ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ, ಪ್ರೋತ್ಸಾಹಿಸಲು ಸರ್ಕಾರಿ ಶಾಲೆ ದತ್ತು ಸ್ವೀಕಾರ: ಭಂಡಾರಿ ಶ್ರೀನಿವಾಸ್

KannadaprabhaNewsNetwork |  
Published : Mar 28, 2025, 12:35 AM IST
27ಕೆೆಕೆಡಿಯು1. | Kannada Prabha

ಸಾರಾಂಶ

ಕಡೂರು, ಸರ್ಕಾರದ ಆಶಯದಂತೆ ಸ್ಥಳೀಯ ಸಂಸ್ಥೆಗಳು ಸರಕಾರಿ ಶಾಲೆ ದತ್ತು ಪಡೆದು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ, ಪ್ರೋತ್ಸಾಹಿಸುವ ಜತೆಗೆ ಶಾಲೆ ನಿರ್ವಹಣೆ ಮಾಡಲು ಪಟ್ಟಣದ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪುರಸಭೆಯಿಂದ ದತ್ತು ಪಡೆಯಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

- ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ನಡೆದ ಸರ್ಕಾರಿ ಶಾಲೆ ದತ್ತು ಸ್ವೀಕಾರ ಸಮಾರಂಭ

ಕನ್ನಡ ಪ್ರಭ ವಾರ್ತೆ, ಕಡೂರು

ಸರ್ಕಾರದ ಆಶಯದಂತೆ ಸ್ಥಳೀಯ ಸಂಸ್ಥೆಗಳು ಸರಕಾರಿ ಶಾಲೆ ದತ್ತು ಪಡೆದು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ, ಪ್ರೋತ್ಸಾಹಿಸುವ ಜತೆಗೆ ಶಾಲೆ ನಿರ್ವಹಣೆ ಮಾಡಲು ಪಟ್ಟಣದ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪುರಸಭೆಯಿಂದ ದತ್ತು ಪಡೆಯಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.ಗುರುವಾರ ಪಟ್ಟಣದ 6ನೇ ವಾರ್ಡಿನ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ನಡೆದ ಸರ್ಕಾರಿ ಶಾಲೆ ದತ್ತು ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾವು ಈ ಶಾಲೆಯಲ್ಲೆ ವ್ಯಾಸಂಗ ಮಾಡಿದ್ದು, ನಮ್ಮ ಪುರಸಭೆಯಲ್ಲಿ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರ ಮಕ್ಕಳು ಈ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಹಿನ್ನೆಲೆಯಲ್ಲಿ ದತ್ತು ಪಡೆಯ ಲಾಗುತ್ತಿದೆ ಎಂದರು. ಇತ್ತೀಚೆಗೆ ಈ ಶಾಲೆಗೆ ಯುನಿಲೆಟ್ ಕಂಪನಿಯಿಂದ ₹4.50 ಲಕ್ಷ ವೆಚ್ಚದಲ್ಲಿ ಈ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ, ಗೋಡೆ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಲಾಗಿದೆ. 29 ವರ್ಷಗಳ ಕಾಲ ಪುರಸಭೆ ಸದಸ್ಯನಾಗಿ ನಾನು ಕೆಲಸ ಮಾಡಿದ್ದು, ಪಟ್ಟಣದ ಅಭಿವೃದ್ಧಿ ಮಾಡಲು ನಮ್ಮ ಪುರಸಭೆ 23 ಸದಸ್ಯರು ಮತ್ತು ಅಧಿಕಾರಿ ವರ್ಗ ಸಂಪೂರ್ಣ ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿದೆ. ಶಾಸಕರಾಗಿದ್ದ ಬೆಳ್ಳಿ ಪ್ರಕಾಶ್ ಮತ್ತು ಈಗಿನ ಶಾಸಕ ಕೆ.ಎಸ್. ಆನಂದ್ ಸಹಕಾರ ನೀಡುತ್ತಿದ್ದಾರೆ. ಈ ಶಾಲೆ ಮಕ್ಕಳಿಗೆ ಸಮೀಪದ ಪುರಸಭೆ ವ್ಯಾಪ್ತಿ ಪಾರ್ಕನ್ನು ಆಟದ ಮೈದಾನಕ್ಕಾಗಿ ಬಳಸಿಕೊಳ್ಳಿ ಎಂದರು.ಶಿಕ್ಷಕರ ಜವಾಬ್ದಾರಿ ಹೆಚ್ಚಿದ್ದು ಇಲ್ಲಿ ಕಲಿತ ಬಡವರ, ಕಾರ್ಮಿಕರ ಮಕ್ಕಳು ಉನ್ನತ ಹುದ್ದೆಗೆ ಹೋಗಲಿ ಎಂಬುದು ತಮ್ಮ ಆಶಯ. ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ನಾವು ಕಂಡಿರುವ ಕನಸನ್ನು ನನಸು ಮಾಡಲು ಶಾಸಕರು, ಸದಸ್ಯರು ಮತ್ತು ಜನರ ವಿಶ್ವಾಸದಿಂದ ಕಡೂರನ್ನು ಮಾದರಿ ಪಟ್ಟಣವಾಗಿ ಮಾಡಿ ತೋರಿಸುತ್ತೇನೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜು ನಾಯ್ಕ ಮಾತನಾಡಿ, ಸರ್ಕಾರದ ಮಾನದಂಡದಂತೆ ದತ್ತು ಕಾರ್ಯಕ್ರಮ ನಡೆದಿದೆ. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಆಲೋಚನೆಯಿಂದ ಸರ್ಕಾರಿ ಶಾಲೆಗಳು ಮುಚ್ಚುವುದಕ್ಕಿಂತ ಅಭಿವೃದ್ಧಿಗೆ ಆದ್ಯತೆ ನೀಡುವ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಪುರಸಭೆಗೆ ದತ್ತು ನೀಡಲಾಗುತ್ತಿದೆ. ಪುರಸಭೆ ಆಡಳಿತ ಮಂಡಳಿ ಶಾಲೆಗೆ ಬೇಕಾಗಿರುವ ಸವಲತ್ತು ನೀಡಲಿದೆ ಎಂದರು.ಸಮಾರಂಭ ಉದ್ಘಾಟಿಸಿದ ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು ಮಾತನಾಡಿ, ಕಡೂರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಪಡೆದು ಅಧ್ಯಕ್ಷರಾದ ಭಂಡಾರಿ ಶ್ರೀನಿವಾಸ್‌ ಅಭಿವೃದ್ಧಿ ಕಾರ್ಯದ ಜೊತೆ ಸರ್ಕಾರಿ ಶಾಲೆ ದತ್ತು ಪಡೆದು ಬಡ ಮಕ್ಕಳ ಭವಿಷ್ಯಕ್ಕೆ ಪುರಸಭೆಯಿಂದ ನಿರ್ವಹಿಸುವ ಉತ್ತಮ ಕಾರ್ಯಕ್ಕೆ ಎಲ್ಲರೂ ಶುಭ ಹಾರೈಸುತ್ತೇವೆ ಎಂದರು.

