ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಿ

KannadaprabhaNewsNetwork | Updated : Dec 21 2023, 01:16 AM IST

ಸಾರಾಂಶ

ರೈತರು ರಾಸಾಯನಿಕ ಗೊಬ್ಬರ ಬಳಸದೇ, ಸಾವಯವ ರಸಗೊಬ್ಬರ ಉಪಯೋಗಿಸಿ ಹೆಚ್ಚಿನ ಇಳುವರಿ ಪಡೆಯಬೇಕು. ರೈತರು ಕೃಷಿಯಲ್ಲಿ ವೈಜ್ಞಾನಿಕ ಹಾಗೂ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ಟಿ.ಭೂಬಾಲನ್‌ ಕರೆ

ಕನ್ನಡಪ್ರಭ ವಾರ್ತೆ ವಿಜಯಪುರ

ರೈತರು ರಾಸಾಯನಿಕ ಗೊಬ್ಬರ ಬಳಸದೇ, ಸಾವಯವ ರಸಗೊಬ್ಬರ ಉಪಯೋಗಿಸಿ ಹೆಚ್ಚಿನ ಇಳುವರಿ ಪಡೆಯಬೇಕು. ರೈತರು ಕೃಷಿಯಲ್ಲಿ ವೈಜ್ಞಾನಿಕ ಹಾಗೂ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್‌ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳ ಆಶ್ರಯದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆ ಪ್ರಮುಖವಾಗಿ ಕೃಷಿ ಆಧಾರಿತವಾಗಿದೆ. ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳಬೇಕು ಎಂದರು.

ಕೃಷಿಯೊಂದಿಗೆ ಉಪ ಕಸುಬನ್ನು ಅಳವಡಿಸಿಕೊಳ್ಳಬೇಕು. ತೋಟಗಾರಿಕೆ ಬೆಳೆಗಳೊಂದಿಗೆ ಮಿಶ್ರ ಬೇಸಾಯಕ್ಕೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ರೈತರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶ ಏರ್ಪಡಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಕೃಷಿಗೆ ಸಂಬಂಧಿಸಿದ ಇಂತಹ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ. ಮಹಿಳಾ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸುಮಾರು ೩೫ ರೈತ ಸಂಪನ್ಮೂಲ ಸಂಸ್ಥೆಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿವೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಮಹಾತೇಂಶ ಬಿರಾದಾರ, ಕೃಷಿ ಕಲ್ಪ ಫೌಂಡೇಶನ್ ಸಿ.ಇ.ಓ ಸಿ.ಎಂ ಪಾಟೀಲ್ ಹಾಗೂ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷರಾದ ದಾನಮ್ಮ ಪಾಟೀಲ ಅವರು ಮಾತನಾಡಿದರು.

೮ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು:

ಮುತ್ತಗಿ ರೈತ ಉತ್ಪಾದಕ ಸಂಸ್ಥೆಯಿಂದ ಲಿಂಬೆ ಮತ್ತು ಈರುಳ್ಳಿ ಸಂಸ್ಕರಣೆ ಪದಾರ್ಥಗಳು, ಗೋಳಸಂಗಿ ಗ್ರಾಮದ ಗೋಪಾಲ ರೈತನಿಂದ ಕಡಲೆ ಬೆಳೆ ಮತ್ತು ತೊಗರಿ ಬೆಳೆ, ಕೃಷಿ ತಂತ್ರ ಸಂಸ್ಥೆಯಿಂದ ಮಣ್ಣು ಪರೀಕ್ಷೆ ಯಂತ್ರ, ಸೆಲ್ಕೊ ಸೋಲಾರ್ ಕಂಪನಿಯಿಂದ ಆಹಾರ ಧಾನ್ಯ ಸಂಸ್ಕರಣಾ ಯಂತ್ರಗಳು, ಪರಂಪರಾಗತ ರೈತ ಸಂಸ್ಥೆಯಿಂದ ಶೇಂಗಾ, ಕುಸುಬೆ, ಕೊಬ್ಬರಿ, ಎಣ್ಣೆ, ಸಿದ್ದೇಶ್ವರ ಸಂಸ್ಥೆಯಿಂದ ಗೋ ಆಧಾರಿತ ಉತ್ಪನ್ನಗಳು, ಅಮೃತ ಆರ್ಗ್ಯಾನಿಕ್‌ನಿಂದ ಸಾವಯವ ಗೊಬ್ಬರ, ಸಫಲ್ ಸಂಸ್ಥೆಯಿಂದ ಬೆಳೆಗೆ ನೀರು ಮಾಪನ ಯಂತ್ರಗಳ ಕುರಿತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ವಿಲಿಯಂ ರಾಜಶೇಖರ, ತೋಟಗಾರಿಕೆ ಉಪ ನಿರ್ದೇಶಕ ಭಾವಿದೊಡ್ಡಿ ರಾಹುಲ್ ಕುಮಾರ, ಕೃಷಿ ಸಹಾಯಕ ನಿರ್ದೇಶಕ ರಾಘವೇಂದ್ರ ಬಗಲಿ, ಬಿಎಲ್ ಡಿಇ ಸಂಸ್ಥೆಯ ಕುಲಕರ್ಣಿ, ವ್ಹಿಜನ್ ಗ್ರೂಪ್ ಸ್ಪಾರ್ಟ್‌ಅಪ್ ಚೇರಮನ್ ಪ್ರಶಾಂತ ಪ್ರಕಾಶ, ವೇಗ್ರೋ ಸಂಸ್ಥೆ ಸಂಗ್ರಹಣಾ ಮುಖ್ಯಸ್ಥ ಸಾಗರ, ಕ್ಲೋವರ್ ವೆಂಚರ್ ಸಂಸ್ಥೆ ಸಂಗ್ರಹಣಾ ಮುಖ್ಯಸ್ಥ ರಘುನಾಥ, ಫಸಲ್ ಸಂಸ್ಥೆ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಜಿತೇಂದ್ರ ಸಿಂಘಾಲ್, ಹುನಗುಂದ ಎಫ್.ಪಿ.ಓ. ನಿರ್ದೇಶಕ ರವಿ ಸಜ್ಜನರ, ಜಿಜ್ಞೇಶ್ ಜೋಶಿ, ಪ್ರಶಾಂತ ಹೆಗಡೆ ಸೇರಿದಂತೆ ವಿವಿಧ ಕೃಷಿ ಸಂಸ್ಥೆಗಳ ಮುಖ್ಯಸ್ಥರು, ಜಿಲ್ಲಾ ಮಟ್ಟದ ಕೃಷಿ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.---

ಕೋಟ್‌

ಸಮಾವೇಶದಲ್ಲಿ ನುರಿತ ಕೃಷಿ ತಜ್ಞರ ಸಲಹೆಗಳನ್ನು ಪಡೆದುಕೊಂಡು ಕೃಷಿಯಲ್ಲಿ ಹೆಚ್ಚುವರಿ ಇಳುವರಿ ಪಡೆಯುವ ಕ್ರಮಗಳನ್ನು ಅನುಸರಿಸಬೇಕು. ಬರಗಾಲ ಪರಿಹಾರ ಪಡೆದುಕೊಳ್ಳಲು ರೈತರು ಫ್ರೂಟ್ಸ್‌ ತಂತ್ರಾಂಶದಲ್ಲಿ ವಿವರ ನೋಂದಾಯಿಸಿಕೊಳ್ಳಬೇಕು.

-ಟಿ.ಭೂಬಾಲನ್‌, ಜಿಲ್ಲಾಧಿಕಾರಿ

Share this article