ರಾಷ್ಟ್ರೀಯ ಆಯುಷ್ ಅಭಿಯಾನದಡಿ ವಿಶೇಷ ಆರೋಗ್ಯ ಶಿಬಿರ
ಅಸಾಂಕ್ರಾಮಿಕ ಕಾಯಿಲೆಗಳಿಂದ ದೂರವಿರಲು ಯೋಗಾಭ್ಯಾಸ, ಸಮತೋಲನ ಆಹಾರ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಪ್ರಭಾರ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಗದೀಶ ಯಾಜಿ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಉತ್ತರ ಕನ್ನಡ ಜಿಲ್ಲಾ ಆಯುಷ್ ಇಲಾಖೆ ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಮುಂಡಗೋಡ ಇವುಗಳ ಆಶ್ರಯದಲ್ಲಿ ೨೦೨೬-೨೭ನೇ ಸಾಲಿನ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಪಟ್ಟಣದ ಲೊಯೋಲಾ ವಿಕಾಸ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ವಿಶೇಷ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.ಆರೋಗ್ಯಕರ ಜೀವನಶೈಲಿ, ಪಥ್ಯಾಹಾರ, ಯೋಗ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳಿಗೆ ಆದ್ಯತೆ ನೀಡಬೇಕು. ರುಚಿಗಾಗಿ ಎಲ್ಲೆಂದರಲ್ಲಿ ಆಹಾರ ಸೇವಿಸುವ ಬದಲು ದೇಹಕ್ಕೆ ಅಗತ್ಯವಾದ ಸಮತೋಲನ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಅಸಾಂಕ್ರಾಮಿಕ ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದರು.
ಲೊಯೋಲಾ ವಿಕಾಸ ಕೇಂದ್ರದ ನಿರ್ದೇಶಕ ಅನಿಲ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರ ಆರೋಗ್ಯಕ್ಕಾಗಿ ಅಗತ್ಯವಿರುವ ಸಹಕಾರವನ್ನು ಸಂಸ್ಥೆಯ ವತಿಯಿಂದ ನೀಡಲಾಗುವುದು ಎಂದರು.
ಸರ್ಕಾರಿ ಆಯುರ್ವೇದ ಆಸ್ಪತ್ರೆ ಮುಂಡಗೋಡದ ಆಡಳಿತ ವೈದ್ಯಾಧಿಕಾರಿ ಡಾ. ಯೋಗೇಶ ಮಡಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದಲ್ಲಿ ಡಾ. ಸ್ವರೂಪ ರಾಣಿ, ಡಾ. ಭಾಗ್ಯಲಕ್ಷ್ಮಿ ಕೆ., ಡಾ. ಭಾಗ್ಯಶ್ರೀ, ಡಾ. ಮಲ್ಲಿಕಾರ್ಜುನ ಕಮತರ್, ನವೀನ ಬಡಿಗೇರ, ಡಾ. ವಿಕ್ರಮ ದೇಶಭಂಡಾರಿ ಸೇರಿದಂತೆ ಆಯುರ್ವೇದ ತಜ್ಞ ವೈದ್ಯರು ಉಪಸ್ಥಿತರಿದ್ದರು.