ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ತರುವುದು ಅಗತ್ಯ: ಡಾ. ಗೋಪಾಲಕೃಷ್ಣ

KannadaprabhaNewsNetwork | Published : Jan 20, 2024 2:03 AM

ಸಾರಾಂಶ

ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಎನ್ನುವ ಮಾತು ನಾವು ಸಣ್ಣವರಿಂದಲೂ ಕೇಳಿಕೊಂಡು ಬಂದಿದ್ದೇವೆ. ಅದು ಈಗ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂದು ಬದಲಾಗಬೇಕಿದೆ. ಅವರಲ್ಲಿರುವ ಪ್ರತಿಭೆಯನ್ನು ಹೊರ ತರುವುದು ಆಗತ್ಯ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ಗೋಪಾಲಕೃಷ್ಣ ಹೇಳಿದ್ದಾರೆ.

- ಮುಗುಳವಳ್ಳಿಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ । ಇಂದಿನ ಮಕ್ಕಳೇ ಇಂದಿನ ಪ್ರಜೆಗಳು,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಎನ್ನುವ ಮಾತು ನಾವು ಸಣ್ಣವರಿಂದಲೂ ಕೇಳಿಕೊಂಡು ಬಂದಿದ್ದೇವೆ. ಅದು ಈಗ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂದು ಬದಲಾಗಬೇಕಿದೆ. ಅವರಲ್ಲಿರುವ ಪ್ರತಿಭೆಯನ್ನು ಹೊರ ತರುವುದು ಆಗತ್ಯ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ಗೋಪಾಲಕೃಷ್ಣ ಹೇಳಿದ್ದಾರೆ.

ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಯಿಂದ ಶುಕ್ರವಾರ ತಾಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಮತ್ತು ಒಕ್ಕೂಟ ರಾಷ್ಟ್ರಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅವರ ಮಾತುಗಳಿಂದ ಅವರುಗಳಿಗೆ ಅಗತ್ಯವಿರುವ ಸೌಲಭ್ಯಗಳೇನು, ಈ ಗ್ರಾಪಂಗೆ ಅಗತ್ಯವಿರುವ ಅವಶ್ಯಕತೆಗಳೇನು ಎನ್ನುವ ಹಕ್ಕುಗಳನ್ನು ಕೇಳುವ ಸಲುವಾಗಿ ಮುಕ್ತ ಅವಕಾಶ ನಿರ್ಮಾಣ ಮಾಡಿಕೊಡುವುದು ಕಾರ್ಯಕ್ರಮದ ಉದ್ದೇಶ ಎಂದರು.

ಇಂದಿನಿಂದ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂದು ಬದಲಿಸುವ ಪ್ರಯತ್ನ ಮಾಡೋಣ. ಸಮಾಜದಲ್ಲಿ ಸಾಕಷ್ಟು ಸಾಮಾಜಿಕ ಪಿಡುಗುಗಳು ಇಂದಿಗೂ ನಮ್ಮ ಮಕ್ಕಳನ್ನು ಕಾಡುತ್ತಿವೆ. ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೇವೆ. ಗಂಡು, ಹೆಣ್ಣು ಎನ್ನುವ ತಾರತಮ್ಯ ಇಂದಿಗೂ ಕಾಣುತ್ತೇವೆ. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಪ್ರಕರಣಗಳು ಸಹ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿ ಯಾವ ರೀತಿಯ ಸಮಾಜ ನಾವು ನಿರ್ಮಾಣ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ಆಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ 6 ನೇ ತರಗತಿ ದೀಪ್ತಿ ಮಾತನಾಡಿ, ಶಾಲೆಗೆ ಕುಡಿಯುವ ನೀರಿನ ನಲ್ಲಿ ಇಲ್ಲದ ಕಾರಣ ತೊಂದರೆ ಆಗುತ್ತಿದೆ ಎಂದು ಗಮನ ಸೆಳೆದರು. ಗ್ರಂಥಾಲಯದಲ್ಲಿ ಕಂಪ್ಯೂಟರ್ ಬಳಸಲು ವಿದ್ಯುತ್ ಇರುವುದಿಲ್ಲ, ಈ ಕಾರಣ ಯುಪಿಎಸ್ ಒದಗಿಸಿಕೊಡಬೇಕು ಎಂದು 3 ನೇ ತರಗತಿ ನೇಹಾ ಮನವಿ ಮಾಡಿದರು. ಜಿಪಂ ಕಡೆಯಿಂದ ಮಾಡಿಸುವುದಾಗಿ ಸಿಇಒ ಭರವಸೆ ನೀಡಿದರು.

