿ ಟೋಪಿ ಎಂದು ಕರೆಯಲಿ ನೋಡೋಣ ಎಂದು ಸವಾಲು ಹಾಕಿದರು.
ರಾಜ್ಯ ಸರ್ಕಾರ ದಿವಾಳಿ: ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಳಿತಪ್ಪಿದೆ. ಅತ್ಯಾಚಾರ, ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅತಿವೃಷ್ಟಿಯಿಂದ ರೈತರು ಬೀದಿಗೆ ಬಂದಿದ್ದಾರೆ. ಅವರಿಗೆ ಈ ವರೆಗೂ ಪರಿಹಾರ ನೀಡಿಲ್ಲ. ಕೇರಳದ ವಯಾನಾಡಿನಲ್ಲಿ ಆನೆ ತುಳಿತಕ್ಕೆ ವ್ಯಕ್ತಿ ಸತ್ತರೆ ಪರಿಹಾರ ನೀಡುತ್ತಾರೆ. ಆದರೆ, ಕರ್ನಾಟಕದಲ್ಲಿ ಆನೆ ತುಳಿತದಿಂದ ಅಸು ನೀಗಿದವರ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಸಹ ಸರಿಯಾಗಿ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಹು-ಧಾ ಮಹಾನಗರ ಪಾಲಿಕೆಯ ₹350 ಕೋಟಿ ಬಾಕಿ ಉಳಿಸಿಕೊಂಡಿದೆ. ಪಾಲಿಕೆಯು ಹಲವು ಬಾರಿ ಮನವಿ ಮಾಡಿದರೂ ನೀಡಿಲ್ಲ. ಒಟ್ಟಿನಲ್ಲಿ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.