- ಚಿಕ್ಕಮಗಳೂರಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೈನಂದಿನ ಸುಗಮ ಸಂಚಾರಕ್ಕೆ ವಾಹನ ಸವಾರರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸುವ ಮೂಲಕ ಅಪಘಾತ ತಡೆಗಟ್ಟಿ ಜೀವಗಳ ರಕ್ಷಣೆಗೆ ಮುಂದಾಗಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.ನಗರದ ತಾಲೂಕು ಕಚೇರಿಯಲ್ಲಿ ಜಿಲ್ಲಾಡಳಿತ, ಸಂಚಾರಿ ಪೊಲೀಸ್ ಠಾಣೆ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಮನುಷ್ಯನ ಜೀವ ಅತಿಮೂಲ್ಯವಾದುದು. ಹೀಗಾಗಿ ವಾಹನ ಸವಾರರು ಅತ್ಯಂತ ಜಾಗರೂಕತೆಯಿಂದ ಸಂಚರಿಸುವ ಜೊತೆಗೆ ಬೈಕ್‌ಗಳಲ್ಲಿ ಹೆಲ್ಮೆಟ್ , ಕಾರಿನ ಸೀಟ್‌ಬೆಲ್ಟ್ ಸೇರಿದಂತೆ ಇನ್ನಿತರೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಿದರೆ ಯಾವುದೇ ಅನಾಹುತಗಳು ಸಂಭವಿಸಲು ಸಾಧ್ಯವಿಲ್ಲ ಎಂದ ಅವರು, ನಿಯಮಪಾಲಿಸದ ವ್ಯಕ್ತಿಗಳಿಗೆ ವಿದ್ಯಾರ್ಥಿಗಳು ಸ್ಥಳಗಳಲ್ಲಿಯೇ ತಿದ್ದುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು. ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಅಪಘಾತ ಪ್ರಕರಣಗಳು ನಿಯಮ ಪಾಲಿಸದೇ ಸಂಭವಿಸಿದೆ. ಇದರಿಂದ ಕುಟುಂಬದ ಆಧಾರ ಸ್ಥಂಬವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಪ್ರತಿ ವಾಹನ ಸವಾರರು ನಿಗಧಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಸಂಚರಿಸದೇ ಸಂಚಾರಿ ನಿಯಮಗಳನ್ನು ಅಳವಡಿಸಿಕೊಂಡು ದೈನಂದಿನ ಕೆಲಸ ಕಾರ್ಯ ಗಳಿಗೆ ಮುಂದಾಗಬೇಕು ಎಂದು ಹೇಳಿದರು. ಆ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಪೊಲೀಸ್ ಇಲಾಖೆ ಸಹಯೋಗದಲ್ಲಿ ರಾಜ್ಯಾದ್ಯಂತ ಸುಮಾರು ಏಳು ಲಕ್ಷ ವಿದ್ಯಾರ್ಥಿಗಳ ಜೊತೆಗೂಡಿ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಿದ್ದು ನಿಯಮ ಉಲ್ಲಂಘಿಸುವ ಸವಾರರಿಗೆ ಪುಷ್ಪಗುಚ್ಚ ನೀಡುವ ಮೂಲಕ ಸವಾರರಿಗೆ ಸುರಕ್ಷತಾ ನಿಯಮದ ಅರಿವು ಮೂಡಿಸಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಂ ಅಮಟೆ ಮಾತನಾಡಿ, ಪ್ರಸ್ತುತ ಚಿಕ್ಕಮಗಳೂರು 1.30 ಲಕ್ಷ ಜನಸಂಖ್ಯೆ ಹೊಂದಿರುವ ತಾಲೂಕಾಗಿದೆ. ಸಂಚಾರಿ ಠಾಣೆಯಲ್ಲಿ ಅಧಿಕಾರಿಗಳಿಂದ ಇಷ್ಟೆಲ್ಲಾ ಮಂದಿ ನಿಭಾಯಿಸಿಕೊಂಡು ಮುನ್ನಡೆಯುತ್ತಿದೆ. ಜೊತೆಗೆ ವಾರಕ್ಕೊಮ್ಮೆ ಪ್ರವಾಸಿಗರು ಧಾವಿಸಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುತ್ತಿದ್ದು ಬಹಳಷ್ಟು ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.