ಪುರಸಭೆ ಸದಸ್ಯ ಸಯ್ಯದ್ ಯಾಸೀನ್ ಮಾತನಾಡಿ, ಭಂಡಾರಿ ಶ್ರೀನಿವಾಸ್ ಪಟ್ಟಣದ ಅಭಿವೃದ್ಧಿ ಕನಸು ಕಂಡು ಎಲ್ಲ ರೀತಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಉತ್ತಮ ಕಾರ್ಯಗಳಿಗೆ ಎಲ್ಲ ಸದಸ್ಯರು ಬೆಂಬಲ ನೀಡುತ್ತಿದ್ದೇವೆ ಎಂದರು. 6ನೇ ವಾರ್ಡಿನ ಮತ್ತೋರ್ವ ಸದಸ್ಯೆ ಪದ್ಮಾ ಶಂಕರ್ ಮಾತನಾಡಿ, ನಾನು ಸಹಇದೇ ಶಾಲೆಯಲ್ಲಿ ಓದಿದ್ದು, ಅದರೆ ಹಿಂದೆ ಈ ಶಾಲೆಯಲ್ಲಿ ನೀರು,ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸವಲತ್ತುಗಳಿರಲಿಲ್ಲ. ಇಲ್ಲಿ ಓದಿರುವ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.ಮುಖ್ಯಾಧಿಕಾರಿ ಮಂಜುನಾಥ್ ಕೆ.ಎಸ್. ಮಾತನಾಡಿದರು. ಪುರಸಭೆ ಸದಸ್ಯರಾದ ಗೋವಿಂದರಾಜು, ಮರುಗುದ್ದಿ ಮನು, ಸುಧಾ ಉಮೇಶ್, ವಿಜಯಾ ಚಿನ್ನರಾಜು, ಶಾಲೆ ಮುಖ್ಯೋಪಾದ್ಯಾಯಿನಿ ಛಾಯಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಪುರಸಭೆ ಸಿಬ್ಬಂದಿ ತಿಮ್ಮಯ್ಯ, ಜಗದೀಶ್, ಮಹಾಂತೇಶ್,ವಾಸು, ಲಕ್ಷೀಶ್, ಶಿಕ್ಷಕರು,ಮಕ್ಕಳು, ಅಂಬೇಡ್ಕರ್ ನಗರದ ನಿವಾಸಿಗಳು ಹಾಜರಿದ್ದರು.

27ಕೆಕೆಡಿಯುು1. ಕಡೂರು ಪಟ್ಟಣದ ಬಿ ಆರ್ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಶಾಲೆಯ ದತ್ತು ನೀಡಿಕೆ ಕಾರ್ಯಕ್ರಮ ನಡೆಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