ರಾಯಚೂರು: ಮಹಾಯೋಗಿ ವೇಮನರು ಸಮಾಜಕ್ಕೆ ನೀಡಿದ ಉತ್ತಮ ಸಂದೇಶಗಳನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಪಾಲಿಸಿ ಮತ್ತು ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರ ಶ್ರಮಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯಯೋಜನಾಧಿಕಾರಿ ಡಾ.ಟಿ.ರೋಣಿ ಅವರು ಹೇಳಿದರು.
ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಶರಣರು ಮಾನವ ಜನ್ಮದಲ್ಲಿ ಜ್ಞಾನದಿಂದ ಯೋಗಿಗಳಾಗಿ ಎಲ್ಲಾ ಮಾನವ ಕುಲಕ್ಕೆ ಉಳಿತಾಗಲೆಂದು ಒಳ್ಳೆಯ ದಾರಿಯನ್ನು ಹೇಳಿಕೊಟ್ಟ ಮಹಾ ಯೋಗಿ ವೇಮನ ಯೋಗಿಗಳು ನಮಗೆ ದೊಡ್ಡ ಆಸ್ತಿ ಆಗಿದ್ದಾರೆ, ಹಾಗಾಗಿ ಶರಣರ ಹಾದಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ತಮ್ಮ ಕೃತಿಗಳ ಮೂಲಕ ಸಮಾಜದ ಅಭಿವೃದ್ಧಿಗಾಗಿ ಹಲವು ಸಂದೇಶಗಳನ್ನು ನೀಡಿದ್ದಾರೆ. ಅಂತಹ ಮಹಾನ್ ಯೋಗಿಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದರು.
ಇದೆ ವೇಳೆ ಉಪನ್ಯಾಸಕ ಬಿ.ಗೋವರ್ಧನ ರೆಡ್ಡಿದಿನ್ನಿ ಅವರು ಉಪನ್ಯಾಸ ನೀಡಿ, ವೇಮನ ಯೋಗಿ ಶ್ರೇಷ್ಠ ವಚನಕಾರರು, ಚಿಂತಕರು ಮತ್ತು ಮಾನವ ಕುಲದ ಅಭಿವೃದ್ಧಿಗಾಗಿ ಶ್ರಮಿಸಿದವರಾಗಿದ್ದು, ಅಂತಹ ಮಹಾನ್ ಶರಣರು ನೀಡಿನ ಮಾರ್ಗದಲ್ಲಿ ಪ್ರತಿಯೊಬ್ಬರು ನಡೆಯಬೇಕು ಅವರು ಕೇವಲ ರೆಡ್ಡಿ ಸಮಾಜಕ್ಕೆ ಸೀಮಿತರಾಗಬಾರದು ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೆಡ್ಡಿ ಸಮಾಜದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರಾಮಚಂದ್ರ ರೆಡ್ಡಿ, ಗೋಪಾಲರೆಡ್ಡಿ, ಶರಣರೆಡ್ಡಿ, ಮಹಾಂತೇಶ ಬಿರಾದಾರ, ಕೇಶವರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವೇಮನ ಭಾವಚಿತ್ರ ಮೆರವಣಿಗೆ: ಜಿಲ್ಲಾಡಳಿತ, ಜಿಪಂ, ನಗರಸಭೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಮಹಾಯೋಗಿ ವೇಮನ ಜಯಂತಿ ಅಂಗವಾಗಿ ಸ್ಥಳೀಯ ಬಸವೇಶ್ವರ ವೃತ್ತದಿಂದ ವೇಮನ ಅವರ ಭಾವಚಿತ್ರ ಮುಖ್ಯರಸ್ತೆ ಮುಖಾಂತರ ರಂಗಮಂದಿರದವರೆಗೆ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರ ಶಾಸಕ ಡಾ.ಎಸ್.ಶಿವರಾಜ್ ಪಾಟೀಲ್, ಸಹಾಯಕ ನಿರ್ದೇಶಕಿ ಮಹಿಬೂಬಿ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ, ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.