ಬ್ಯಾಡಗಿ: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಆ. 19ರಂದು ನಿಗದಿಯಾಗಿದ್ದು, ಬಹುಮತ ಹೊಂದಿರುವ ಬಿಜೆಪಿಗೆ ಮೇಲ್ನೋಟಕ್ಕೆ ಎರಡೂ ಸ್ಥಾನಗಳು ಬಹುತೇಕ ಖಚಿತವೆನಿಸಿದರೂ ಕಾಂಗ್ರೆಸ್‌ನಲ್ಲಿ ಕೂಡ ರಾಜಕೀಯ ಚಟುವಟಿಕೆಗಳು ಗರಿ ಗೆದರಿವೆ.
ಮೀಸಲಾತಿ ನಿಗದಿಯಾಗದೇ ಕಳೆದ ಒಂದೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಇದೀಗ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ (ಎಸ್ಸಿ) ಮೀಸಲು ನಿಗದಿಯಾಗಿದ್ದು, ಆ. 19ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ.ಬಿಜೆಪಿಗೆ ಬಹುಮತ: ಪುರಸಭೆಯ ಒಟ್ಟು 23 ಸದಸ್ಯರ ಪೈಕಿ 13 (ಬಿಜೆಪಿ), 4 (ಪಕ್ಷೇತರ) ಹಾಗೂ 6 (ಕಾಂಗ್ರೆಸ್) ಸದಸ್ಯರಿದ್ದಾರೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 4 ಜನ ಪಕ್ಷೇತರರು ಬಿಜೆಪಿ ಪಾಳಯದಲ್ಲಿ ಗುರ್ತಿಸಿಕೊಂಡಿದ್ದು, ಹಿಂದೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಎರಡೂ ಸ್ಥಾನ ಬಹುತೇಕ ಬಿಜೆಪಿಗೆ:ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮಾಜಿ ಶಾಸಕ ಸುರೇಶಗೌಡ ಅವರ ಪುತ್ರ ಬಾಲಚಂದ್ರ ಪಾಟೀಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸುಭಾಸ್ ಮಾಳಗಿ ಇವರ ಹೆಸರುಗಳು ಬಹುತೇಕ ಖಚಿತವಾದಂತೆ ಕಾಣುತ್ತಿದೆ. ಕಾಂಗ್ರೆಸ್ ಹೇಗಾದರೂ ಮಾಡಿ ಉಪಾಧ್ಯಕ್ಷ ಸ್ಥಾನವನ್ನು ಸದಸ್ಯ ಶಂಕರ ಕುಸಗೂರ ಅವರಿಗೆ ಕೊಡಿಸಬೇಕೆಂಬ ಪ್ರಯತ್ನ ನಡೆಸಿದೆ, ಇನ್ನೂ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಛತ್ರದ, ಚಂದ್ರಣ್ಣ ಶೆಟ್ಟರ ಇವರ ಹೆಸರುಗಳು ಕೇಳಿ ಬರುತ್ತಿವೆಯಾದರೂ ಈ ಬಾರಿ ಯುವಕರಿಗೆ ಆದ್ಯತೆ ಎನ್ನುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದ್ದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ನಾಳೆ ಬೆಳಗ್ಗೆ ಅಭ್ಯರ್ಥಿಗಳ ಹೆಸರು ಅಂತಿಮ:ಬಿಜೆಪಿಯಲ್ಲಿ ಸ್ಪಷ್ಟ ಬಹುಮತವಿದ್ದು, ಕಾಂಗ್ರೆಸ್ ಬೆಂಬಲದ ಅಗತ್ಯವಿಲ್ಲ, ಹೀಗಾಗಿ ಆಕಾಂಕ್ಷಿಗಳು ತಾಲೂಕಾಧ್ಯಕ್ಷ ಶಿವಯೋಗಿ ಶಿರೂರು ಅವರಿಗೆ ಮನವಿ ಸಲ್ಲಿಸಿದ್ದು, ನಾಳೆ ನಡೆಯುವ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯಲ್ಲಿ, ಪಕ್ಷದ ಹಿರಿಯರು ಸಭೆ ಸೇರಿ ಅಧೀಕೃತ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಿದ್ದಾರೆ.