ಅಡಕೆ, ತೆಂಗು, ಬಾಳೆ ಬೆಳೆಯಲ್ಲಿ ಅಂತರ ಬೆಳೆ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Aug 20, 2025, 01:30 AM IST
ಚಿತ್ರ 3 | Kannada Prabha

ಸಾರಾಂಶ

ಸುಧಾರಿತ ತಾಂತ್ರಿಕತೆ ಹಾಗೂ ಅಂತರ ಬೆಳೆ ಅಳವಡಿಕೆಯಿಂದ ಅಡಕೆ ತೆಂಗು ಮತ್ತು ಬಾಳೆ ಬೆಳೆಯಲ್ಲಿ ಸುಸ್ಥಿರ ಇಳುವರಿ ಪಡೆಯಲು ಸಾಧ್ಯ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ರಜನೀಕಾಂತ ತಿಳಿಸಿದರು.

ಹಿರಿಯೂರು: ಸುಧಾರಿತ ತಾಂತ್ರಿಕತೆ ಹಾಗೂ ಅಂತರ ಬೆಳೆ ಅಳವಡಿಕೆಯಿಂದ ಅಡಕೆ ತೆಂಗು ಮತ್ತು ಬಾಳೆ ಬೆಳೆಯಲ್ಲಿ ಸುಸ್ಥಿರ ಇಳುವರಿ ಪಡೆಯಲು ಸಾಧ್ಯ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ರಜನೀಕಾಂತ ತಿಳಿಸಿದರು.

ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಿಲ್ಲೆಯ ರೈತರಿಗೆ ಅಡಕೆ, ತೆಂಗು ಮತ್ತು ಬಾಳೆ ಬೆಳೆಗಳಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು 3 ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರೈತರು ಹೆಚ್ಚಿನದಾಗಿ ಅಡಕೆ, ತೆಂಗು ಮತ್ತು ಬಾಳೆ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಈ ಮೂರು ದಿನಗಳ ತರಬೇತಿಯಲ್ಲಿ ನೀಡುವ ತಾಂತ್ರಿಕ ಮಾಹಿತಿ ಮತ್ತು ಯಶಸ್ವಿ ಪ್ರಗತಿಪರ ರೈತರ ಅನುಭವ ಹಾಗೂ ವಿವಿಧ ಅಂತರ ಬೆಳೆಗಳ ಕುರಿತ ಮಾಹಿತಿಯನ್ನು ರೈತರು ಸದುಪಯೋಗ ಪಡೆದುಕೊಂಡು ತಮ್ಮ ತಾಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಸುಸ್ಥಿರ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಪ್ರಗತಿಪರ ರೈತ ಹಫೀಜ್ ಉಲ್ಲಾ ಖಾನ್ ಮಾತನಾಡಿ, ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ಮತ್ತು ವಿಷಮುಕ್ತ ಪರಿಸರ ಉಳಿಸಲು ರೈತರು ಸಾವಯವ ಅಥವಾ ನೈಸರ್ಗಿಕ ಕೃಷಿಗೆ ಒತ್ತು ನೀಡುವುದು ಅತ್ಯವಶ್ಯಕವಾಗಿದೆ. ಸ್ವತಃ ನಾಟಿ ಹಸುಗಳನ್ನು ಸಾಕಿ ಅವುಗಳ ಸಗಣಿ ಮತ್ತು ಗಂಜಲಿನಿಂದ ಜೀವಾಮೃತ ಮಾಡಿ ಬಳಸುತ್ತಿದ್ದು, ಅಡಕೆಯಲ್ಲಿ ಅಂತರ ಬೆಳೆಯಾಗಿ ಜಾಕಾಯಿ, ಏಲಕ್ಕಿ ಮತ್ತು ಮೆಣಸು ಬೆಳೆಯುವುದು ಸೂಕ್ತ. ಕಳೆ ನಾಶಕ ಬಳಕೆ ಮಾಡದೆ ಅವಶ್ಯವಿದ್ದಾಗ ಕಳೆಗಳನ್ನು ಕಳೆ ಕಟಾವು ಯಂತ್ರದ ಮೂಲಕ ಕಟಾವು ಮಾಡಿ ಅಲ್ಲೆ ಭೂಹೊದಿಕೆಯಾಗಿ ಬಿಡುವುದು ಉತ್ತಮ ಎಂದು ತಿಳಿಸಿದರು.

