ಧಾರವಾಡ: ನ್ಯಾಯಾಂಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರಗೊಳ್ಳುತ್ತಿದ್ದು, ಕಾನೂನು ಪದವೀಧರರು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಲು ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್ ಹೇಳಿದರು.
ನಿಮ್ಮ ಸಾಮರ್ಥ್ಯ ಅರಿಯಿರಿ
ಸುಧಾರಣೆ ಮತ್ತು ಪರಿವರ್ತನೆಗೆ ಸದಾ ಅವಕಾಶವಿದ್ದು, ನೀವು ಏನನ್ನು ಮಾಡುತ್ತೀರಿ ಎಂಬುದು ಮುಖ್ಯವಲ್ಲ. ಹೇಗೆ ಮಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಕೈಗೊಂಡ ಕಾರ್ಯವನ್ನು ಸಂಪೂರ್ಣ ಪರಿಶ್ರಮ ಮತ್ತು ನಿಷ್ಠೆಯಿಂದ ಮಾಡುವಂತೆ ಸಲಹೆ ನೀಡಿದರು.ಎಲ್ಲದಕ್ಕೂ ಹಿರಿಯರನ್ನೇ ಅನುಕರಿಸುವುದಕ್ಕಿಂತ ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ತಮ್ಮತನವನ್ನು ಸಾಧಿಸಿಕೊಳ್ಳಬೇಕು. ಕಾನೂನು ಶಿಕ್ಷಣ ಸಂಸ್ಥೆಗಳನ್ನು ಶ್ರೇಣಿಕರಿಸಿ ಅವುಗಳಿಂದ ಹೊರ ಹೊಮ್ಮುವ ವಿದ್ಯಾರ್ಥಿಗಳನ್ನು ಆ ಸಂಸ್ಥೆಯ ಶ್ರೇಣಿಯ ಆಧಾರದ ಮೇಲೆ ಅಳೆಯುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ನ್ಯಾಯಮೂರ್ತಿ ಚಂದ್ರಚೂಡ್, ಇದೊಂದು ತರ್ಕಹೀನ ಪದ್ಧತಿ ಎಂದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ನ್ಯಾಯಾಂಗ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಅನೇಕ ಅವಕಾಶಗಳು ಮುಕ್ತವಾಗಿದ್ದು, ನಿರಂತರ ಪ್ರಯತ್ನ ಮತ್ತು ನಿಷ್ಠೆಯಿಂದ ಈ ಅವಕಾಶಗಳನ್ನು ಪದವೀಧರರು ಸದುಪಯೋಗ ಪಡಿಸಿಕೊಳ್ಳಬೇಕು. ಕಾಲಕಾಲಕ್ಕೆ ಬದಲಾಗುವ ಕಾನೂನುಗಳನ್ನು ಸರಿಯಾಗಿ ಅಭ್ಯಸಿಸಿ ವೃತ್ತಿಯಲ್ಲಿ ಯಶಸ್ವಿಯಾಗಲು ಸಲಹೆ ನೀಡಿದರು.
ಪದವಿ ಪ್ರದಾನ
ಕನ್ನಡ ಮಾಧ್ಯಮದಲ್ಲಿ ಕಾನೂನು ಕಲಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಮೂರು ವರ್ಷದ ಹಾಗೂ ಐದು ವರ್ಷದ ಕಾನೂನು ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ರ್‍ಯಾಂಕ್, ಪ್ರಮಾಣ ಪತ್ರ ನೀಡಲಾಯಿತು. ಜೊತೆಗೆ ಒಟ್ಟು 15 ಅಭ್ಯರ್ಥಿಗಳಿಗೆ ಪಿಎಚ್.ಡಿ ಪ್ರದಾನವಾಯಿತು.
ವೃತ್ತಿಯಲ್ಲಿ ಕಾನೂನಿನ ಪಠ್ಯವನ್ನಷ್ಟೇ ನಂಬಿಕೊಳ್ಳದೇ ಆ ಕಾನೂನಿನ ಹೊರ ವ್ಯಾಪ್ತಿ ಏನಿದೆ ಎಂಬುದನ್ನು ಅರಿತುಕೊಂಡರೆ ಯಶಸ್ಸು ಸಾಧ್ಯ. ಇದು ಸಾಧಿಸಬೇಕಾದರೆ, ಕಾನೂನು ಬಿಟ್ಟು ಅನೇಕ ವಿಷಯಗಳ ಆಳವಾದ ಅಧ್ಯಯನ ಅಗತ್ಯವಾಗಿದೆ ಎಂದರು.