ರೈತರು ಋತು ಆಧಾರಿತ ಬೆಳೆ ಪದ್ಧತಿ ಅಳವಡಿಕೆಗೆ ಮುಂದಾಗಲಿ

KannadaprabhaNewsNetwork | Published : Dec 24, 2023 1:45 AM

ಸಾರಾಂಶ

ಶನಿವಾರ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಡಾ. ಕವಿತಾ ಮಿಶ್ರಾ, ರೈತರು ಇಂದಿಗೂ ಋತು ಆಧಾರಿತ ಬೆಳೆ ಬೆಳೆಯಲು ಆದ್ಯತೆ ನೀಡುತ್ತಿಲ್ಲ. ಹವಾಮಾನದ ವೈಪರೀತ್ಯದಿಂದಾಗಿ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಅರಿವು ಹೊಂದಬೇಕಿದೆ ಎಂದರು.

- ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಕವಿತಾ ಮಿಶ್ರಾ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರೈತರು ಋತು ಆಧಾರಿತ ಬೆಳೆ ಪದ್ಧತಿ ಅಳವಡಿಕೆಗೆ ಮುಂದಾಗಿ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಡಾ. ಕವಿತಾ ಮಿಶ್ರಾ ಹೇಳಿದರು.

ಅವರು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ಶನಿವಾರ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ಇಂದಿಗೂ ಋತು ಆಧಾರಿತ ಬೆಳೆ ಬೆಳೆಯಲು ಆದ್ಯತೆ ನೀಡುತ್ತಿಲ್ಲ. ಹವಾಮಾನದ ವೈಪರೀತ್ಯದಿಂದಾಗಿ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಅರಿವು ಹೊಂದಬೇಕಿದೆ ಎಂದರು.

ಜಗತ್ತಿಗೆ ಅನ್ನ ಹಾಕುವ ರೈತನೇ ಇಂದು ಸಂಕಷ್ಟದ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ನಾವು ಬೆಳೆದ ಬೆಳೆಗಳಿಗೆ ಬೆಲೆ ನಿಗದಿಗೊಳಿಸಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಜೀವನದಲ್ಲಿ ಏಳು-ಬೀಳು ಸಾಮಾನ್ಯ. ಜೀವನದಲ್ಲಿ ಬಿದ್ದಾಗ ಕುಗ್ಗದೇ ಎದ್ದಾಗ ಹಿಗ್ಗದೇ ತಾಳ್ಮೆಯನ್ನು ಅಳವಡಿಸಿಕೊಂಡು ಮುಂದೆ ಸಾಗಿದಲ್ಲಿ ಯಶಸ್ಸಿನ ಶಿಖರ ಏರುವುದು ನಿಶ್ಚಿತ ಎಂದರು.

ಅನ್ನದಾತನೇ ಈ ದೇಶದ ಒಡೆಯ ಎಂಬ ಅರಿವು ಎಲ್ಲರಲ್ಲೂ ಬರಬೇಕು. ರೈತ ಸ್ವಾವಲಂಬಿಯಾಗಬೇಕು ಅಂದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಜಗತ್ತು ನಿಂತಿರುವುದು ರೈತನ ಮೇಲೆ. ಅವನು ಒಂದು ಬಾರಿ ಕೃಷಿ ಚಟುವಟಿಕೆ ಬಿಟ್ಟಿದ್ದೇ ಆದಲ್ಲಿ ಜಗತ್ತಿನಲ್ಲಿಯೇ ಅಲ್ಲೋಲ ಕಲ್ಲೋಲವಾಗುವುದರಲ್ಲಿ ಸಂದೇಹವಿಲ್ಲ.

ಇಂದಿನ ಆಧುನಿಕತೆಗೆ ತಕ್ಕಂತೆ ರೈತರು ಕೃಷಿ ಚಟುವಟಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ ಮತ್ತು ಅವಶ್ಯವಾಗಿದೆ. ಒಂದೇ ಬೆಳೆ ಬೆಳೆಯದೇ ಋತು ಆಧಾರಿತ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಇದರಿಂದಾಗಿ ಕೃಷಿಯಲ್ಲಿ ವರ್ಷವಿಡೀ ಬೆಳೆ ಬೆಳೆದು ಲಾಭ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಅನಂತಪುರದ ಕೃಷ್ಣದೇವರಾಯ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಭಾಗಣ್ಣ ಹರಳಯ್ಯ ಮಾತನಾಡಿ, ಮಾಜಿ ಪ್ರಧಾನಿ ಚರಣಸಿಂಗ್‌ ಚೌಧರಿ ಅವರ ಜನ್ಮದಿನದಂದು ಈ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.

ಇಂದು ಅನ್ನದಾತ ಆತ್ಮಸ್ಥೈರ್ಯದಿಂದ ಬದುಕುತ್ತಿಲ್ಲ. ರೈತನು ಸ್ವಾವಲಂಬಿಯಾಗಬೇಕು ಅಂದಾಗ ದೇಶ ಅಭಿವೃದ್ಧಿ ಹೊಂದುತ್ತದೆ. ನಾಡಿಗೆ ಅನ್ನ ನೀಡುವ ರೈತರನ್ನು ನಿತ್ಯವೂ ಸ್ಮರಿಸುವ ಕಾರ್ಯವಾಗಬೇಕಿದೆ. ಇಂದಿನ ವ್ಯವಸ್ಥೆಯಡಿ ಅನ್ನದಾತನೂ ಉದ್ಯಮಿಗಳಾಗುವ ಅನಿವಾರ್ಯತೆ ಎದುರಾಗಿದೆ. ರೈತರು ಮಾರುಕಟ್ಟೆಯ ಅಧ್ಯಯನ ಮಾಡಿ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ತುಂಡು ಭೂಮಿಯಲ್ಲಿ ಹಿಂಡು ಬೆಳೆ ಬೆಳೆಯುವ ಮೂಲಕ ಅಧಿಕ ಆದಾಯ ಕಾಣಬಹುದು ಎಂದರು. ಇದೇ ವೇಳೆ ಅವರು 300 ವರ್ಷಗಳ ಇತಿಹಾಸ ಹೊಂದಿರುವ ಡಬ್ಬಿ ಮೆಣಸಿನಕಾಯಿ ತಳಿ ಸಂಶೋಧನೆ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಡಾ. ಕವಿತಾ ಮಿಶ್ರಾ ಹಾಗೂ ಕಿತ್ತೂರಿನ ಪ್ರಗತಿಪರ ರೈತ ಮಹಿಳೆ ಲತಾ ಹಳ್ಳಿಕೇರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಟಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಉಪಾಧ್ಯಕ್ಷ ರವೀಂದ್ರ ಬಿಡಸಾರಿಯಾ, ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಸಿ.ಎನ್‌. ಕಟ್ಟಿ ಸೇರಿದಂತೆ ಹಲವರಿದ್ದರು. ಸಂಸ್ಥೆಯ ಅಧ್ಯಕ್ಷ ಎಸ್‌.ಪಿ. ಸಂಶಿಮಠ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ವಂದಿಸಿದರು.

Share this article