ಆಳಂದ ತಾಲೂಕಲ್ಲಿ ಆಡಳಿತ ಯಂತ್ರ ಕುಸಿದಿದೆ

KannadaprabhaNewsNetwork | Published : Aug 19, 2024 12:47 AM

ಸಾರಾಂಶ

ಜಿಲ್ಲೆಯ ಆಳಂದ ಮತಕ್ಷೇತ್ರದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ, ಪೊಲೀಸರು, ತಾಪಂ, ಪಪಂ ಸಂಸ್ಥೆಗಳಲ್ಲಿರುವವರು ಜನಪರವಾಗಿ ಕೆಲಸಕ್ಕೆ ಮುಂದಾಗದೆ ರಾಜಕೀಯವಾಗಿ ಪ್ರಭಾವಿಗಳದ್ದೆ ಕಾರುಬಾರು, ಹಾಲಿ ಶಾಸಕರು, ಅವರ ಬಂಧುಗಳೇ ಇಲ್ಲಿ ಬೇಕಾಬಿಟ್ಟಿ ಕೆಲಸಗಳನ್ನು ಅಧಿಕಾರಿಗಳಿಂದ ಮಾಡಿಸುತ್ತ ಹಗರಣಗಳಿಗೂ ಕಾರಣರಾಗುತ್ತಿದ್ದಾರೆಂದು ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದರ್‌, ಬಿಜೆಪಿ ಮುಖಂಡ ಹಣಮಂತಾರಯ ಮಾಲಾಜಿ ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಅನ್ನಭಾಗ್ಯ ಅಕ್ಕಿ, ಅಂಗನವಾಡಿಗೆ ಹೋಗಬೇಕಿದ್ದ ದಿನಸಿ ಕಳವಾಗುತ್ತಿದೆ. ತಾವೇ ಖುದ್ದು ಅಕ್ರಮ ಅಕ್ಕಿ ಸಂಗ್ರಹ ಗೋದಾಮಿಗೆ ಹೋಗಿ ರೆಡ್‌ಹ್ಯಾಂಡ್‌ ಆಗಿ ಹಿಡಿದುಕೊಟ್ಟರೂ ಪ್ರಕರಣ ದಾಖಲಾಗಿಲ್ಲ. ಪೊಲೀಸರು ಶಾಸಕರ ಅಣತಿ ಮೀರಿ ಯಾವುದೇ ಕೇಸ್‌ ದಾಖಲಿಸುತ್ತಿಲ್ಲವೆಂದು ಆರೋಪ ಮಾಡಿದರು.

ಪಡಿತರ ಅಕ್ಕಿ ಅಕ್ರಮದಲ್ಲಿ ಪುರಸಭೆ ಸದಸ್ಯರು, ಗಡಿಪಾರಾದವರು ಭಾಗಿಯಾಗಿದ್ದಾರೆ. ಹೀಗಿದ್ದರೂ ಯಾಕೆ ಇಂತಹವರ ಮೇಲೆ ಕ್ರಮವಿಲ್ಲ, ಇವರಿಗೆಲ್ಲರಿಗೂ ಹಾಲಿ ಶಾಸಕರದ್ದೇ ಕೃಪೆ ಎಂದು ದೂರಿದ ಗುತ್ತೇದಾರ್‌ ತಾಲೂಕಿನಲ್ಲಿ ಆಯಾ ಇಲಾಖೆಗೆ ಒಬ್ಬೊಬ್ಬರನ್ನ ನೇಮಿಸಿ ಶಾಸಕರು ಮನಸೋ ಇಚ್ಛೆ ಕೆಲಸಗಳಿಗೆ ಕಾರಣರಾಗಿದ್ದಾರೆಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗುತ್ತೇದಾರ್‌, ಶಾಸಕರಿಗೆ ಆಡಳಿತ ಮಾಡಲಾಗದೆ ಅವರ ಸಹೋದರರ ಪುತ್ರನಿಗೆ ಒಪ್ಪಿಸಿದಂತಿದೆ. ಅವರೇ ತಾಲೂಕಿನ ಎಲ್ಲವನ್ನು ನಿಭಾಯಿಸುತ್ತಿದ್ದಾರೆ. ಗೆದ್ದವರಿಗೆ ಅಧಿಕಾರ ಮಾಡಲಾಗದೆ ಹೋದಲ್ಲಿ ನಾವು ನೆರವು ನೀಡುತ್ತೇವೆ. ಜನಪರವಾಗಿ ಕೆಲಸ ಮಾಡೋದನ್ನ ರೂಢಿಸಿಕೊಳ್ಳಿ ಎಂದು ಹೇಳಿದರು.

ತಾಲೂಕಿನ ಕೆಕೆಆರ್‌ಡಿಬಿ, ನಮ್ಮಹೊಲ ನಮ್ಮ ರಸ್ತೆ, ಪಿಬ್ಲೂಡಿ, ನರೇಗಾ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಹಗರಣಗಳು ನಡೆಯುತ್ತಿವೆ ಎಂದು ಹರ್ಷಾನಂದ ದೂರಿದರು.

ಆಳಂದ ಮಂಡಲ ಬಿಜೆಪಿಯ ಮಲ್ಲಿಕಾರ್ಜುನ ಕಂದಗೋಳೆ, ಮುಖಂಡ ಹಣಮಂತರಾಯ ಮಲಾಜಿ, ಸಂತೋಷ ಹಾದಿಮಾನಿ, ಬಾಬೂರಾವ ಸರಡಗಿ ಸುದ್ದಿಗೋಷ್ಠಿಯಲ್ಲಿದ್ದರು.

Share this article