ಅಂಬೇಡ್ಕರ್ ಪ್ರೌಢಶಾಲೆಯ 4 ನೇ ತರಗತಿ ವಿದ್ಯಾರ್ಥಿ ಹೇಮಂತ್ ಆಚಾರ್ ಮಾತನಾಡಿ, ದೇವೀರಮ್ಮ ದೇವಾಲಯ ಸುತ್ತಲೂ ಪಾರ್ಥೇನಿಯಂ ಕಳೆ ತೆಗೆದು ಕಾಂಕ್ರಿಟ್ ಹಾಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಗ್ರಂಥಾಲಯ ಓದುಗರಾದ ಸಿದ್ದಮ್ಮ ಎಂಬುವವರು ವಿದ್ಯಾರ್ಥಿಗಳಿಗೆ ಬರೆಯಲು ಓದಲು ಅನುಕೂಲವಾಗುವಂತೆ ಗ್ರಂಥಾಲಯಕ್ಕೆ ರೌಂಡ್ ಟೇಬಲ್ ವ್ಯವಸ್ಥೆ ಬೇಕು. ಸರ್ಕಾರದ ವ್ಯವಸ್ಥೆಯಲ್ಲಿ ಕಲ್ಪಿಸಲು ಸಾಧ್ಯವಿಲ್ಲದ ಕೆಲವು ಸಲತ್ತುಗಳನ್ನು ಕೇಳುತ್ತಾರೆ. ಇಂತಹ ಸಂದರ್ಭದಲ್ಲಿ ಸಿಎಸ್‌ಆರ್ ಫಂಡ್ ಬಳಸಿ ದಾನಿಗಳು, ಸಂಸ್ಥೆಗಳ ಸಹಕಾರ ಪಡೆದು ಬೇಡಿಕೆ ಈಡೇರಿಸಬೇಕು ಎಂದು ಸಿಇಒ ಗೋಪಾಲಕೃಷ್ಣ ಸಲಹೆ ಮಾಡಿದರು.

ಶಾಲೆಯ ಅಡುಗೆ ಮನೆಗೆ ಕಿಟಕಿ ಮತ್ತು ನಲ್ಲಿ ಸಂಪರ್ಕ ಬೇಕೆಂದು ವಿದ್ಯಾರ್ಥಿ ನಿತಿನ್ ಒತ್ತಾಯಿಸಿದರೆ, ಸ್ಪಂದನ ಎಂಬ ವಿದ್ಯಾರ್ಥಿ ನಾವು ಸೋಗೆಮನೆಯಲ್ಲಿ ವಾಸಿಸುತ್ತೇವೆ. ಮನೆಗೆ ಹಾವು, ಇಲಿಗಳು ಬರುತ್ತವೆ. ಮಳೆಗಾಲದಲ್ಲಿ ಸೋರುತ್ತದೆ ಕಾರಣ ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು. ಜಾಗದ ದಾಖಲೆಗಳನ್ನು ಸಲ್ಲಿಸಿದರೆ ತಕ್ಷಣ ಮನೆ ನಿರ್ಮಿಸಿಕೊಡುವುದಾಗಿ ಪಿಡಿಒ ಭರವಸೆ ನೀಡಿದರು.

ರಾಘವೇಂದ್ರ ಎಂಬ ವಿದ್ಯಾರ್ಥಿಯದ್ದು ಬೀದಿ ನಾಯಿಗಳ ಕಾಟದ ಸಮಸ್ಯೆಯಾದರೆ, ಮಾಗಡಿ ಶಾಲೆಗೆ ಸುಣ್ಣ ಬಣ್ಣ ಎಲ್ಲವೂ ಆಗಿದ್ದರೂ ಬೋರ್ಡೇ ಇಲ್ಲ. ಹೊಸದಾಗಿ ಬೋರ್ಡ್ ಹಾಕಿಸಿಕೊಡಿ ಎನ್ನುವುದು ವಿದ್ಯಾರ್ಥಿಯೊಬ್ಬರ ಬೇಡಿಕೆಯಾಗಿತ್ತು.

ಶೌಚಾಲಯಕ್ಕೆ ನೀರಿನ ಸೌಕರ್ಯ ಕಲ್ಪಿಸಿ ಎನ್ನುವುದು ವಿದ್ಯಾರ್ಥಿ ಐಶ್ವರ್ಯ ಒತ್ತಾಯ. ಶಾಲೆಗೆ ಕಂಪ್ಯೂಟರ್ ಬೇಕು ಎನ್ನುವುದು ಮೈತ್ರಿ ಮನವಿ, ಶಾಲೆಗೆ ಕೌಂಪೌಂಡ್ ಬೇಕು, ನಾವು ಹಳ್ಳಿ ಮಕ್ಕಳಾದ ಕಾರಣ ಶಾಲೆಗೆ ಬರಲು ಸೈಕಲ್ ಕೊಡಿಸಬೇಕು ಎನ್ನುವುದು 8 ನೇ ತರಗತಿ ವಿದ್ಯಾರ್ಥಿ ಅರ್ಪಿತ ಒತ್ತಾಯವಾಗಿತ್ತು. ಮುಗುಳವಳ್ಳಿ ಶಾಲೆಗೆ ಶಿಕ್ಷಕರನ್ನು ನೇಮಿಸಬೇಕು ಎನ್ನುವುದು ದೀಕ್ಷತ ಮನವಿ ಮಾಡಿದರು.

ತಾಪಂ ಇಒ ತಾರಾನಾಥ್ ಮಾತನಾಡಿದರು. ಮುಗುಳುವಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಉಮೇಶ್, ಸದಸ್ಯರಾದ ರಘುನಂದನ್, ಶೇಖರ್, ಮಲ್ಲೇಶಪ್ಪ, ವನೀತ, ಶೃತಿ, ಕಲಾವತಿ, ಸವಿತ, ಲೋಕೇಶ್, ಸಿಎಂಸಿಎ ಕಾರ್ಯಕ್ರಮ ಮುಖ್ಯಸ್ಥರಾದ ರವಿಕುಮಾರ್, ಕಾರ್ಯದರ್ಶಿ ಕಲ್ಲೇಶ್, ಪಿಡಿಒ ಸುಮಾ ಉಪಸ್ಥಿತರಿದ್ದರು. 19 ಕೆಸಿಕೆಎಂ 4

ಚಿಕ್ಕಮಗಳೂರು ತಾಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಉದ್ಘಾಟಿಸಿದರು.

Share this article