ಧಾರವಾಡ:
ಕ್ಷುಲ್ಲಕ ಕಾರಣಕ್ಕಾಗಿ ಮಾಜಿ ಸೈನಿಕರೊಬ್ಬರ ಮೇಲೆ ಇಲ್ಲಿಯ ಉಪನಗರ ಠಾಣೆಯ ಕೆಲವು ಪೊಲೀಸರು ಮನಸೋಇಚ್ಛೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಭಾನುವಾರ ರಾತ್ರಿ ನಗರದಲ್ಲಿ ನಡೆದಿದೆ.ಸಪ್ತಾಪೂರದ ಡಾಲ್ಫಿನ್ ಹೋಟೆಲ್ ಪಕ್ಕದಲ್ಲಿನ "ಸೈನಿಕ " ಹೆಸರಿನಲ್ಲಿ ಖಾನಾವಳಿ ನಡೆಸುತ್ತಿರುವ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಎಂಬುವರನ್ನು ಮೆಸ್ ಬಂದ್ ಮಾಡಿಸುವ ವಿಚಾರವಾಗಿ ಓರ್ವ ಎಎಸೈ ಹಾಗೂ ನಾಲ್ಕೈದು ಜನ ಕಾನ್‌ಸ್ಟೇಬಲ್‌ಗಳು ಹಿಗ್ಗಾಮುಗ್ಗಾ ಥಳಿಸಿದ್ದು, ಪೊಲೀಸರ ಈ ಅಮಾನವೀಯ ಕೃತ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಮೆಸ್ ಬಂದ್ ಮಾಡುವ ವಿಚಾರವಾಗಿ ಪೊಲೀಸರು ಅವಾಚ್ಯ ಶಬ್ದಗಳನ್ನು ಬಳಸಿದ್ದಕ್ಕೆ ರಾಮಪ್ಪ ನಿಪ್ಪಾಣಿ ಪ್ರಶ್ನಿಸಿದ್ದಾರೆ. ಆಗ ಎಎಸೈ ಸೇರಿ ಇತರೆ ಪೊಲೀಸರು ಅವರ ಮೇಲೆ ಎರಗಿದ್ದಾರೆ. ಹೆಲ್ಮೆಟ್‌ನಿಂದ ತಲೆಗೆ ಹಲ್ಲೆ ಮಾಡಿರುವ ವೀಡಿಯೋ ಸಹ ವೈರಲ್ ಆಗಿದ್ದು, ಲಾಠಿ ಹಾಗೂ ಸಿಕ್ಕ ಸಿಕ್ಕ ವಸ್ತುಗಳಿಂದ ರಾಮಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ. ಮಾನವೀಯತೆ ಮರೆತು ಬೂಟಿನಿಂದ ಹೊಟ್ಟೆ, ಬೆನ್ನಿಗೂ ಒದ್ದಿದ್ದು, ದೇಹದ ಮೇಲೆ ಹೊಡೆತದ ಬರೆಗಳು ಎದ್ದು ಕಾಣುತ್ತಿವೆ.ಆಗಿದ್ದೇನು?:
ಮೆಸ್‌ನಲ್ಲಿ ಹುಡುಗರು ಊಟ ಮಾಡಿ ಹೋಗಿದ್ದರು. ನಾವಷ್ಟೇ ಊಟ ಮಾಡಬೇಡಕಿತ್ತು. ಪತಿಯೊಂದಿಗೆ ಇಬ್ಬರು ವಕೀಲರು ಊಟಕ್ಕೆ ಕುಳಿತುಕೊಂಡಿದ್ದರು. ತಡವಾಗಿದ್ದರಿಂದ ಪೊಲೀಸರು ಬಂದು ಮೆಸ್ ಬಾಗಿಲು ತೆರದ ಕಾರಣ ಬಂದ್ ಮಾಡಲು ಎಚ್ಚರಿಕೆ ನೀಡಬೇಕಿತ್ತು. ಅದರ ಬದಲು ಅವಾಚ್ಯ ಶಬ್ದ ಬಳಸಿದ್ದಕ್ಕೆ ನಮ್ಮ ಪತಿ ಪ್ರಶ್ನಿಸಿದರು. ಅಷ್ಟಕ್ಕೆ ಏಕಾಏಕಿ ಹಲ್ಲೆಗೆ ಮುಂದಾದರು. ಅಲ್ಲದೇ, ತಮ್ಮ ತಪ್ಪು ಗೊತ್ತಾಗದಿರಲೆಂದು ಸಿಸಿ ಕ್ಯಾಮೆರಾ ಸಹ ಒಡೆದು ಹಾಕಿದ್ದಾರೆ. ಮಾನವೀಯತೆಯೇ ಇಲ್ಲದ ಪೊಲೀಸರು