ಮಳೆಗಾಲಕ್ಕೂ ಮುನ್ನ ಪೂರ್ವ ವಲಯದಕೆಳಸೇತುವೆ ದುರಸ್ತಿಗೆ ಬಿಬಿಎಂಪಿ ಕ್ರಮ

KannadaprabhaNewsNetwork |  
Published : Jan 20, 2024, 02:03 AM IST
ಬಿಬಿಎಂಪಿ | Kannada Prabha

ಸಾರಾಂಶ

ಕಳೆದ ವರ್ಷ ಭಾರೀ ಮಳೆಗೆ ಕೆಆರ್‌ ವೃತ್ತ ಬಳಿಯ ಕೆಳಸೇತುವೆಯಲ್ಲಿ ನೀರು ನಿಂತು ಯುವತಿಯೊಬ್ಬರು ಸಾವಿಗೀಡಾಗಿದ್ದ ಬೆನ್ನಲ್ಲೇ ಕೆಳ ಸೇತುವೆಗಳಲ್ಲಿನ ಲೋಪಗಳನ್ನು ಪತ್ತೆ ಮಾಡಿ ಅವುಗಳನ್ನು ಸರಿಪಡಿಸಲು ಬಿಬಿಎಂಪಿ ಇದೀಗ ಮುಂದಾಗಿದೆ.

ನಗರದ ಕೆಳಸೇತುವೆಗಳಲ್ಲಿ ನೀರು ನಿಂತು ಸೃಷ್ಟಿಯಾಗುವ ಅವಾಂತರ ತಡೆಗೆ ಯೋಜನೆಕನ್ನಡಪ್ರಭ ವಾರ್ತೆ ಬೆಂಗಳೂರು

ಮಳೆಗಾಲದಲ್ಲಿ ಕೆಳಸೇತುವೆಗಳಲ್ಲಿ ನೀರು ನಿಂತು ಸೃಷ್ಟಿಯಾಗುವ ಅವಾಂತರಗಳನ್ನು ತಪ್ಪಿಸಲು ಈಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. 1.27 ಕೋಟಿ ರು. ವೆಚ್ಚದಲ್ಲಿ ಪೂರ್ವ ವಲಯದ ಕೆಳಸೇತುವೆ, ರೈಲ್ವೆ ಕೆಳ ಮತ್ತು ಮೇಲ್ಸೇತುವೆಗಳ ಪರಿಶೀಲನೆ ಹಾಗೂ ದುರಸ್ತಿಗೆ ಯೋಜನೆ ರೂಪಿಸಿದೆ.

ಕಳೆದ ವರ್ಷ ಭಾರೀ ಮಳೆಗೆ ಕೆಆರ್‌ ವೃತ್ತ ಬಳಿಯ ಕೆಳಸೇತುವೆಯಲ್ಲಿ ನೀರು ನಿಂತು ಯುವತಿಯೊಬ್ಬರು ಸಾವಿಗೀಡಾಗಿದ್ದರು. ಆನಂತರ ಕೆಳ ಸೇತುವೆಗಳಲ್ಲಿನ ಲೋಪಗಳನ್ನು ಪತ್ತೆ ಮಾಡಿ ಅವುಗಳನ್ನು ಸರಿಪಡಿಸುವುದಾಗಿ ಬಿಬಿಎಂಪಿ ತಿಳಿಸಿತ್ತು. ಅದನ್ನು ಈಗ ಕಾರ್ಯಗತಗೊಳಿಸಲಾಗುತ್ತಿದ್ದು, ಮೊದಲಿಗೆ ಪೂರ್ವ ವಲಯ ವ್ಯಾಪ್ತಿಯ ಕೆಳಸೇತುವೆಗಳ ಪರಿಶೀಲನಾ ಕಾರ್ಯ ಕೈಗೊಳ್ಳುತ್ತಿದೆ. ಪ್ರಮುಖವಾಗಿ ಕೆಆರ್‌ ವೃತ್ತ, ಲೀ ಮೆರಿಡಿಯನ್‌ ಕೆಳಸೇತುವೆಗಳಲ್ಲಿ ನೀರು ನಿಲ್ಲದಂತೆ ಹೆಚ್ಚುವರಿ ಗ್ರ್ಯಾಂಟಿಂಗ್‌ಗಳ ಅಳವಡಿಕೆ ಹಾಗೂ ರೂಫ್‌ಟಾಪ್‌ಗಳನ್ನು ಅಳವಡಿಸಲಾಗುತ್ತಿದೆ. ಅದಕ್ಕಾಗಿ 42.35 ಲಕ್ಷ ರು. ವ್ಯಯಿಸಲಾಗುತ್ತಿದೆ.

ಆ ಎರಡು ಕೆಳಸೇತುವೆಗಳ ಜತೆಗೆ ಪೂರ್ವ ವಲಯ ವ್ಯಾಪ್ತಿಯಲ್ಲಿನ ಇನ್ನಿತರ ಕೆಳಸೇತುವೆಗಳ ಪರಿಶೀಲನೆ ನಡೆಸಿ, ಅಲ್ಲಿನ ಲೋಪಗಳನ್ನು ಸರಿಪಡಿಸಲೂ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಕೆಳಸೇತುವೆಗೆ ನೀರು ಹರಿಯುವುದನ್ನು ತಪ್ಪಿಸಲು ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದ್ದು, ಒಂದು ವೇಳೆ ಕೆಳಸೇತುವೆಗೆ ನೀರು ಹರಿದರೂ ಅದು ನಿಲ್ಲದಂತೆ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ. ಈ ಯೋಜನೆಗಾಗಿಯೂ ಪ್ರತ್ಯೇಕವಾಗಿ 42.35 ಲಕ್ಷ ರು. ಖರ್ಚು ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಪೂರ್ವ ವಲಯದಲ್ಲಿನ ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ಪರಿಶೀಲನೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಕೆಳ ಮತ್ತು ಮೇಲ್ಸೇತುವೆಗಳಲ್ಲಿ ನೀರು ಹರಿಯಲು ಇರುವ ಗ್ರ್ಯಾಂಟಿಂಗ್‌ಗಳ ಸ್ಥಿತಿಗಳನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ಅವುಗಳಲ್ಲಿ ದೋಷ ಕಂಡು ಬಂದರೆ ಅದನ್ನು ದುರಸ್ತಿ ಮಾಡಿಸಲಾಗುತ್ತದೆ. ಅದರ ಜತೆಜತೆಗೇ ಮೇಲ್ಸೇತುವೆಗಳ ಸದೃಢತೆಯನ್ನು ಪರಿಶೀಲಿಸಿ, ದುರಸ್ತಿ ಮಾಡುವುದಿದ್ದರೆ ಅದಕ್ಕೂ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಈ ಯೋಜನೆಗಾಗಿಯೂ 42.35 ಲಕ್ಷ ರು. ಮೀಸಲಿಡಲಾಗಿದೆ. ಒಟ್ಟಾರೆ ಪೂರ್ವ ವಲಯದಲ್ಲಿನ ಕೆಳಸೇತುವೆ, ಆರ್‌ಒಬಿ ಮತ್ತು ಆರ್‌ಯುಬಿಗಳನ್ನು ಮಳೆಗಾಲಕ್ಕೂ ಮುನ್ನವೇ ಪರಿಶೀಲಿಸಿ, ಮಳೆಗಾಲದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