ಹೊಸಪೇಟೆ: ಈ ಜೀವನ ಭಗವಂತ ನೀಡಿದ ಆಶೀರ್ವಾದ. ನಾವು ಸುಂದರ ಬದುಕು ಸಾಗಿಸಲು ಉತ್ತಮ ಹವ್ಯಾಸ ಹಾಗೂ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಅನುಕರಣೀಯವಾಗಿ ಬದುಕಬೇಕು ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಮಾಜಿ ಸಚಿವ ಆನಂದ ಸಿಂಗ್ ಮಾತನಾಡಿ, ಸಮಾಜದ ಪ್ರತಿಯೊಬ್ಬರು ತಮ್ಮ ಬೆಳವಣಿಗೆಯ ಸಹಕಾರ ಪಡೆದು ಬೆಳೆದ ಮೇಲೆ ಸಮಾಜಕ್ಕೆ ನಾವು ಕೊಡುಗೆ ನೀಡಬೇಕು. ನಾವು ಬೆಳೆಯತ್ತಿದ್ದಂತೆ ನಮ್ಮ ಕಾಲೆಳೆಯುವವರು ಹೆಚ್ಚಾಗುತ್ತಾರೆ. ಆದರೂ ನಾವು ಧೃತಿಗೆಡದೇ ಮುನ್ನುಗ್ಗಿ ಸಮಾಜಮುಖಿ ಕಾರ್ಯ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ಇಂದು ಮನೆ ಕಟ್ಟುವುದು ಸುಲಭವಾಗಿದೆ. ಆದರೆ ಮನಸ್ಸು ಕಟ್ಟುವುದು ಕಷ್ಟವಾಗಿದೆ. ಸದ್ಯ ನಾವು ಮನಸ್ಸು ಕಟ್ಟುವ ಕೆಲಸ ಮಾಡಬೇಕಿದೆ ಎಂದರು.ಶತಮಾನ ಕಂಡ ಸಹಕಾರಿ ಚಳವಳಿ ಕುರಿತು ಹಿರಿಯ ಸಹಕಾರಿ ವಿಶ್ವನಾಥ ಚ.ಹಿರೇಮಠ ಮಾತನಾಡಿ, ಸಹಕಾರಿ ಚಳವಳಿ ತನ್ನದೇ ಆದ ಮಹತ್ವವಿದೆ. ಸನ್ನಿವೇಶಕ್ಕೆ ತಕ್ಕಂತೆ ನಮ್ಮ ಆಲೋಚನೆ ಬದಲಾಯಿಸುವ ಮಾರ್ಗದರ್ಶನ ಮಾಡಬೇಕಾಗಿದೆ. ಇಲವಾದರೆ ನಮ್ಮ ಅಸ್ತಿತ್ವವೇ ಇಲ್ಲವಾಗುತ್ತದೆ. ನಮ್ಮ ಭಾಗದ ಹೊಸಪೇಟೆಯ ಸಿಟಿ ಕೋ ಆಪರೇಟಿವ್ ಬ್ಯಾಂಕ್, ಬಿಡಿಸಿಸಿ ಬ್ಯಾಂಕ್ ಹಾಗೂ ಗೃಹ ನಿರ್ಮಾಣ ಸಹಕಾರಿ ಸಂಘ ಸ್ಥಾಪನೆಯ ಹಿಂದೆ ಒಂದು ದೂರದೃಷ್ಟಿ ಇತ್ತು. ಇದು ನಿಜಕ್ಕೂ ಅನುಕರಣೀಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹೊಸಪೇಟೆಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರನ್ನು, ಸಹಕಾರಿಯಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೇಸರಿಮಠ, ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ, ಉಪಾಧ್ಯಕ್ಷ ಕಾಕುಬಾಳ ರಾಜೇಂದ್ರ ಮತ್ತಿತರರಿದ್ದರು. ಕಲಾವಿದ ಅಭಿನಂದನ್ ನಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಶ್ರಾವಣಿ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಸಹಕಾರಿ ಧುರೀಣರು, ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.