ಕನ್ನಡಪ್ರಭ ವಾರ್ತೆ ರಾಯಚೂರುಉತ್ತಮ ಸಮಾಜದ ನಿರ್ಮಾಣಕ್ಕೆ ನಾವೆಲ್ಲ ಸಿದ್ಧರಾಗಬೇಕಾಗಿದ್ದು, ಅದಕ್ಕಾಗಿಯೇ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಆಚಾರ, ವಿಚಾರ ಮತ್ತು ತತ್ವಗಳನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದು ತಹಸೀಲ್ದಾರ್ ಸುರೇಶ ವರ್ಮ ಹೇಳಿದರು.ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.
ಶಿವಶರಣರ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಸಿದ್ಧರಾಗಬೇಕು. ಪತಿ ಭಕ್ತಿಗೆ ಹೇಮರೆಡ್ಡಿ ಮಲ್ಲಮ್ಮ ಉತ್ತಮ ಉದಾಹರಣೆಯಾಗಿದ್ದಾರೆ. ಜೀವನದಲ್ಲಿ ಹಲವು ಕಷ್ಟನಷ್ಟ ಅನುಭವಿಸಿದ ಮಲ್ಲಮ್ಮನವರು ಇಂದಿನ ಪೀಳಿಗೆಗೆ ಆದರ್ಶವಾಗಿದ್ದಾರೆ ಎಂದು ತಿಳಿಸಿದರು.ಸಮಾಜ ಮುಖಂಡರಾದ ಶರಣ ಭೂಪಾಲ್ ನಾಡಗೌಡ ಮಾತನಾಡಿ, ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ 12ನೇ ಶತಮಾನದ ಶಿವಶರಣೆಯರಂತೆ ವಚನಗಳನ್ನು ರಚನೆ ಮಾಡಿಲ್ಲವಾದರೂ, ಅವರ ಬದುಕೇ ಒಂದು ಬೃಹತ್ ವಚನವಿದ್ದಂತೆ, ಅವರ ಜೀವನದ ಮೌಲ್ಯಗಳು ಮನುಕುಲಕ್ಕೆ ಅಮೂಲ್ಯ ಕಾಣಿಕೆಗಳಾಗಿವೆ. ಅವರ ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲ ನಡೆಯಬೇಕು ಎಂದರು.ಹೇಮರೆಡ್ಡಿ ಮಲ್ಲಮ್ಮ ಜೀವನವೇ ಒಂದು ಸಾಧನೆ, ಅವರು ಸಂಸಾರಿಕ ಜೀವನದಲ್ಲಿ ಕಷ್ಟ, ನೋವುಗಳನ್ನು ಅನುಭವಿಸಿದ್ದರು, ಮಲ್ಲಮ್ಮ ಜೀವನವಿಡಿ ಕಷ್ಟಗಳನ್ನುಂಡರೂ ತನಗೆ ನೋವುಂಟು ಮಾಡಿದವರ ಹಿತ ಬಯಸಿದರು. ಎಂತಹ ಕಷ್ಟದಲ್ಲಿಯೂ ಶಿವನನ್ನು ಸ್ಮರಿಸುತ್ತಿದ್ದರು, ಮಲ್ಲಿಕಾರ್ಜುನನನ್ನು ಧ್ಯಾನಿಸುತ್ತಿದ್ದ ಸಂದರ್ಭದಲ್ಲಿ ದರ್ಶನ ನೀಡಿದ ಮಲ್ಲಿಕಾರ್ಜುನ ವರ ಕೇಳು ಎಂದಾಗ ಅವರು ತನ್ನ ಬಳಗಕ್ಕೆ, ಸಮಾಜಕ್ಕೆ ಎಂದಿಗೂ ಬಡತನ ಬರಬಾರದು ಎಂದು ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಮಲ್ಲಮ್ಮರಿಗೆ ವರ ನೀಡಿದ್ದರಿಂದ ಇಂದು ರೆಡ್ಡಿ ಸಮಾಜವು ಬಡತನದಿಂದ ಇಲ್ಲ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಸಮಾಜ ರೆಡ್ಡಿ ಸಮಾಜವಾಗಿದೆ ಎಂದರು.