ಮಸಣಾಪುರದ ಪ್ರಗತಿಪರ ರೈತ ಮೃತ್ಯುಂಜಯಪ್ಪ ಮಾತನಾಡಿ, ತೆಂಗು ಮತ್ತು ಅಡಕೆಯ ತಾಕಿನಲ್ಲಿ 100ಕ್ಕೂ ಹೆಚ್ಚಿನ ವಿವಿಧ ಜಾತಿಯ ಹಣ್ಣು ಮತ್ತು ಸಂಬಾರು ಬೆಳೆಗಳನ್ನು ಮಿಶ್ರ ಹಾಗೂ ಬಹು ಮಹಡಿ ಪದ್ಧತಿಯಲ್ಲಿ ಬೆಳೆಯುತ್ತಿದ್ದು, ಎರೆಹುಳು ಗೊಬ್ಬರ ತಯಾರಿಕೆ, ಜೀವಾಮೃತ, ಗಂಜಲು, ಹುಳಿಮಜ್ಜಿಗೆಯ ಬಳಕೆ ಮತ್ತು ವೆಲವೆಟ್ ಬಿನ್ಸ್, ಅಲಸಂಧೆ, ಹುರಳಿ, ಅಡಕೆ ಮತ್ತು ತೆಂಗಿನ ತ್ಯಾಜ್ಯವನ್ನು ಭೂ ಹೊದಿಕೆಯಾಗಿ ಬಳಕೆ ಮಾಡುತ್ತಿರುವುದರಿಂದ ಮಣ್ಣಿನ ತೇವಾಂಶ ಮತ್ತು ಫಲವತ್ತತೆ ಕಾಪಾಡಲು ಸಹಕಾರಿಯಗಿದೆಯಲ್ಲದೆ ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.

ಪಿಲ್ಲಹಳ್ಳಿಯ ಚಿತ್ರಲಿಂಗಪ್ಪ ಮಾತನಾಡಿ, ಕೃಷಿಯಲ್ಲಿ ಆಸಕ್ತಿ ಹಾಗೂ ತಾಳ್ಮೆಯಿಂದ ರೈತರು ಬೇಸಾಯ ಮಾಡಿದರೆ ಉತ್ತಮ ಕೃಷಿಕರಾಗಬಹುದು. ಪ್ರಗತಿಪರ ಕೃಷಿಕರ ತಾಕುಗಳಿಗೆ ಭೇಟಿ ನೀಡಿ ಸದರಿ ರೈತರ ಅನುಭವನ್ನು ತೆಗೆದುಕೊಂಡು ಮತ್ತು ವಿವಿಧ ತಾಂತ್ರಿಕ ತರಬೇತಿಗಳಿಂದ ಪಡೆದ ಮಾಹಿತಿಯನ್ನು ತಮ್ಮ ತಾಕಿನಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ತಾವೇ ಮಾರಾಟ ಮಾಡುವ ಕಲೆ ಕಲಿತರೆ ಉತ್ತಮ ಬೆಲೆ ದೊರೆಯತ್ತದೆ. ಕೃಷಿಯನ್ನು ಶ್ರದ್ಧೆಯಿಂದ ಮಾಡಿದರೆ ಋಷಿತ್ವ ಕಾಣಬಹುದು ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದಾಗಿದೆ ಎಂದರು.

ಹೇಮದಳದ ಪ್ರಗತಿಪರ ರೈತ ಸಿದ್ದಪ್ಪ, ದೇವರಮರಿಕುಂಟೆ ಗ್ರಾಮದ ಡಾ.ಆರ್.ಎ.ದಯಾನಂದ ಮೂರ್ತಿ, ಹಾಲಗೊಂಡನಹಳ್ಳಿಯ ರುದ್ರಮುನಿಯಪ್ಪ ಮಾತನಾಡಿದರು.

ತೋಟಗಾರಿಕೆ ಕಾಲೇಜು ಡೀನ್ ಹಾಗೂ ಸಸ್ಯ ರೋಗಶಾಸ್ತ್ರಜ್ಞ ಡಾ.ಸುರೇಶ್ ಏಕಬೋಟೆ, ಕೀಟಶಾಸ್ತ್ರಜ್ಞ ಡಾ.ಎಸ್.ಓಂಕಾರಪ್ಪ, ಅಡಕೆ, ತೆಂಗು ಮತ್ತು ಬಾಳೆ ಬೆಳೆಗಳಲ್ಲಿ ಬರುವ ಪ್ರಮುಖ ರೋಗಗಳ ಹಾಗೂ ಕೀಟ ನಿರ್ವಹಣೆ ಕುರಿತು ತರಬೇತಿ ನೀಡಿದರು.

ತೋಟಗಾರಿಕೆ ವಿಜ್ಞಾನಿ ಡಾ.ಮಹಾಂತೇಶ್ ಸದರಿ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳು, ಅಂತರ ಬೆಳೆ ಮತ್ತು ಅನುಸರಿಸಬಹುದಾದ ಸಾವಯವ ಪದ್ಧತಿಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