ಹದಿಹರೆಯದ ಹೆಣ್ಣು ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕಾರಟಗಿಹರೆಯದ ವಯಸ್ಸಿನ ಮಕ್ಕಳು ಪ್ರೌಢಾವಸ್ಥೆಗೆ ತಲುಪುವ ಹಂತದಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಉಂಟಾಗುತ್ತವೆ. ಈ ವೇಳೆ ಅವರಿಗೆ ಸೂಕ್ತ ಮಾರ್ಗದರ್ಶನ ಅತ್ಯಂತ ಅವಶ್ಯಕತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಘದ ಗಂಗಾವತಿ ಘಟಕದ ಅಧ್ಯಕ್ಷೆ ಡಾ. ವೀಣಾ ಸತೀಶ್ ಹೇಳಿದರು.
ಇಲ್ಲಿನ ಶರಣಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ಹಾಗೂ ಭಾರತೀಯ ವೈದ್ಯಕೀಯ ಸಂಘದ ಮೈತ್ರಿ ಮಹಿಳಾ ವಿಭಾಗದ ಸಹಯೋಗದಲ್ಲಿ ಪ್ರಾಥಮಿಕ ಹಾಗೂ ಪ್ರೌಢಾಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಹದಿಹರೆಯದ ಹೆಣ್ಣು ಮಕ್ಕಳಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಅವರವರ ದೇಹದಲ್ಲಾಗುವ ಸಾಮಾನ್ಯ ಬೆಳವಣಿಗೆ, ಮಾನಸಿಕ ಸ್ಥಿತಿ ಬದಲಾವಣೆ, ಋತು ಮತಿಯಾಗುವುದು, ನಾಚಿಕೆಯ ಸ್ವಭಾವ ಹಾಗೂ ಭಾವನಾತ್ಮಕ ಬದಲಾವಣೆಗಳನ್ನು ಪೋಷಕರು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಎಷ್ಟೋ ಮಕ್ಕಳು ತಮ್ಮ ಸಮಸ್ಯೆಗಳನ್ನು ಪೋಷಕರು, ಶಿಕ್ಷಕರಲ್ಲಿ ಹೇಳಲು ಸಂಕೋಚ ಪಡುತ್ತಾರೆ. ಅಂಥ ಸಂದರ್ಭದಲ್ಲಿ ನಮ್ಮಂತಹ ವೈದ್ಯರ ಮುಂದೆ ಬಂದು ತಮ್ಮ ಸಮಸ್ಯೆಗಳಿಗೆ, ಆತಂಕಗಳಿಗೆ ಸಲಹೆ ಪಡೆಯಬಹುದು. ಪೋಷಕರು ಕೂಡಾ ಅವಶ್ಯವೆನಿಸಿದಲ್ಲಿ ತಮ್ಮ ಮಕ್ಕಳನ್ನು ಕರೆತಂದು ವೈದ್ಯರಿಂದ ಸೂಕ್ತ ಆರೋಗ್ಯ ಸಲಹೆಯನ್ನು ಕೊಡಿಸುವ ಮೂಲಕ ಪ್ರೌಢಾವಸ್ಥೆಗೆ ಬಂದಿರುವ ಮಕ್ಕಳಿಗೆ ಅರಿವು ಮೂಡಿಸಲು ಮುಂದಾಗಬೇಕು ಎಂದರು.
ಇದೇ ವೇಳೆ ಡಬ್ಲ್ಯೂಡಿಡಬ್ಲ್ಯೂ ಐಎಂಎ ಗಂಗಾವತಿಯ ಅಧ್ಯಕ್ಷೆ ಡಾ. ಉಮಾದೇವಿ ಅಲ್ಲೂರಿ, ಡಾ. ಸ್ನೇಹ, ಡಾ. ಸಿಂಧು, ಡಾ. ಸುಲೋಚನಾ, ಹೆಜ್ಜೆ ಮಹಿಳಾ ಸಂಘಟನೆಯ ಡಾ. ಶಿಲ್ಪಾ ದಿವಟರ್ ವಿವಿಧ ತರಗತಿಯ ಹದಿಹರೆಯದ ಮಕ್ಕಳಿಗೆ ಸ್ವಚ್ಛತೆ, ಪೌಷ್ಠಿಕಾಂಶ ಕೊರತೆ, ಮಾನಸಿಕ ಆರೋಗ್ಯ ಸಮಸ್ಯೆಗಳು, ಋತುಚಕ್ರ ಸಂಬಂಧಿ ಶುಚಿತ್ವ, ಲೈಂಗಿಕತೆ ಮತ್ತು ಬಹುಮುಖ್ಯವಾಗಿ ಮೊಬೈಲ್ ಗೀಳು, ಚಟ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಬೀರಿರುವ ಪರಿಣಾಮದ ಕುರಿತು ಮಾಹಿತಿ ನೀಡಿದರು.ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಬಿ. ಶೆಟ್ಟರ್, ಚಂದ್ರಶೇಖರ ಸೋಮಲಾಪುರ, ಮುಖ್ಯೋಪಾಧ್ಯಾಯರಾದ ಅಮರೇಶ್ ಪಾಟೀಲ್, ಮಹಾಂತೇಶ್ ಗದ್ದಿ, ಶರಣಮ್ಮ ಅಂಗಡಿ ಇತರರಿದ್ದರು.