ಜಗಳ ಬಿಡಿಸಲು ಹೋದ ನನ್ನ ಮೇಲೆ ಹಲ್ಲೆಗೂ ಮುಂದಾದರು. ಓಡಿ ಹೋಗಿ ಅವರಿಂದ ತಪ್ಪಿಸಿಕೊಂಡಿದ್ದೇನೆ. ಅವರು ಪೊಲೀಸರೋ ಅಥವಾ ರಾಕ್ಷಸರೋ ಗೊತ್ತಾಗುತ್ತಿಲ್ಲ. ಆಸ್ಪತ್ರೆಗೆ ಹೋಗುತ್ತೇವೆ ಎಂದರೂ ಬಿಡಲಿಲ್ಲ. ಈಗ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ನಮಗೆ ನ್ಯಾಯ ಕೊಡಿ ಎಂದು ರಾಮಪ್ಪ ನಿಪ್ಪಾಣಿಯ ಪತ್ನಿ ಅಳಲು ತೋಡಿಕೊಂಡರು.ಇದೇ ಗಲಾಟೆ ವೇಳೆ ಎಎಸ್ಐ ವಿದ್ಯಾನಂದ ಅವರಿಗೆ ಸಣ್ಣ ಪ್ರಮಾಣದಲ್ಲಿ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ ಆಯುಕ್ತ ಎನ್. ಶಶಿಕುಮಾರ ಆಗಮಿಸಿದ್ದು ಘಟನೆ ಬಗ್ಗೆ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಜನರನ್ನು ರಕ್ಷಿಸಬೇಕಾದ ಪೊಲೀಸರೇ ಸಾರ್ವಜನಿಕರಿಗೆ ಅವಾಚ್ಯ ಶಬ್ದ ಬಳಸುವುದು, ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡುವುದು ಯಾವ ನ್ಯಾಯ? ಯಾವತ್ತೂ ತಮ್ಮ ತಪ್ಪನ್ನು ಒಪ್ಪದ ಪೊಲೀಸ ಇಲಾಖೆ ಈ ಘಟನೆಯಲ್ಲೂ ಪೊಲೀಸರು ಅಮಾಯಕರು ಎಂದೇ ಬಿಂಬಿಸುತ್ತಾರೆಯೇ ಹೊರತು ಹಲ್ಲೆ ಮಾಡಿದವರ ಮೇಲೆ ಕ್ರಮ ಆಗುವ ಭರವಸೆ ನಮಗಿಲ್ಲ ಎಂದು ರಾಮಪ್ಪ ಅವರ ಕುಟುಂಬಸ್ಥರು ಪೊಲೀಸ್ ಇಲಾಖೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಈ ಕುರಿತು ಉಪನಗರ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.ತಡರಾತ್ರಿಯಾದರೂ ಮೆಸ್ ತೆರೆದಿರುವುದನ್ನು ಪ್ರಶ್ನಿಸಿದ್ದಕ್ಕೆ ಮಾಲೀಕ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆಂದು ತಿಳಿಸಲಾಗಿತ್ತು. ಈಗ ಮೆಸ್ ಮಾಲೀಕನ ಪತ್ನಿ ಬೇರೆಯೇ ಹೇಳುತ್ತಿದ್ದಾರೆ. ಇಲ್ಲಿ ನಮ್ಮ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದರೆ ಕ್ರಮಕೈಗೊಳ್ಳಲಾಗುವುದು. ನಮ್ಮವರು ಈ ರೀತಿ ಸಂಘರ್ಷಕ್ಕೆ ಇಳಿಯುವ ಅಗತ್ಯತೆ ಇರಲಿಲ್ಲ.
ಎನ್. ಶಶಿಕುಮಾರ, ಹು-ಧಾ ಪೊಲೀಸ್ ಆಯುಕ್ತ