ಕುಕನೂರು ತಾಲೂಕಿನ ಮಂಡಲಗೇರಿ ಗ್ರಾಮದಲ್ಲಿ ಯರೆಯ ದೊರೆ ರೈತ ಉತ್ಪಾದಕ ಕಂಪನಿಯ ನಾಲ್ಕನೇ ವಾರ್ಷಿಕ ಮಹಾಸಭೆ ನಿಮಿತ್ತ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಯೋಗದಲ್ಲಿ ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು.
ಕುಕನೂರು: ರಾಸಾಯನಿಕ ಕೃಷಿ ಪದ್ಧತಿ ಮನುಷ್ಯನ ಮತ್ತು ಭೂಮಿಯ ಆರೋಗ್ಯ ಹಾಳುಮಾಡುತ್ತಿದೆ. ನಮ್ಮ ಮುಂದಿನ ಪೀಳಿಗೆಯ ಹಾಗೂ ಭೂಮಿಯ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಾವಯವ ಕೃಷಿ ಪದ್ಧತಿ ಅಳವಡಿಸಿಕೋಳ್ಳಬೇಕಿದೆ ಎಂದು ರೈತ ಮಲ್ಲೇಶಪ್ಪ ಬಿಸೆರೊಟ್ಟಿ ಹೇಳಿದರು.
ತಾಲೂಕಿನ ಮಂಡಲಗೇರಿ ಗ್ರಾಮದಲ್ಲಿ ಯರೆಯ ದೊರೆ ರೈತ ಉತ್ಪಾದಕ ಕಂಪನಿಯ ನಾಲ್ಕನೇ ವಾರ್ಷಿಕ ಮಹಾಸಭೆ ನಿಮಿತ್ತ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು. ಜಾನುವಾರುಗಳ ಮೂತ್ರ, ಸಗಣಿಯಲ್ಲಿ ಸತ್ವ ಇದೆ. ಅದಕ್ಕಾಗಿಯೇ ನಮ್ಮ ಪೂರ್ವಜರು ಅನಾದಿ ಕಾಲದಿಂದಲೂ ಜಾನುವಾರುಗಳ ಮೂತ್ರ, ಸಗಣಿಯನ್ನು ಪೂಜ್ಯ ಭಾವದಿಂದ ಕಾಣುತ್ತಿದ್ದರು. ಆದರೆ ನಾವು ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಭೂಮಿಯನ್ನು ಬಂಜರು ಮಾಡುತ್ತಿದ್ದೇವೆ ಎಂದರು.ಹಿರಿಯರ ಮಾರ್ಗದರ್ಶನದಂತೆ ನಾವು ಕೃಷಿ ಮಾಡಬೇಕು. ದೇಶಿ ಬೀಜಗಳ ಸಂರಕ್ಷಣೆ ಮಾಡಬೇಕು. ಕೃಷಿ ಅಷ್ಟೇ ಅಲ್ಲದೇ ಅವರಂತೆ ನಾವು ಆಹಾರ ಪದ್ಧತಿ ಮುಂದುವರಿಸಿದ್ದೇ ಆದಲ್ಲಿ ನಾವು ಕೂಡ ಬಹುವರ್ಷಗಳ ಕಾಲ ಆರೋಗ್ಯಯುತ ಜೀವನ ನಡೆಸಲು ಸಾಧ್ಯ ಎಂದರು.
ಸಗಣಿಯಿಂದ ನೈಸರ್ಗಿಕವಾಗಿ ಉತ್ಕೃಷ್ಟ ಗೊಬ್ಬರ ತಯಾರಿಸುವ ಕುರಿತು ರೈತರಿಗೆ ಪ್ರಾಯೋಗಿಕವಾಗಿ ಮಾಹಿತಿ ನೀಡುವ ಜತೆಗೆ ಕೃಷಿ ಅನುಭವಗಳನ್ನು ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಗಡಗಿ ಮಾತನಾಡಿ, ರೈತರು ಆದಾಯ ಗಳಿಸುವ ಜತೆಗೆ ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ. ಸಾಧ್ಯವಾದಷ್ಟು ನಾವು ನೈಸರ್ಗಿಕ ಕೃಷಿ ಅಳವಡಿಸಿಕೊಂಡು ಬೆಳೆ ಬೆಳೆಯಬೇಕು ಎಂದರು.
ಜಗದೀಶ ಚಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮರಡ್ಡಿ ಶಾಡ್ಲಗೇರಿ ಸ್ವಾಗತಿಸಿದರು. ಗಂಗಾವತಿ ಕೃಷಿ ತರಬೇತಿ ಕೇಂದ್ರದ ಅಧಿಕಾರಿ ಗವಿಸಿದ್ದಯ್ಯ, ಗ್ರಾಮದ ಹಿರಿಯರಾದ ಹಂಚಾಳಪ್ಪ ತಳವಾರ, ಬಸವರಾಜ ಸಿ. ಪಾಟೀಲ, ಬಾಬುಗೌಡ ಪೊಲೀಸ್ ಪಾಟೀಲ್, ಬಸವರಾಜ ಹೊಕ್ಕಳದ, ಶರಣಪ್ಪ ಕಂಬಳಿ, ಮಲ್ಲಿಕಾರ್ಜುನ, ನಿರ್ದೇಶಕರಾದ ಸಿದ್ದಲಿಂಗಪ್ಪ, ಮಹೇಶ ಹಕ್ಕಂಡಿ, ಮಲ್ಲಪ್ಪ ಹಳ್ಳಿಗುಡಿ, ಜಯಪ್ರಕಾಶಗೌಡ ಹೊರಪೇಟಿ, ಉಮೇಶ ನಗರದ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.