ತುಳು ಶಿಕ್ಷಕರಿಗೂ ಅತಿಥಿ ಶಿಕ್ಷಕರ ಮಾನ್ಯತೆ ನೀಡಲು ಪ್ರಸ್ತಾಪ: ಗಟ್ಟಿ

KannadaprabhaNewsNetwork | Published : Aug 19, 2024 12:47 AM

ಸಾರಾಂಶ

ಮಂಗಳೂರಿನ ತುಳು ಸಾಹಿತಿ ರೂಪಕಲಾ ಆಳ್ವ ಅವರಿಗೆ ಈ ಸಾಲಿನ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ‘ಪಮ್ಮಕ್ಕೆನ ಪೊರುಂಬಾಟ’ ಕಾದಂಬರಿಯನ್ನು ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಅವಿಭಜಿತ ದ.ಕ. ಜಿಲ್ಲೆಯ 40 ಶಾಲೆಗಳಲ್ಲಿ ತುಳು ಕಲಿಸುತ್ತಿರುವ ಶಿಕ್ಷಕರನ್ನೂ ಉರ್ದು, ಫ್ರೆಂಚ್ ಮತ್ತಿತರ ಭಾಷಾ ಶಿಕ್ಷಕರಂತೆ, ಅತಿಥಿ ಶಿಕ್ಷಕರ ಪಟ್ಟಿಗೆ ಸೇರಿಸಿ ಗೌರವ ಧನ ನೀಡಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ರಾಜ್ಯ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.

ಅವರು ಉಡುಪಿಯಲ್ಲಿ ತುಳು ಕಾದಂಬರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ತುಳು ಶಿಕ್ಷಕರಿಗೆ ತುಳು ಅಕಾಡೆಮಿಯಿಂದಲೇ ಗೌರವಧನ ನೀಡಲಾಗುತ್ತಿದೆ. ಈ ಶಿಕ್ಷಕರಿಗೆ ಬಾಕಿ 12.50 ಲಕ್ಷ ರು. ಈಗಾಗಲೇ ಬಿಡುಗಡೆ ಮಾಡಲಾಗಿದೆ. ತುಳು ಭಾಷೆಗೆ ಮುಂದಿನ ಅಧಿವೇಶನದಲ್ಲಿ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆಯ ಸಿಹಿಸುದ್ದಿಯ ನಿರೀಕ್ಷೆ ಇದೆ. ಜೊತೆಗೆ ತುಳು ಭಾಷೆಯನ್ನು ಯೂನಿಕೋಡ್‌ನಲ್ಲಿ ಬಳಸುವ ವ್ಯವಸ್ಥೆ ಕೂಡ ಆಗುತ್ತಿದೆ ಎಂದವರು ಹೇಳಿದರು.

ತುಳು ಭಾಷೆಗಾಗಿ ಹೋರಾಟವನ್ನೇ ನಡೆಸಿದ್ದ ಯು.ಎಸ್. ಪಣಿಯಾಡಿ ಅವರನ್ನು ಸರ್ಕಾರ ಮಟ್ಟದಲ್ಲಿ ಪ್ರಶಸ್ತಿ, ದತ್ತಿನಿಧಿ, ಪೀಠ ಇತ್ಯಾದಿಗಳ ಮೂಲಕ ಗುರುತಿಸಬೇಕಾಗಿದೆ. ಈ ಬಗ್ಗೆ ಅಕಾಡೆಮಿಯಲ್ಲಿಯೂ ಯೋಚಿಸಲಾಗುತ್ತದೆ ಎಂದವರು ತಿಳಿಸಿದರು.

ಮಂಗಳೂರಿನ ತುಳು ಸಾಹಿತಿ ರೂಪಕಲಾ ಆಳ್ವ ಅವರಿಗೆ ಈ ಸಾಲಿನ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ‘ಪಮ್ಮಕ್ಕೆನ ಪೊರುಂಬಾಟ’ ಕಾದಂಬರಿಯನ್ನು ಬಿಡುಗಡೆಗೊಳಿಸಿದರು. ಸಾಹಿತಿ ಅಮಿತಾಂಜಲಿ ಕಿರಣ್ ಅವರು ಪ್ರಶಸ್ತಿ ವಿಜೇತ ಕೃತಿಯನ್ನು ಪರಿಚಯಿಸಿದರು.

ಎಸ್ಎಸ್ಎಲ್‌ಸಿ ಪರೀಕ್ಷೆಯ ತುಳು ಪಠ್ಯದಲ್ಲಿ ಶೇ.100 ಅಂಕ ಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ತೀರ್ಪುಗಾರರಾದ ವಿಮರ್ಶಕ ಮುರಳಿಧರ ಉಪಾಧ್ಯಾಯ ಹಿರಿಯಡ್ಕ ಮತ್ತು ಸಾಹಿತಿ ಪುತ್ತಿಗೆ ಪದ್ಮನಾಭ ರೈ ಅವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಎ.ಸಿ. ಭಂಡಾರಿ, ಸಂಗೀತ ನಿರ್ದೇಶಕ ವಿ.ಮನೋಹರ್, ಉದ್ಯಮಿ ವೈ. ಸುಧೀರ್ ಕುಮಾರ್, ಕೊಡುಗೈ ದಾನಿ ಯು. ವಿಶ್ವನಾಥ ಆಗಮಿಸಿದ್ದರು.

ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ. ವೇದಿಕೆಯಲ್ಲಿದ್ದರು.

ಪ್ರಶಸ್ತಿ ಸಮಿತಿ ಸಂಚಾಲಕ ತಾರಾ ಉಮೇಶ್ ಆಚಾರ್ಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರತ್ನಾಕರ ಇಂದ್ರಾಳಿ ಕಾರ್ಯಕ್ರಮ ಸಂಯೋಜಿಸಿದರು.............

ಮಹಿಳೆಯರಿಗೆ ಪ್ರಶಸ್ತಿ: ಪಣಿಯಾಡಿಗೆ ಗೌರವ

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಯು.ಎಸ್.ಪಣಿಯಾಡಿ ಅವರು ತಮ್ಮ ಪತ್ನಿಗೆ ಓದುಬರಹವನ್ನು ತಾವೇ ಕಲಿಸಿದ್ದರು. ಇದರಿಂದಾಗಿ ಪತ್ನಿ ಭಾರತಿ ಬಾಯಿ ಅವರು ತಮ್ಮ 35ನೇ ವಯಸ್ಸಿನಲ್ಲಿಯೇ ತುಳು ಸಾಹಿತ್ಯ ರಚಿಸಿದ್ದರು. ಇದುವರೆಗೆ ಅವರ ಹೆಸರಿನಲ್ಲಿ ನೀಡಲಾಗುವ ತುಳು ಕಾದಂಬರಿ ಪ್ರಶಸ್ತಿಯನ್ನು 29 ಮಂದಿಗೆ ನೀಡಲಾಗಿದ್ದು, ಅವರಲ್ಲಿ 15 ಮಂದಿ ಮಹಿಳಾ ಸಾಹಿತಿಗಳೇ ಆಗಿದ್ದಾರೆ. ಮಹಿಳೆಯ ಶಿಕ್ಷಣಕ್ಕೆ ಮುತುವರ್ಜಿ ವಹಿಸಿದ್ದ ಪಣಿಯಾಡಿ ಅವರಿಗೆ ಇಲ್ಲಿ ನಿಜವಾಗಿಯೂ ಗೌರವ ಸಿಕ್ಕಿದೆ ಎಂದು ತಾರಾನಾಥ್ ಗಟ್ಟಿ ಹೇಳಿದರು.

Share this article