ಆಚಾರ್ಯ ರೇಣುಕರ ಚಿಂತನೆ ಅಳವಡಿಸಿಕೊಳ್ಳಿ: ಡಾ.ಎನ್. ಭಾಸ್ಕರ್

KannadaprabhaNewsNetwork |  
Published : Mar 13, 2025, 12:45 AM IST
ಸಿಕೆಬಿ-8 ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್  ಸಮುದಾಯದ ಹಿರಿಯ ಮುಖಂಡರಿಗೆ ಸನ್ಮಾನ ಮಾಡಿದರು | Kannada Prabha

ಸಾರಾಂಶ

ಮನುಕುಲದ ಕಲ್ಯಾಣಕ್ಕಾಗಿ ಹಲವು ಆಚಾರ್ಯರು, ಸಮಾಜ ಸುಧಾರಕರು ಈ ಭುವಿಯ ಮೇಲೆ ಅವತರಿಸಿ ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡಿ ಹೋಗಿದ್ದಾರೆ. ಅಂತಹ ಪರಂಪರೆಯಲ್ಲಿ ಆದಿಜಗದ್ಗುರು ರೇಣುಕಾಚಾರ್ಯರು ಪ್ರಮುಖರು ಎಂದು ಅಪರ ಜಿಲ್ಲಾಧಿಕಾರಿ ಡಾ ಎನ್. ಭಾಸ್ಕರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮನುಕುಲದ ಕಲ್ಯಾಣಕ್ಕಾಗಿ ಹಲವು ಆಚಾರ್ಯರು, ಸಮಾಜ ಸುಧಾರಕರು ಈ ಭುವಿಯ ಮೇಲೆ ಅವತರಿಸಿ ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡಿ ಹೋಗಿದ್ದಾರೆ. ಅಂತಹ ಪರಂಪರೆಯಲ್ಲಿ ಆದಿಜಗದ್ಗುರು ರೇಣುಕಾಚಾರ್ಯರು ಪ್ರಮುಖರು ಎಂದು ಅಪರ ಜಿಲ್ಲಾಧಿಕಾರಿ ಡಾ ಎನ್. ಭಾಸ್ಕರ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಆಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಅಗ್ರಗಣ್ಯರು. ಇವರ ತತ್ವ, ಬೋಧನೆಗಳು ಬದುಕಿನ ಚರಿತ್ರೆ ಮತ್ತು ಸಾಮಾಜಿಕ ಪರಿವರ್ತನೆಯ ಸಾಧನೆಗಳು ಭಾರತೀಯ ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿವೆ. ಕನ್ನಡ ಭಾಷೆಯಲ್ಲಿ ಇವರ ಬದುಕು ಮತ್ತು ತತ್ವಗಳನ್ನು ವಿವರಿಸುವ ಹಲವು ಗ್ರಂಥಗಳಿವೆ. ಶ್ರೀ ರೇಣುಕಾಚಾರ್ಯರು ಇಷ್ಟಲಿಂಗ ಧಾರಣೆಯ ಮೂಲಕ ಭಗವಂತನನ್ನು ವೈಯಕ್ತಿಕ ಅನುಭವದ ಮೂಲಕ ಅರಿತುಕೊಳ್ಳಬೇಕೆಂಬ ತತ್ವವನ್ನು ಪ್ರಚಾರ ಮಾಡಿದರು. ಶೈವ ತತ್ವಶಾಸ್ತ್ರವನ್ನು ಜನಸಾಮಾನ್ಯರಿಗೆ ತಲುಪಿಸಲು ಹಾಗೂ ಅದನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಲು ಶ್ರಮಿಸಿದ್ದಾರೆ. ಅದನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ವಕೀಲೆ ಪ್ರಭಾ ನಾಗರಾಜ್ ಮಾತನಾಡಿ, ಶ್ರೀ ರೇಣುಕಾಚಾರ್ಯರು ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಎಂಬ ಊರಿನಲ್ಲಿ ಜನಿಸಿದರು. ಆಚಾರ್ಯರು ಬಾಲ್ಯದಲ್ಲೇ ಋಷಿಗಳ ಜೊತೆಯಲ್ಲಿ ನಿರಂತರ ಜ್ಞಾನಸಾಧನೆ ನಡೆಸಿ, ಶೈವ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಅವರು ಲಿಂಗಾಯತ ಧರ್ಮದ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾ ಶೈವ ಪರಂಪರೆಯನ್ನು ಬಲಪಡಿಸಲು ತಮ್ಮ ಜೀವನವನ್ನು ಮೀಸಲಾಗಿಟ್ಟಿದ್ದರು. ಇಷ್ಟಲಿಂಗವನ್ನು ಧರಿಸುವ ಮೂಲಕ ನಿತ್ಯ ಶಿವನೊಂದಿಗೆ ಸಂಬಂಧವನ್ನು ಕಾಪಾಡಬೇಕೆಂಬ ತತ್ವವನ್ನು ಅವರು ಬೋಧಿಸಿದರು. ದೇವರನ್ನು ಹೊರಗಿನ ಪ್ರತಿಮೆಗಳಿಂದ ಅಲ್ಲದೆ, ತಮ್ಮ ಅಂತರಾಳದಲ್ಲಿ ಹುಡುಕಬೇಕೆಂಬ ನಂಬಿಕೆಯನ್ನು ಪ್ರಚುರ ಪಡಿಸಿ ಸಮಾನತೆ ಎಂಬ ತತ್ವಕ್ಕೆ ಮಹತ್ವ ನೀಡಿದ್ದರು, ಅದರಲ್ಲಿ ಎಲ್ಲಾ ವರ್ಣಗಳೂ ಸಮಾನವೆಂಬ ನಂಬಿಕೆಯನ್ನು ಹರಡಿದರು. ಇಂದಿಗೂ ಕೂಡ ಶ್ರೀಲಂಕಾದಲ್ಲಿ ನಾವು ರೇಣುಕಾಚಾರ್ಯರ ಆಶ್ರಮವನ್ನು, ಭೀಷ್ಮರು ಪ್ರತಿಷ್ಠಾಪನೆ ಮಾಡಿರುವ 6 ಕೋಟಿ ಶಿವಲಿಂಗಗಳನ್ನು ನೊಡಬಹುದು. ಆಚಾರ್ಯರ ಪ್ರಭಾವ ವಿದೇಶಕ್ಕೂ ಚಾಚಿತ್ತು ಎಂದು ತಿಳಿಸಿದರು.

ಈ ವೇಳೆ ಸಮುದಾಯದ ಹಿರಿಯ ಮುಖಂಡರಿಗೆ ಸನ್ಮಾನ ಮಾಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಸಮುದಾಯದ ಮುಖಂಡರಾದ ಮಹೇಶ್ ಬಸವಪುರ, ರಾಜೇಂದ್ರ ಪ್ರಸಾದ್, ಗಂಗಾಧರ, ಮೋಹನ್ ಕುಮಾರ್, ಸುನೀಲ್, ಸೋಮಶೇಖರ್, ಮಹಲಿಂಗಯ್ಯ, ನಾಗರಾಜ್, ಗೀತಾ ಬಸವರಾಜ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