ಹವಾಮಾನ ವೈಪರೀತ್ಯದ ಪರಿಣಾಮ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ರೈತರು ಪರಿಸ್ಥಿತಿಗೆ ತಕ್ಕಂತೆ ಬೆಳೆ ಪದ್ಧತಿಯಲ್ಲಿ ಬದಲಾವಣೆ ತರಬೇಕಾಗಿದೆ ಎಂದು ಹೇಳಿದರು. ಮಳೆಯ ಕೊರತೆಯಿಂದ ಮೆಕ್ಕೆಜೋಳ ಬೆಳೆಯಲ್ಲಿ ಬಿಳಿಸುಳಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದರಿಂದ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ರಾಗಿ ಸೇರಿದಂತೆ ಕಡಿಮೆ ನೀರು ಬೇಕಾಗುವ ಪರ್ಯಾಯ ಬೆಳೆಗಳಿಗೆ ಆದ್ಯತೆ ನೀಡುವುದು ಉತ್ತಮ ಎಂದು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಮುಂಗಾರು ಮಳೆಯ ಅನಿಶ್ಚಿತತೆ ಹಾಗೂ ಆಗಸ್ಟ್ ತಿಂಗಳಲ್ಲಿ ಮಳೆ ಕೊರತೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೈತರು ಮೆಕ್ಕೆಜೋಳಕ್ಕೆ ಮಾತ್ರ ಸೀಮಿತವಾಗದೆ ರಾಗಿ ಸೇರಿದಂತೆ ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಕರೆ ನೀಡಿದರು.ನಗರದ ಸಂತೇಪೇಟೆಯ ನಗರ ಪಾಲಿಕೆ ಮುಂಭಾಗದಲ್ಲಿರುವ ಕೃಷಿ ಇಲಾಖೆ ಕಚೇರಿಯಲ್ಲಿ ಮಂಗಳವಾರ ನಡೆದ ಅಧಿಕಾರಿಗಳು ಹಾಗೂ ರೈತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯದ ಪರಿಣಾಮ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ರೈತರು ಪರಿಸ್ಥಿತಿಗೆ ತಕ್ಕಂತೆ ಬೆಳೆ ಪದ್ಧತಿಯಲ್ಲಿ ಬದಲಾವಣೆ ತರಬೇಕಾಗಿದೆ ಎಂದು ಹೇಳಿದರು. ಮಳೆಯ ಕೊರತೆಯಿಂದ ಮೆಕ್ಕೆಜೋಳ ಬೆಳೆಯಲ್ಲಿ ಬಿಳಿಸುಳಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದರಿಂದ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ರಾಗಿ ಸೇರಿದಂತೆ ಕಡಿಮೆ ನೀರು ಬೇಕಾಗುವ ಪರ್ಯಾಯ ಬೆಳೆಗಳಿಗೆ ಆದ್ಯತೆ ನೀಡುವುದು ಉತ್ತಮ ಎಂದು ಸಲಹೆ ನೀಡಿದರು.ರಾಗಿ ಬೆಳೆಯನ್ನು ಉತ್ತೇಜಿಸಲು ಅಗತ್ಯ ಪ್ರಮಾಣದಲ್ಲಿ ಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಪೂರೈಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಸರ್ಕಾರದ ವಿವಿಧ ಯೋಜನೆಗಳು ನೈಜ ರೈತರಿಗೆ ಯಾವುದೇ ತೊಂದರೆಯಾಗದಂತೆ ತಲುಪಬೇಕು ಎಂದು ಹೇಳಿದರು. ಸಭೆಯಲ್ಲಿ ರೈತರು ಗೊಬ್ಬರ ವಿತರಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಗೊಬ್ಬರ ಪಡೆಯಲು ಹಲವು ದಿನಗಳಿಂದ ಪಟ್ಟಣಕ್ಕೆ ಅಲೆದಾಡಬೇಕಾಗುತ್ತಿದೆ. ಕೆಲವೆಡೆ ಸಮರ್ಪಕ ಪ್ರಮಾಣದಲ್ಲಿ ಗೊಬ್ಬರ ದೊರೆಯುತ್ತಿಲ್ಲ. ಇನ್ನೂ ಕೆಲವು ರೈತರು, ಕುಟುಂಬದ ಹಿರಿಯರ ಹೆಸರಿನಲ್ಲೇ ಜಮೀನು ದಾಖಲೆಗಳಿರುವುದರಿಂದ ಪಹಣಿ ವರ್ಗಾವಣೆಯಾಗದೆ ಗೊಬ್ಬರ ಹಾಗೂ ಇತರೆ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಸ್ವರೂಪ್ ಪ್ರಕಾಶ್, ಗ್ರಾಮ ಪಂಚಾಯಿತಿಗಳ ಮೂಲಕ ಗೊಬ್ಬರ ವಿತರಣೆ ವ್ಯವಸ್ಥೆ ಮಾಡಲಾಗಿದ್ದು, ದಾಖಲೆಗಳ ಸಮಸ್ಯೆ ಇರುವ ರೈತರು ಹಾಲು ಉತ್ಪಾದಕರ ಸಹಕಾರ ಸಂಘ ಅಥವಾ ಇತರ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿದ್ದರೆ ಬ್ಯಾಂಕ್‌ಗಳ ಮೂಲಕ ಕೃಷಿ ಸಾಲ ಪಡೆಯಬಹುದು ಎಂದು ತಿಳಿಸಿದರು. ಒಂದೇ ಬೆಳೆಗೆ ಅವಲಂಬಿತರಾಗುವುದು ಅಪಾಯಕಾರಿ. ಬೆಳೆ ವೈವಿಧ್ಯತೆಯೇ ರೈತರ ಆದಾಯ ಹಾಗೂ ಭದ್ರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಸಭೆಯಲ್ಲಿ ಮೆಕ್ಕೆಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ರೈತರು ಪ್ರಶ್ನೆ ಎತ್ತಿದರು. ಇದಕ್ಕೆ ಉತ್ತರಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ಕುಮಾರ್, ರಾಜ್ಯದಲ್ಲಿ ಎಥೆನಾಲ್ ಉತ್ಪಾದನಾ ಘಟಕಗಳಿರುವ ಬೆಳಗಾವಿ, ಹಾವೇರಿ, ಬಾಗಲಕೋಟೆ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಮೆಕ್ಕೆಜೋಳಕ್ಕೆ ೨,೪೦೦ ಎಂಎಸ್‌ಪಿ ನಿಗದಿಯಾಗಿದೆ. ಹಾಸನ ಜಿಲ್ಲೆಯಲ್ಲಿ ಎಥೆನಾಲ್ ಘಟಕಗಳಿಲ್ಲದ ಕಾರಣ ಇಲ್ಲಿನ ರೈತರಿಗೆ ಆ ಸೌಲಭ್ಯ ಲಭ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.ಸಭೆಯಲ್ಲೇ ಎನ್‌ಎಫ್‌ಎಸ್‌ಎಂ ಯೋಜನೆಯಡಿ ಅರ್ಹ ರೈತರಿಗೆ ರಾಗಿ ಬಿತ್ತನೆ ಬೀಜಗಳನ್ನು ವಿತರಿಸಲಾಯಿತು. ಆಶಾ, ವನಿತಾ, ಲಕ್ಷ್ಮೀ ಬಾಯಿ, ಪ್ರೀತಿ, ವೀಣಾ, ಕುಮಾರಸ್ವಾಮಿ, ನೀಲಮ್ಮ ಸೇರಿದಂತೆ ಸಾಲಗಾಮೆ ಗ್ರಾಮದ ಹಲವು ರೈತರು ಬೀಜಗಳನ್ನು ಪಡೆದುಕೊಂಡರು. ತಹಸೀಲ್ದಾರ್ ಗೀತಾ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಕೋಕಿಲಾ, ಜಂಟಿ ನಿರ್ದೇಶಕ ರಮೇಶ್ ಕುಮಾರ್, ಜಯರಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ರೈತರು ಸಭೆಯಲ್ಲಿ ಭಾಗವಹಿಸಿ ಕೃಷಿ ಸಮಸ್ಯೆಗಳ ಕುರಿತು ಮುಕ್ತ ಚರ್ಚೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.