ಸಾರ್ವಜನಿಕರು ರಸ್ತೆ ಸುರಕ್ಷತಾ ವಿಷಯದಲ್ಲಿ ಟ್ರಾಫಿಕ್ ಅಧಿಕಾರಿಗಳ ಮಾತಿಗೂ ಜಗ್ಗುತ್ತಿಲ್ಲ. ಇಂದಿಗೂ ಕೆಲವರು ಗುಣಮಟ್ಟವಿಲ್ಲದ ಹಾಗೂ ಆಫ್ ಹೆಲ್ಮೇಟ್ ಧರಿಸಿ ತಿರುಗಾಡುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಸವಾರರಿಗೆ ಅರಿವು ಮೂಡಿಸುವುದು ಹಾಗೂ ನಿಯಮ ಉಲ್ಲಂಘಿಸಿದರೆ ವಿದ್ಯಾರ್ಥಿಗಳಿಂದಲೇ ದಂಡ ಹಾಕಿಸುವ ಕೆಲಸಕ್ಕೆ ಸಪ್ತಾಹದ ಮೂಲಕ ಕೈಹಾಕಿದೆ. ಆ ದಿನದಲ್ಲಿ ಒಟ್ಟಾರೆ ದಂಡ ಮೊತ್ತವನ್ನು ಠಾಣೆಗೆ ಜಮಾವಣೆಯನ್ನು ವಿದ್ಯಾ ರ್ಥಿಗಳೇ ಮಾಡಬೇಕು ಎಂದು ತಿಳಿಸಿದರು.ಒನ್ ವೇ ಅಥವಾ ಪೋನ್‌ನಲ್ಲೇ ಮಾತನಾಡುತ್ತಾ ಸಂಚರಿಸುವವರು, ನೋ ಪಾರ್ಕಿಂಗ್‌ಗಳಲ್ಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವ, ರಸ್ತೆ ಸುರಕ್ಷತಾ ಕಾನೂನನ್ನು ಉಲ್ಲಂಘಿಸುವ ಸವಾರರಿಗೆ ಸಂಚಾರಿ ಪೊಲೀಸರ ಜೊತೆಗೂಡಿ ವಿದ್ಯಾರ್ಥಿಗಳು ತಮ್ಮದೇ ಶೈಲಿಯಲ್ಲಿ ಸುರಕ್ಷತಾ ನಿಯಮವನ್ನು ತಿಳಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ಜಿಲ್ಲೆಯಾದ್ಯಂತ ರಸ್ತೆ ಸುರಕ್ಷತಾ ಸಪ್ತಾಹದ ಅರಿವನ್ನು ಸಾರ್ವಜನಿಕರು ತಿಳಿಸಿದರೆ ಶೇ.10 ರಷ್ಟು ಅಪಘಾತ ತಪ್ಪಿಸ ಬಹುದು. ಅದಲ್ಲದೇ ಸಪ್ತಾಹದಲ್ಲಿ ಉತ್ತಮ ರೀತಿಯಲ್ಲಿ ನಿಯಮಗಳನ್ನು ಸಾರ್ವಜನಿಕರಿಗೆ ತಿಳಿಸುವ ಮಕ್ಕಳಿಗೆ ಸಮಾರೋಪ ದಿನದಂದು ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಐಡಿಎಸ್‌ಜಿ ಕಾಲೇಜು, ಸಂತ ಜೋಸೆಫರ ಶಾಲೆ, ಕೇಂಬ್ರಿಡ್ಜ್, ಮಾಡೆಲ್, ಸೆಂಟ್ ಮೇರಿಸ್ ಎಐಟಿ ಸೇರಿದಂತೆ ಇನ್ನಿತರೆ ಶಾಲೆ ವಿದ್ಯಾರ್ಥಿಗಳು ಸಪ್ತಾಹದಲ್ಲಿ ಪಾಲ್ಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಕುರಿತು ಜಾಥಾ ನಡೆಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೃಷ್ಣಮೂರ್ತಿ, ರೋಟರಿ ಸಂಸ್ಥೆ ಅಧ್ಯಕ್ಷ ಶ್ರೀವತ್ಸ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನಾ ಆಯುಕ್ತ ಕಿರಣ್‌ಕುಮಾರ್, ಸ್ವಯಂ ಸೇವಕ ನಿಹಾಲ್ ಹಾಜರಿದ್ದರು.11 ಕೆಸಿಕೆಎಂ 4ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಗುರುವಾರ ಚಿಕ್ಕಮಗಳೂರಿನಲ್ಲಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಎ.ಎನ್. ಮಹೇಶ್ ಚಾಲನೆ ನೀಡಿದರು. ಎಸ್ಪಿ ಡಾ. ವಿಕ್ರಂ ಅಮಟೆ, ಎಎಸ್ಪಿ ಕೃಷ್ಣಮೂರ್ತಿ ಇದ್ದರು.