ಈ ವೇಳೆ ಉಪನ್ಯಾಸಕರಾಗಿ ಶ್ರೀಶೈಲಂ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಸಿ.ಎಂ.ಗುರುಪಾದಯ್ಯ ಸ್ವಾಮಿ ಅವರು ಮಾತನಾಡಿ, ಅತ್ತೆ, ಮಾವ, ಗಂಡನ ಸೇವೆಯಲ್ಲಿಯೇ ದೇವರನ್ನು ಕಾಣು ಎಂದು ಗಂಡನ ಮನೆಗೆ ಹೋಗುವಾಗ ತಂದೆ- ತಾಯಿ ಹೇಳಿದ ನೀತಿ ಪಾಠವನ್ನು ಮಲ್ಲಮ್ಮ ತನ್ನ ಬದುಕಿನಲ್ಲಿ ಎಂತಹ ಕಷ್ಟಗಳು ಬಂದರೂ ಪಾಲಿಸಿಕೊಂಡು ಬಂದು ಆದರ್ಶಪ್ರಾಯಳಾಗಿ ಮೆರೆದಳು ಎಂದರು.ಬೆಟ್ಟದಷ್ಟು ಕಷ್ಟಗಳು ಎದುರಾದರೂ ಸಹಿಸಿಕೊಂಡು ತನ್ನ ಸನ್ನಡತೆಯಿಂದ ಆದರ್ಶ ಸೊಸೆಯಾಗಿ, ಆಧ್ಯಾತ್ಮಿಕವಾಗಿ ಸಾಧನೆ ಮಾಡಿ ದೇವತೆಯ ಸ್ಥಾನ ಪಡೆದು ಹೆತ್ತವರ ಆಸೆಗೆ ಕುಂದು ತರದೇ ನಡೆದುಕೊಂಡ ಮಲ್ಲಮ್ಮ, ಭಾರತೀಯ ಆಧ್ಯಾತ್ಮಿಕ ಇತಿಹಾಸದಲ್ಲಿ ನೆಲೆಯೂರಿರುವ ಶಿವಶರಣೆಯರಾದ ಅಕ್ಕಮಹಾದೇವಿ, ಸಂಚಿ ಹೊನ್ನಮ್ಮ ನೆಲ್ಲೂರ ನಿಂಬೆಕ್ಕ, ಸಜ್ಜಲಗುಡ್ಡದ ಶರಣಮ್ಮ ಮತ್ತಿತರರ ಸಾಲಿಗೆ ಸೇರ್ಪಡೆಯಾಗಿದ್ದಾಳೆ ಎಂದರು.ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಸನಗೌಡ ಬ್ಯಾಗವಾಟ್, ಸಿ.ಎಸ್. ಪಾಟೀಲ್, ಶರಣು ಭೂಪಾಲ ನಾಡಗೌಡ, ಶರಣಬಸವ ಜೋಳದಡಗಿ, ಭೂಪಾಲ ನಾಡಗೌಡ, ಸಿದ್ದನಗೌಡ ಸಾನಬಾಳ, ಸಿದ್ದನಗೌಡ ಅಮರಖೇಡ್, ಮಲ್ಲಿಕಾರ್ಜುನ ಮೇಟಿ, ವಿ.ಎ.ಮಾಲಿ ಪಾಟೀಲ್, ರಾಮನಗೌಡ ಏಗನೂರು, ಪವನ ಪಾಟೀಲ್, ನಾಗನಗೌಡ ಹರವಿ, ಅಮರೇಗೌಡ ಹಂಚಿನಾಳ, ಲಕ್ಷ್ಮೀಕಾಂತ ರೆಡ್ಡಿ, ಶರಣಮ್ಮ ಕಾಮರೆಡ್ಡಿ, ಶರಣಬಸವ ಬಲ್ಲಟಗಿ ಸೇರಿದಂತೆ ಇತರರು ಇದ್ದರು.----10ಕೆಪಿಆರ್‌ಸಿಆರ್ 01: ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತೋತ್ಸವನ್ನು ಆಚರಿಸಲಾಯಿತು.